ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಲು ಲೋಕಾಯುಕ್ತ ಪೊಲೀಸರು ಮುಂದಾಗಿರುವುದಕ್ಕೆ ಬಿಜೆಪಿ ತೀವ್ರವಾಗಿ ಟೀಕಿಸಿದೆ.
ಬೆಂಗಳೂರು : ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಲು ಲೋಕಾಯುಕ್ತ ಪೊಲೀಸರು ಮುಂದಾಗಿರುವುದಕ್ಕೆ ಬಿಜೆಪಿ ತೀವ್ರವಾಗಿ ಟೀಕಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಲೋಕಾಯುಕ್ತ ಪೊಲೀಸರ ನಡೆಯನ್ನು ಖಂಡಿಸಿದ್ದಾರೆ. ಅಂತೆಯೇ ಸುದ್ದಿಗಾರರ ಜತೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಮುಡಾ ಹಗರಣ ವಿಚಾರದಲ್ಲಿ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಬಿ.ವೈ.ವಿಜಯೇಂದ್ರ ಅವರು, ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿಯವರಿಗೆ ಕ್ಲೀನ್ ಚಿಟ್ ನೀಡುವುದು ನಿರೀಕ್ಷಿತವೇ ಆಗಿದ್ದು, ತಾವೇ ನೇಮಿಸಲ್ಪಡುವ ಅಧಿಕಾರಿಗಳಿಂದಲೇ ನಡೆಸಲ್ಪಡುವ ತನಿಖೆಯಲ್ಲಿ ಮುಖ್ಯಮಂತ್ರಿ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವೇ? ಮೊದಲಿನಿಂದಲೂ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದು, ಸಿಬಿಐ ತನಿಖೆಯಿಂದ ಮಾತ್ರ ಮುಡಾ ಹಗರಣದಲ್ಲಿ ನ್ಯಾಯ ಸಿಗಲು ಸಾಧ್ಯ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರ 14 ನಿವೇಶನಗಳು, ಲೂಟಿಯಾಗಿರುವ ಸಾವಿರಾರು ನಿವೇಶನಗಳನ್ನು ಹಾಗೂ ಲೂಟಿ ಮಾಡಿದ ಭ್ರಷ್ಟ ಅಧಿಕಾರಿಗಳು, ಪ್ರಭಾವಿಗಳನ್ನು ರಕ್ಷಿಸಲಾಗುತ್ತಿದೆ. ರಾಜ್ಯ ಕಂಡು ಕೇಳರಿಯದ ಬಹುದೊಡ್ಡ ಭ್ರಷ್ಟ ಹಗರಣದ ಪಾರದರ್ಶಕ ತನಿಖೆ ನಡೆಯಬೇಕೆಂದರೆ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದಿಂದ ಅಂತರ ಕಾಯ್ದುಕೊಂಡ ತನಿಖಾ ಸಂಸ್ಥೆಯಿಂದ ಮಾತ್ರ ಸಾಧ್ಯ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮೊದಲ ಆರೋಪಿ ಸ್ಥಾನದಲ್ಲಿ ಮುಖ್ಯಮಂತ್ರಿಯೊಬ್ಬರು ತನಿಖೆ ಎದುರಿಸಿದ ಪ್ರಥಮ ಪ್ರಕರಣ ಇದಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಲೋಕಾಯುಕ್ತ ನೀಡಿರುವ ಕ್ಲೀನ್ ಚಿಟ್ ದುರದೃಷ್ಟಕರ ಎಂದು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಪೂರ್ವ ನಿಯೋಜಿತವಾಗಿ ತನಿಖಾ ವರದಿ ರೂಪಿಸಲಾಗಿದೆ. ಆದರೆ ಬಿಜೆಪಿಯಿಂದ ಹೋರಾಟ ಮುಂದುವರಿಯಲಿದೆ. ಸಿದ್ದರಾಮಯ್ಯ ಹಾಗೂ ಕುಟುಂಬದವರು ನಡೆಸಿದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮಾಡಿದೆ. ಜೊತೆಗೆ ಅಧಿವೇಶನದಲ್ಲಿ ಚರ್ಚಿಸಲಾಗಿದೆ. ಈ ಹಗರಣದಲ್ಲಿ ತಪ್ಪಿಲ್ಲ ಎಂದಾದರೆ ಸಿದ್ದರಾಮಯ್ಯ ನಿವೇಶನಗಳನ್ನು ಯಾಕೆ ಮರಳಿಸಬೇಕಿತ್ತು? ಎಂದು ವಾಗ್ದಾಳಿ ನಡೆಸಿದರು.
ಹಗರಣದಲ್ಲಿ ಯಾರದ್ದೂ ತಪ್ಪಿಲ್ಲ, ಸ್ವಯಂಚಾಲಿತವಾಗಿ ಭೂ ಪರಿವರ್ತನೆಯಾಗಿದೆ. ಬಡಾವಣೆ ಮಾಡಿರುವುದೇ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ. ಇದರಲ್ಲಿ ಅಧಿಕಾರಿಗಳದ್ದೇ ತಪ್ಪು ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಲಿದೆ. ಈ ಪ್ರಕರಣ ದಾಖಲಾಗುವ ಮುನ್ನವೇ ಲೋಕಾಯುಕ್ತದಲ್ಲಿ ಆಯಕಟ್ಟಿನ ಜಾಗಕ್ಕೆ ನಿರ್ದಿಷ್ಟ ಅಧಿಕಾರಿಗಳು ಬಂದು ಕೂತಿದ್ದಾರೆ. ಇದು ಪೂರ್ವ ನಿಯೋಜಿತವಾಗಿ ತಯಾರಿಸಿದ ವರದಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಾಯುಕ್ತ ಪೊಲೀಸರು ಬಿ ವರದಿ ಸಲ್ಲಿಸಿದರೆ ಅದನ್ನು ನ್ಯಾಯಾಲಯ ಸ್ವೀಕರಿಸಬೇಕೆಂದಿಲ್ಲ. ನ್ಯಾಯಾಲಯವು ತಿರಸ್ಕರಿಸಿದರೆ ಮತ್ತೆ ತನಿಖೆ ನಡೆಯಲಿದೆ. ನ್ಯಾಯಾಂಗದ ಬಗ್ಗೆ ನಮಗೆ ವಿಶ್ವಾಸವಿದೆ. ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿ ಎಂದು ನೂರಾರು ಬಾರಿ ಹೇಳಿದ್ದಾರೆ. ಅದೇ ರೀತಿ ಜಾತಿ ವರದಿ ಬಿಡುಗಡೆ ಬಗ್ಗೆಯೂ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸುಳ್ಳಿನ ಸರದಾರರಾದರೆ, ಸಿದ್ದರಾಮಯ್ಯ ಅವರ ತಾತನಂತೆ ಸುಳ್ಳು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.