;Resize=(412,232))
ಬೆಂಗಳೂರು :ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಹಗರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ ಕೈಗೊಳ್ಳಲು ಪಕ್ಷದ ಹೈಕಮಾಂಡ್ ಒಪ್ಪಿಗೆ ನೀಡಿದೆ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಪಾದಯಾತ್ರೆ ಮಾಡುವ ಕುರಿತು ಹಲವು ಮಂದಿ ಒತ್ತಾಯ ಮಾಡಿದ್ದಾರೆ. ಹೈಕಮಾಂಡ್ ಮುಂದೆ ಪಾದಯಾತ್ರೆ ಮಾಡುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಹೈಕಮಾಂಡ್ ಸಹ ಒಪ್ಪಿಗೆ ನೀಡಿದೆ. ಬಹುತೇಕ ನವೆಂಬರ್‌ನಲ್ಲಿ ಪಾದಯಾತ್ರೆ ನಡೆ ಸಲಾಗುವುದು ಎಂದರು.
ಪ್ರಶ್ನೆ ಯೊಂದಕ್ಕೆ ಉತ್ತರಿಸಿದ ಅವರು, ಪಾದಯಾತ್ರೆ ಬಗ್ಗೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಹಿತಿ ನೀಡಲಿದ್ದಾರೆ. ವಿಸ್ತ್ರತವಾಗಿ ಚರ್ಚಿಸಿ ಸಿದ್ದತೆ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು. ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಛಲವಾದಿ, ಇದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪಾದಯಾತ್ರೆ ಅಲ್ಲ. ಎಲ್ಲಾ ಬಿಜೆಪಿ ನಾಯಕರು ಸೇರಿ ಪಾದಯಾತ್ರೆ ಮಾಡುತ್ತೇವೆ ಎಂದು ಸಷ್ಟಪಡಿಸಿದರು.
ಮುಡಾ ಹಗರಣ ಮುಂದಿಟ್ಟುಕೊಂಡು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡ ಮಾದರಿಯಲ್ಲೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮುಂದಿಟ್ಟುಕೊಂಡು ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಬೇಕು ಎಂಬ ಬೇಡಿಕೆಯನ್ನು ಪಕ್ಷದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ್ ಜಾರಕಿಹೊಳಿ ಮತ್ತಿತರರು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಅಲ್ಲದೆ, ಈ ಸಂಬಂಧ ಪ್ರತ್ಯೇಕ ಸಭೆಯನ್ನೂ ನಡೆಸಿದ್ದರು.