ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ವಿವಾದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರಾಜಕೀಯ ಹಗೆತನವೇ ಕಾರಣ
ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ವಿವಾದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರಾಜಕೀಯ ಹಗೆತನವೇ ಕಾರಣ ಎಂದು ಕಟುವಾಗಿ ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರದಿಂದ ಈ ವಿವಾದ ಸೃಷ್ಟಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಡಾದಿಂದ ತಮ್ಮ ಪತ್ನಿಗೆ ನಿವೇಶನ ಹಂಚಿಕೆ ಮಾಡಿರುವುದನ್ನು ಹಗರಣವಾಗಿ ಬಿಂಬಿಸುತ್ತಿರುವ ವಿರೋಧ ಪಕ್ಷಗಳ ನಡೆಯ ವಿರುದ್ಧ ಹಾಗೂ ಇಡೀ ಪ್ರಕರಣದ ವಿವರವನ್ನು ನೀಡಲು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಹಾಗೂ ನಾನು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಅವರಿಗೆ ನಾಚಿಕೆ ಮಾನ-ಮರ್ಯಾದೆಯಿಲ್ಲ.1983ರಲ್ಲೇ ನಾನು ಶಾಸಕ, 1984ರಲ್ಲಿ ಸಚಿವನಾದವನು. 40 ವರ್ಷಕ್ಕಿಂತ ಹೆಚ್ಚಿನ ಕಾಲ ರಾಜಕೀಯ ಜೀವನ ನಡೆಸಿದ್ದೇನೆ. ಈವರೆಗೆ ನನ್ನ ಮೇಲೆ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಿದ್ದಂತೆ. ಆದರೆ, ಬಿಜೆಪಿ-ಜೆಡಿಎಸ್ ಸೇಡಿನ ರಾಜಕಾರಣ ಮಾಡುವ ಉದ್ದೇಶದಿಂದ ಮುಡಾ ನಿವೇಶನ ಪಡೆಯುವಲ್ಲಿ ನಾನು ಹಾಗೂ ನನ್ನ ಕುಟುಂಬದವರು ತಪ್ಪು ಮಾಡಿದ್ದಾರೆ ಎಂದು ಬಿಂಬಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಪಿಟಿಸಿಎಲ್ ಕಾಯ್ದೆ ಅನ್ವಯವಾಗುವುದಿಲ್ಲ:
ಮೈಸೂರಿನ ಕೆಸರೆ ಗ್ರಾಮದಲ್ಲಿ ನನ್ನ ಪತ್ನಿ ಪಾವರ್ತಿಗೆ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ 3.16 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಅದಕ್ಕೂ ಮುನ್ನ ದಲಿತ ಸಮುದಾಯಕ್ಕೆ ಸೇರಿದ ದೇವರಾಜು ಎಂಬುವರಿಗೆ ಆ ಭೂಮಿ ಸೇರಿತ್ತು. ಆದರೆ, ಆ ಭೂಮಿ ದೇವರಾಜು ಅವರ ಪಿತ್ರಾರ್ಜಿತ ಆಸ್ತಿಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಕ್ಕೆ ಸೇರಿದವರಿಗೆ ಸರ್ಕಾರದಿಂದ ಮಂಜೂರಾದ ಭೂಮಿಯನ್ನು ಬೇರೆಯವರು ಖರೀದಿಸಿದ್ದರೆ ಮಾತ್ರ ಪಿಟಿಸಿಎಲ್ ಕಾಯ್ದೆ ಉಲ್ಲಂಘನೆಯಾಗುತ್ತದೆ. ಆದರೆ, ಬಿಜೆಪಿ ಮತ್ತು ಜೆಡಿಎಸ್ ನಾಯಕರು ದಲಿತ ಸಮುದಾಯಕ್ಕೆ ಸೇರಿದವರಿಂದ ಭೂಮಿ ಪಡೆದಿರುವುದು ಪಿಟಿಸಿಎಲ್ ಕಾಯ್ದೆ ಉಲ್ಲಂಘನೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಮುಡಾದಿಂದ ಬಡಾವಣೆ ಅಭಿವೃದ್ಧಿ ವೇಳೆ ನನ್ನ ಪತ್ನಿ ಪಾರ್ವತಿ ಅವರಿಗೆ ಸೇರಿದ 3.16 ಎಕರೆ ಭೂಮಿಯನ್ನು ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡಿದ್ದರು. ಅದು ಗೊತ್ತಾದಾಗ 2014ರ ಜೂ.23ರಂದು ಪಾರ್ವತಿ ಮುಡಾಗೆ ಅರ್ಜಿ ಸಲ್ಲಿಸಿದ್ದರು. ಆದಾದ ನಂತರ ನನ್ನ ಗಮನಕ್ಕೆ ತಂದಿದ್ದರು. ಆದರೆ, ನಾನು ಆಗ ಮುಖ್ಯಮಂತ್ರಿಯಾಗಿದ್ದ ಕಾರಣ ಪರಿಹಾರ ಭೂಮಿ ಹಂಚಿಕೆ ಮಾಡದಂತೆ ಮುಡಾಕ್ಕೆ ತಿಳಿಸಿದ್ದೆ. ಹಾಗೂ, ನನ್ನ ಪತ್ನಿಗೂ ಅದನ್ನು ಹೇಳಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು.
ಸ್ವಾಧೀನದ ಭೂಮಿ ಹಂಚಿಕೆಯಾಗಿತ್ತು
ಅದಾದ ನಂತರ 2021ರ ನವೆಂಬರ್ 25ರಂದು ಪರಿಹಾರಕ್ಕಾಗಿ ಪಾರ್ವತಿ ಅವರು ಮತ್ತೊಮ್ಮೆ ಮುಡಾಗೆ ಅರ್ಜಿ ಸಲ್ಲಿಸಿದ್ದರು. ಅದಾಗಲೇ ಮುಡಾ, ಸ್ವಾಧೀನಪಡಿಸಿಕೊಂಡ ಕೆಸರೆ ಗ್ರಾಮದಲ್ಲಿನ ಭೂಮಿಯಲ್ಲಿ ಉದ್ಯಾನ, ನಿವೇಶನಗಳನ್ನು ನಿರ್ಮಿಸಿ ಹಂಚಿಕೆ ಮಾಡಿತ್ತು. ಹೀಗಾಗಿ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿಯಷ್ಟು ಭೂಮಿಯನ್ನು ಮುಡಾ ಹಂಚಿಕೆ ಮಾಡಿತು. ವಿಜಯನಗರದಲ್ಲೇ ನಿವೇಶನ ನೀಡುವಂತೆ ನಾನು ಯಾರಿಗೂ ಒತ್ತಡ ಹಾಕಿರಲಿಲ್ಲ. ಅಲ್ಲದೆ, 1.48 ಲಕ್ಷ ಚದರ ಅಡಿ ಭೂಮಿ ಸ್ವಾಧೀನಪಡಿಸಿಕೊಂಡು 38,284 ಚದರ ಅಡಿಗಳಷ್ಟು ಭೂಮಿ ನೀಡಲಾಗಿದ್ದರೂ ನಾವು ಯಾರನ್ನೂ ಪ್ರಶ್ನಿಸಿರಲಿಲ್ಲ ಎಂದು ಸಿಎಂ ವಿವರಿಸಿದರು.
ಬಿಜೆಪಿ ಶಾಸಕರಿಂದಲೇ ಹಂಚಿಕೆ:
ಮುಡಾದಿಂದ ನಿವೇಶನ ಹಂಚಿಕೆಗೆ ಅನುಮೋದನೆ ನೀಡುವ ಸಭೆಯಲ್ಲಿ ಬಿಜೆಪಿ ಶಾಸಕರಾದ ರಾಮದಾಸ್, ನಾಗೇಂದ್ರ, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಉಪಸ್ಥಿತರಿದ್ದು, ಅವರೇ ಅನುಮೋದನೆ ನೀಡಿದ್ದಾರೆ. ನನ್ನ ಪತ್ನಿ ಹೆಸರಿನಲ್ಲಷ್ಟೇ ಅಲ್ಲದೆ ಇನ್ನೂ 909 ನಿವೇಶನಗಳನ್ನು 50:50ರ ಅನುಪಾತದಲ್ಲಿ ಹಂಚಿಕೆ ಮಾಡಲಾಗಿದೆ. ಬಿಜೆಪಿ-ಜೆಡಿಎಸ್ ಶಾಸಕರೇ ಹಂಚಿಕೆ ಮಾಡಿ ಇದೀಗ ಅಕ್ರಮ ಎಂದು ಹೇಳುತ್ತಿರುವುದು ರಾಜಕೀಯ ಹಗೆತನವಲ್ಲದೇ ಬೇರೇನೂ ಅಲ್ಲ ಎಂದು ಸಿಎಂ ಆರೋಪಿಸಿದರು.