ಮೈಸೂರು ಜಿಲ್ಲೆಯ ಇಬ್ಬರು ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿಗಳು

KannadaprabhaNewsNetwork |  
Published : Jan 07, 2026, 01:15 AM ISTUpdated : Jan 07, 2026, 04:29 AM IST
Siddaramaiah

ಸಾರಾಂಶ

ಪರಿವರ್ತನೆಯ ಹರಿಕಾರ’, ‘ಸೋಲಿಲ್ಲದ ಸರದಾರ’ ಡಿ.ದೇವರಾಜ ಅರಸರು ಹುಣಸೂರಿನಿಂದ ಆರು ಬಾರಿ ಶಾಸಕರು, 1962 ರಲ್ಲಿ ಅವಿರೋಧ ಆಯ್ಕೆಯ ಗೌರವ, ಎರಡು ಬಾರಿ ಮುಖ್ಯಮಂತ್ರಿ, ಒಮ್ಮೆ ವಿರೋಧ ಪಕ್ಷದ ನಾಯಕ. 1973 ನ.1 ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದವರು.

ಅಂಶಿ ಪ್ರಸನಕುಮಾರ್‌

 ಮೈಸೂರು :  ಪರಿವರ್ತನೆಯ ಹರಿಕಾರ’, ‘ಸೋಲಿಲ್ಲದ ಸರದಾರ’ ಡಿ.ದೇವರಾಜ ಅರಸರು ಹುಣಸೂರಿನಿಂದ ಆರು ಬಾರಿ ಶಾಸಕರು, 1962 ರಲ್ಲಿ ಅವಿರೋಧ ಆಯ್ಕೆಯ ಗೌರವ, ಎರಡು ಬಾರಿ ಮುಖ್ಯಮಂತ್ರಿ, ಒಮ್ಮೆ ವಿರೋಧ ಪಕ್ಷದ ನಾಯಕ. 1973 ನ.1 ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದವರು.

‘ಉಳುವವರೇ ಭೂಮಿಯ ಒಡೆಯ’ ಘೋಷಣೆ ಮೂಲಕ ಗೇಣಿದಾರರ ಬದುಕಿಗೆ ಭದ್ರ ನೆಲೆ ಕಲ್ಪಿಸಿದ ಅರಸರು ತನ್ಮೂಲಕ ಭೂವಂಚಿತ ಸಮುದಾಯವನ್ನು ಭೂಒಡೆಯರನ್ನಾಗಿಸಿದ್ದರು. ಜೀತಗಾರಿಕೆಯಿಂದ ಶೋಷಣೆಗೊಳಗಾಗಿದ್ದ ಸಹಸ್ರಾರು ಮಂದಿಯನ್ನು ಜೀತ ನಿರ್ಮೂಲನಾ ಕಾಯ್ದೆ ಮೂಲಕ ಗುಲಾಮಗಿರಿಯಿಂದ ಮುಕ್ತವಾಗಿಸಿದರು. ಸೂರಿಲ್ಲದವರಿಗೆ ಸೂರು, ಬೆಳಕಿಲ್ಲದವರಿಗೆ ವಿದ್ಯುತ್ ದೀಪ, ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ವರ್ಗಗಳ ವಿದ್ಯಾರ್ಥಿ ನಿಲಯಗಳನ್ನು ತೆರೆದರು. ತಲೆಯ ಮೇಲೆ ಮಲ ಹೊರುವ ಪದ್ಧತಿ, ಜೀತ ಪದ್ಧತಿ ನಿಷೇಧಿಸಿದರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಅಹಿಂದ ವರ್ಗಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿದವರು. ಅಂಬೇಡ್ಕರ್, ಬುದ್ಧ, ಬಸವ, ಲೋಹಿಯಾ ಮೊದಲಾದ ದಾರ್ಶನಿಕರು ಕಟ್ಟಿ ಬೆಳೆಸಿದ ಸಮಸಮಾಜದ ಆಶಯಗಳಿಗೆ ಪೂರಕವಾಗಿದ್ದರು. ಆಡಳಿತದಲ್ಲಿ ಕನ್ನಡಕ್ಕೆ ಆದ್ಯತೆ ನೀಡಿದ್ದರು.

ಅರಸು ಅವರ ಪೂರ್ವಿಕರು ಪಿರಿಯಾಪಟ್ಟಣ ತಾಲೂಕು ಬೆಟ್ಟದತುಂಗ ಗ್ರಾಮದವರು. ಆದರೆ ಅರಸು ಅವರು ನೆಲೆ ನಿಂತಿದ್ದು ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ.

ಸಿದ್ದರಾಮಯ್ಯ ಕೊಡುಗೆ ಮತ್ತು ಪರಿಣಾಮ:

ಮೈ,ಸೂರು ತಾಲೂಕು ಸಿದ್ದರಾಮಯ್ಯನಹುಂಡಿಯವರಾದ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಈ ಹಿಂದೆ ಎರಡು ಬಾರಿ ಡಿಸಿಎಂ, ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಒಂದು ಉಪ ಚುನಾವಣೆ ಸೇರಿದಂತೆ ಐದು ಬಾರಿ, ವರುಣ ಕ್ಷೇತ್ರದಿಂದ ಮೂರು ಬಾರಿ, ಬಾದಾಮಿಯಿಂದ ಒಂದು ಬಾರಿ ಒಟ್ಟು 9 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 16 ಬಾರಿ ಬಜೆಟ್‌ ಮಂಡಿಸಿರುವ ಹೆಗ್ಗಳಿಕೆಯೂ ಸಿದ್ದರಾಮಯ್ಯ ಅವರಿಗಿದೆ.

ಎರಡನೇ ಬಾರಿ ಮುಖ್ಯಮಂತ್ರಿಯಾದ ನಂತರ ಪ್ರತಿ ಬಿಪಿಎಲ್ ಕುಟುಂಬಕ್ಕೆ ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಅನ್ನಭಾಗ್ಯ, ಮಹಿಳೆಯರಿಗೆ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ, ಕುಟುಂಬದ ಯಜಮಾನಿಗೆ ಮಾಸಿಕ ಎರಡು ಸಾವಿರ ರೂ. ನೀಡುವ ಗೃಹಲಕ್ಷ್ಮಿ, 200 ಯೂನಿ''''''''ಟ್‌ವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವ ಗೃಹಜ್ಯೋತಿ, ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷದವರೆಗೆ ನೆರವು ನೀಡುವ ಯುವನಿಧಿ ಯೋಜನೆ ಜಾರಿ ಮಾಡಿದ್ದಾರೆ,

ವರುಣ ನಾಲೆ ಪೂರ್ಣಗೊಳಿಸಿದ ಹೆಗ್ಗಳಿಕೆ, ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ, ಜಯದೇವ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಮಿನಿ ವಿಧಾನಸೌಧಗಳು, ಮಹಾರಾಣಿ ವಾಣಿಜ್ಯ ಕಾಲೇಜಿಗೆ ಹೊಸ ಕಟ್ಟಡ, ಜಯನಗರದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ನಿರ್ಮಾಣ, ಚಾಮುಂಡಿಬೆಟ್ಟ ಪ್ರಾಧಿಕಾರ ರಚನೆ ಮೊದಲಾದವುಗಳನ್ನು ಮಾಡಿದ್ದಾರೆ. ಪ್ರಮುಖವಾಗಿ ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಆರ್ಥಿಕವಾಗಿ ಹಿಂದುಳಿದ ಸಾಕಷ್ಟು ಕುಟುಂಬಗಳಿಗೆ ಅನುಕೂಲವಾಗಿದೆ.

ಗ್ಯಾರಂಟಿ ಯೋಜನೆ ಪಡೆದ ವೈಯಕ್ತಿಕ ಲಾಭ, ಸಮಾಜದ ಒಳಿತಿಗೆ ಬಳಕೆ

ಗೃಹಲಕ್ಷ್ಮೀ ಯೋಜನೆ ಕುರಿತು ಫಲಾನುಭವಿಗಳ ಅಭಿಪ್ರಾಯ ಗೃಹಲಕ್ಷ್ಮೀ ಯೋಜನೆಯಿಂದ ನನ್ನ ಖಾತೆಗೆ ಪ್ರತಿ ತಿಂಗಳು ಜಮಾ ಆಗುವ 2000 ರೂ.ಗಳನ್ನು ಒಟ್ಟುಗೂಡಿಸಿ ಒಂದು ಹಸುವನ್ನು ಖರೀದಿಸಿ ಪ್ರತಿದಿನ ಹಾಲಿನ ವ್ಯಾಪಾರದಿಂದ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಲಾಗುತ್ತದೆ. ಸರ್ಕಾರದ ಈ ಯೋಜನೆಯಿಂದಾಗಿ ಹಾಗೂ ಇತರ ಕುಟುಂಬಸ್ಥರಿಗೂ ಆಶಾದಾಯಕವಾಗಿದೆ.

- ಸುಂದ್ರಮ್ಮ, ಹೆಡಿಯಾಲ

ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಪ್ರಾರಂಭವಾದ ನಂತರ ಪ್ರತಿ ತಿಂಗಳು ನನ್ನ ಖಾತೆಗೆ ಜಮಾ ಆಗುತ್ತಿರುವ 2000 ರೂ. ಹಣವನ್ನು ಪ್ರತಿ ತಿಂಗಳು ಉಳಿತಾಯ ಮಾಡಿ ಟೈಲರಿಂಗ್‌ ಯಂತ್ರ ಖರೀದಿಸಿದ್ದೇನೆ. ಇದರಿಂದಾಗಿ ನನ್ನ ಸ್ವಂತ ಉದ್ಯೋಗ ಪ್ರಾರಂಭಿಸಲು ಅನುಕೂಲವಾಗಿದೆ. ಅಕ್ಕ- ಪಕ್ಕದ ಮನೆಯ ವೃದ್ಧರಿಗೆ ಔಷಧೋಪಚಾರಕ್ಕೆ ವ್ಯಯ ಮಾಡಲಾಗುತ್ತಿದೆ.

- ಪ್ರೇಮಾ, ಹಗಿನವಾಳು

ಗೃಹಲಕ್ಷ್ಮೀ ಯೋಜನೆ ಪ್ರಾರಂಭವಾದ ನಂತರ ಪ್ರತಿ ತಿಂಗಳು ನನ್ನ ಖಾತೆಗೆ ಜಮಾ ಆಗುವ 2000 ರೂ. ಒಗ್ಗೂಡಿಸಿ 20 ಸಾವಿರ ರೂ.ಗಳಲ್ಲಿ 50 ರಿಂದ 60 ಕೋಳಿ ಮರಿಗಳನ್ನು ಖರೀದಿಸಿ ಸಾಕಾಣಿಕೆ ಮಾಡುತ್ತಿದ್ದೇನೆ ಹಾಗೂ ಕೋಳಿ ಮೆಟ್ಟೆಯನ್ನು 20 ರೂ.ಗಳಂತೆ ಮಾರಾಟ ಮಾಡಿ ಆದಾಯ ಪಡೆಯುತ್ತಿದ್ದೇನೆ. ಈ ಆದಾಯದಲ್ಲಿ ಕುರಿ ಮರಿಗಳನ್ನು ಕೂಡ ಖರೀದಿಸಿ ಆದಾಯೋತ್ಪನ್ನ ಚಟುವಟಿಕೆ ಕೈಗೊಂಡಿದ್ದೇನೆ.

- ಮಹದೇವಮ್ಮ, ಕೆಂಬಾಲು

ಅರಸು ಅವರ ಸ್ಮರಣೆಗೆ ಇರುವ ತಾಣಗಳು

- ಮೈಸೂರಿನಲ್ಲಿ ಡಿ.ದೇವರಾಜ ಅರಸು ರಸ್ತೆ

- ಮೈಸೂರಿನ ನೂತನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಮೆ

- ಹುಣಸೂರಿನಲ್ಲಿ ಪುತ್ಥಳಿ.

- ಕಲ್ಲಹಳ್ಳಿ ಹಾಗೂ ಬೆಟ್ಟದತುಂಗದಲ್ಲಿ ಸ್ಮಾರಕಗಳು

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕಟಕಟೆಗೆ ಜಿ ರಾಮ್‌ ಜಿ : ಕೇಂದ್ರ ವರ್ಸಸ್‌ ರಾಜ್ಯ ಖಾತ್ರಿ ಸಂಘರ್ಷ
ಅಧಿಕಾರಕ್ಕಾಗಿ ಅಪವಿತ್ರ ರಾಜಕೀಯ ಮೈತ್ರಿ - ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೈರಿಗಳ ಮಿಲನ