ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಕ್ರಿಕೆಟ್ ಮೈದಾನದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರವಾಗಿ ಮತಯಾಚನೆ ಮಾಡಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ‘ಮಂಗಳಸೂತ್ರದ ಮಹತ್ವದ ಬಗ್ಗೆ ಅರಿವಿಲ್ಲದವರು ಅಸಂಬದ್ಧವಾಗಿ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಿತ್ತುಕೊಳ್ಳುತ್ತದೆ ಎಂದು ಹೇಳುತ್ತಾರೆ. 60ಕ್ಕೂ ಹೆಚ್ಚಿನ ವರ್ಷ ದೇಶವನ್ನಾಳಿದ ಕಾಂಗ್ರೆಸ್ ಯಾವತ್ತೂ ಮಹಿಳೆಯರ ಮಂಗಳಸೂತ್ರ ಕೀಳುವ ಕೆಲಸ ಮಾಡಿಲ್ಲ’ ಎಂದರು.
‘ನನ್ನ ಅಜ್ಜಿ ಇಂದಿರಾಗಾಂಧಿ ಅವರು ಯುದ್ಧದ ಸಂದರ್ಭದಲ್ಲಿ ತಮ್ಮ ಚಿನ್ನವನ್ನೆಲ್ಲ ದೇಶಕ್ಕೆ ನೀಡಿದವರು. ನನ್ನ ತಾಯಿಯ ಮಂಗಳಸೂತ್ರ ದೇಶಕ್ಕೆ ಸಮರ್ಪಿಸಲಾಗಿದೆ. ಮಹಿಳೆಯರ ಸೇವೆ, ಸಂಘರ್ಷಗಳ ಬಗ್ಗೆ ಅರಿವಿಲ್ಲದ ನರೇಂದ್ರ ಮೋದಿ ಅವರು ಮಂಗಳಸೂತ್ರದ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ’ ಎಂದು ಹೇಳಿದರು.‘ನಮ್ಮ ದೇಶದ ಪರಂಪರೆಯು ಮಹಿಳೆಯರ ಸೇವೆ, ಸಂಘರ್ಷದ ಮೇಲೆ ನಿಂತಿದೆ. ನೋಟ್‌ಬ್ಯಾನ್ ಮಾಡಿದಾಗ ಮಹಿಳೆಯರು ಕೂಡಿಟ್ಟಿದ್ದ ಹಣವನ್ನೆಲ್ಲ ಕಿತ್ತುಕೊಳ್ಳುವಾಗ ನರೇಂದ್ರ ಮೋದಿ ಅವರಿಗೆ ಮಂಗಳಸೂತ್ರದ ನೆನಪಾಗಲಿಲ್ಲ. ಲಾಕ್‌ಡೌನ್ ಮಾಡಿ ಕಾರ್ಮಿಕರು ಮತ್ತು ಕುಟುಂಬ ಬರಿಗಾಲಲ್ಲಿ ತಮ್ಮ ಊರಿಗೆ ಸಾಗುವಾಗ ಮಂಗಳಸೂತ್ರದ ನೆನಪಾಗಲಿಲ್ಲ. ಕೃಷಿಕರು ಆಂದೋಲನ ಮಾಡಿದಾಗ 600ಕ್ಕೂ ಹೆಚ್ಚಿನ ಕೃಷಿಕರು ಸಾವನ್ನಪ್ಪಿದರು. ಅವರ ಪತ್ನಿಯರ ಮಂಗಳಸೂತ್ರದ ಬಗ್ಗೆ ಯೋಚಿಸಲಿಲ್ಲ. ಮಣಿಪುರದಲ್ಲಿ ಯೋಧನ ಪತ್ನಿಯನ್ನು ವಿವಸ್ತ್ರಗೊಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡುವಾಗ ನರೇಂದ್ರ ಮೋದಿ ಅವರಿಗೆ ಆಕೆಯ ಮಂಗಳಸೂತ್ರದ ಬಗ್ಗೆ ಯೋಚನೆ ಬರಲಿಲ್ಲ. ಆದರೀಗ, ಚುನಾವಣೆಗಾಗಿ ಮಂಗಳಸೂತ್ರದ ನೆನಪಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್ ಅಹಮದ್‌ಖಾನ್, ಕೆ.ಜೆ. ಜಾರ್ಜ್, ಶಾಸಕರಾದ ಪ್ರಿಯಕೃಷ್ಣ, ಎ.ಸಿ. ಶ್ರೀನಿವಾಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಪ್ರಮುಖರಾದ ಉಗ್ರಪ್ಪ, ಉಮಾಪತಿ ಗೌಡ, ವಿ.ಆರ್. ಸುದರ್ಶನ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್, ತಮಿಳುನಾಡು ಶಾಸಕ ಟಿ.ಆರ್. ರಾಮಚಂದ್ರ ಇತರರಿದ್ದರು.ಅಭಿವೃದ್ಧಿ ವಿಚಾರವಾಗಿ ಚುನಾವಣೆ ಎದುರಿಸಿ: ಪ್ರಿಯಾಂಕಾ
ಚುನಾವಣಾ ಬಾಂಡ್ ವಸೂಲಿ ಸ್ಕೀಂ
ಸತ್ಯ-ಅಧಿಕಾರ ದಾಹದ ನಡುವಿನ ಚುನಾವಣೆ