ಬೂತ್ ಮಟ್ಟದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು : ಎಂ.ಮಲ್ಲೇಶ್ ಬಾಬು

KannadaprabhaNewsNetwork | Updated : Apr 09 2024, 03:42 AM IST

ಸಾರಾಂಶ

ಈಗಾಗಲೆ ರಾಜ್ಯದೆಲ್ಲೆಡೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಕೆಲ ಕಾಂಗ್ರೆಸ್‌ನವರು ನಮ್ಮ ನಮ್ಮಲ್ಲೇ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಜೆಡಿಎಸ್‌ ಅಭ್ಯರ್ಥಿಯ ಆರೋಪ

 ಕೋಲಾರ :  ಈ ಭಾರಿ ನಡೆಯಲಿರುವ ಕೋಲಾರ ಲೋಕಸಭಾ ಚುನಾವಣೆ ಅತ್ಯಂತ ಶಾಂತಿಯಿಂದ ನಡೆಯಬೇಕು, ಶೇಕಡಾವಾರು ಮತದಾನ ನಡೆಯಬೇಕು ಅದಕ್ಕಾಗಿ ಗ್ರಾಮಗಳಲ್ಲಿ ಬೂತ್ ಮಟ್ಟದ ಮುಖಂಡರು ಶ್ರದ್ಧೆಯಿಂದ ಕೆಲಸ ಮಾಡಬೇಕಾಗುತ್ತದೆ, ಗ್ರಾಮೀಣ ಭಾಗದಲ್ಲಿ ಯಾವುದೇ ಗೊಂದಲಗಳಿಗೂ ಅವಕಾಶ ಕೊಡದೆ ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗಿ ಈ ಭಾರಿಯ ಚುನಾವಣೆ ನಡೆಸಬೇಕು ಎಂದು ಕೋಲಾರ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಮುಖಂಡರಲ್ಲಿ ಮನವಿ ಮಾಡಿದರು.

ತಾಲೂಕಿನ ಕುಂಬಾರಹಳ್ಳಿ ತಮ್ಮ ನಿವಾಸದಲ್ಲಿ ಮುಖಂಡರ ಸಭೆಯಲ್ಲಿ ಮಾತನಾಡಿ, ಲೋಕಸಭೆ ಚುನಾವಣೆ ದೇಶದೆಲ್ಲೆಡೆ ನಡೆಯುತ್ತಿದ್ದು ದೇಶಕ್ಕೆ ನಡೆಯುತ್ತಿರುವ ಚುನಾವಣೆ ಇದಾಗಿದೆ, ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆ ಶಾಂತಿಯುತ ಮತದಾನದಲ್ಲಿ ಮತ್ತು ಶೇಕಡಾವಾರು ಮತದಾನದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿ ಚುನಾವಣೆ ನಡೆಯುವಂತಾಗಬೇಕು ಎಂದರು.

ಮೋದಿ, ಎಚ್ಡಿಕೆ ಯೋಜನೆಗಳ ಪ್ರಚಾರ

ಈ ಚುನಾವಣೆಯಲ್ಲಿ ಗ್ರಾಮಗಳಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಕೊಡದೆ, ಪ್ರಧಾನ ಮಂತ್ರಿ ಮೋದಿ ಹತ್ತು ವರ್ಷದ ಅವಧಿಯ ಆಡಳಿತದಲ್ಲಿ ಕೊಟ್ಟಂತಹ ಜನಪರ ಯೋಜನೆಗಳ ಬಗ್ಗೆ, ಮಾಜಿ ಪ್ರಧಾನ ಮಂತ್ರಿ ದೇವೇಗೌಡರ ಅಧಿಕಾರ ಅವಧಿಯಲ್ಲಿ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಕೊಟ್ಟಂತಹ ನೀರಾವರಿ ಯೋಜನೆಗಳು ಹಾಗು ಕುಮಾರಣ್ಣ ಸಿಎಂ ಆಗಿದ್ದಾಗ ಕೊಟ್ಟಂತಹ ಜನಪ್ರಿಯ ಯೋಜನೆಗಳನ್ನು ಮುಂದಿಟ್ಟು ಕೊಂಡು ಮತಯಾಚನೆ ಮಾಡಬೇಕಾಗುತ್ತದೆ ಎಂದು ಹೇಳಿದರು. ಈಗಾಗಲೆ ರಾಜ್ಯದೆಲ್ಲೆಡೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಕೆಲ ಕಾಂಗ್ರೆಸ್‌ನವರು ನಮ್ಮ ನಮ್ಮಲ್ಲೇ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ನಮ್ಮ ಎರಡೂ ಪಕ್ಷಗಳ ಕಾರ್ಯಕರ್ತರು ವಿರೋಧಿಗಳ ಯಾವುದೇ ಗೊಂದಲಗಳಿಗೆ ಅವಕಾಶ ಕೊಡದೆ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ಕರೆ ನೀಡಿದರು.ಮೋದಿ ಮತ್ತೊಮ್ಮೆ ಪಿಎಂ ಆಗಬೇಕು

ಪ್ರಧಾನ ಮಂತ್ರಿ ಮೋದಿ ಕುಮಾರಣ್ಣರ ಮೇಲೆ ನಂಬಿಕೆಯಿಟ್ಟು ಕೋಲಾರ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದಾರೆ ಅವರ ನಂಬಿಕೆಗೆ ಧಕ್ಕೆ ಬರದಂತೆ ಜೆಡಿಎಸ್ ಕಾರ್ಯಕರ್ತರು ಕೆಲಸ ಮಾಡಿದರೆ ಪ್ರಧಾನ ಮಂತ್ರಿ ಮೋದಿರನ್ನು ಮತ್ತೊಮ್ಮೆ ಪ್ರಧಾನಿ ಮಂತ್ರಿಯನ್ನಾಗಿ ಮಾಡಲು ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಬೇಕಾಗುತ್ತದೆ, ನಾನು ತೆನೆಹೊತ್ತ ರೈತ ಮಹಿಳೆಯ ಚಿಹ್ನೆಯ ಮೇಲೆ ಚುನಾವಣೆ ಎದುರಿಸುತ್ತಿರಬಹುದು, ಆದರೆ ನಮ್ಮ ಗುರಿ ಮಾತ್ರ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿರನ್ನು ಪ್ರಧಾನಮಂತ್ರಿ ಮಾಡುವುದು ಅದಕ್ಕಾಗಿ ಕೋಲಾರ ಲೋಕಸಭಾ ಕ್ಷೇತ್ರದ ಪ್ರಜ್ಞಾವಂತ ಮತದಾರರು ಯೋಚಿಸಿ ಮತದಾನ ಮಾಡಬೇಕಿದೆ ಎಂದರು.

Share this article