ಮೋದಿ ಅಧಿಕಾರಾವಧಿಯಲ್ಲಿ ಹೊಸ ಉತ್ಸಾಹ: ಬಿ.ವೈ.ವಿಜಯೇಂದ್ರ

Published : Jun 15, 2025, 09:04 AM IST
BY Vijayendra

ಸಾರಾಂಶ

ಕೇಂದ್ರದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಸತತ 3ನೇ ಬಾರಿಗೆ ಅಧಿಕಾರಕ್ಕೆ ಬಂದು 11 ವರ್ಷ ಪೂರೈಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ದೇಶದಲ್ಲಿ ಹೊಸ ಉತ್ಸಾಹ ಮೂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

 ಕಲಬುರಗಿ : ಕೇಂದ್ರದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಸತತ 3ನೇ ಬಾರಿಗೆ ಅಧಿಕಾರಕ್ಕೆ ಬಂದು 11 ವರ್ಷ ಪೂರೈಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ದೇಶದಲ್ಲಿ ಹೊಸ ಉತ್ಸಾಹ ಮೂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿ ಆಗುವ ಮುನ್ನ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಹಗರಣಗಳ ಸರಮಾಲೆಯಲ್ಲಿ ಸಿಲುಕಿಕೊಂಡಿತ್ತು. ₹12 ಲಕ್ಷ ಕೋಟಿಗೂ ಹೆಚ್ಚು ಹಗರಣ ಯುಪಿಎ ಸರ್ಕಾರದ ಅವಧಿಯಲ್ಲಿ ಆಗಿತ್ತು. ಜನ ಈ ದೇಶದ ಗತಿ ಇಷ್ಟೇ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಬಳಿಕ ಜನರಿಗೆ ಅಭಿವೃದ್ಧಿಯ ಭರವಸೆ ಬರಲು ಮೋದಿ ಅವರು ಕಾರಣವಾಗಿದ್ದು, ಅವರ 11 ವರ್ಷದ ಸುದೀರ್ಘ ಆಡಳಿತದಲ್ಲಿ ದೇಶದ ಜನತೆಗೆ ಸಂತೋಷ ಇದೆ. ಎನ್‌ಡಿಎ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ಭಾರತವನ್ನು ಸದೃಢ ದೇಶವಾಗಿಸಿದೆ. ಆಂತರಿಕ ಭದ್ರತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ ಹೆಚ್ಚಲು ಮೋದಿ ಕಾರಣವಾಗಿದ್ದಾರೆ ಎಂದರು.

ಕೇಂದ್ರದ 11 ವರ್ಷದ ಸಾಧನೆ ಶೂನ್ಯ ಅನ್ನೋ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಿನ್ನೆ ಹಣಕಾಸಿನ ಆಯೋಗದ ಸಭೆಗೆ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿದ್ದರು. ರಾಜ್ಯ ಜನತೆ ಪರವಾಗಿ ಸಿದ್ದರಾಮಯ್ಯ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ‌. ಮೋದಿ ಅವರಿಗೆ ಸಿದ್ದರಾಮಯ್ಯ ಸರ್ಟಿಫಿಕೇಟ್ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರ ನಮಗೆ ಹಣ ಕೊಡುತ್ತಿಲ್ಲ ಅನ್ನೋದು ಅಪಪ್ರಚಾರ. ಸುಳ್ಳನ್ನೇ ಸತ್ಯ ರೀತಿಯಲ್ಲಿ ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ರಾಜ್ಯದ ಅಭಿವೃದ್ಧಿಗಾಗಿಗೆ ಹಣ ಕೊಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ಟೀಕಿಸಿದರು.

ಕಾಲ್ತುಳಿತಕ್ಕೆ ಸಿಎಂ, ಡಿಸಿಎಂ ನೇರ ಹೊಣೆ

ಕಾಲ್ತುಳಿತದಲ್ಲಿ ಆರ್‌ಸಿಬಿ ಅಭಿಮಾನಿಗಳ ಸಾವಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ ನೇರ ಕಾರಣ. ಆದರೆ, ಪೊಲೀಸರನ್ನ ಈ ಪ್ರಕರಣದಲ್ಲಿ ಬಲಿ ಕೊಡಲಾಗಿದ್ದು, ಅಧಿಕಾರಿಗಳ ಅಮಾನತು ಅವಿವೇಕಿತನದ್ದು. ಆರ್‌ಸಿಬಿ ಗೆಲುವಿನ ಪುಕ್ಕಟ್ಟೆ ಪ್ರಚಾರಕ್ಕಾಗಿ ಸಿಎಂ, ಡಿಸಿಎಂ ಮಧ್ಯೆ ಪೈಪೋಟಿ ಇತ್ತು. ಎಲ್ಲರೂ ಬನ್ನಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಎಂದು ರಾಜ್ಯ ಸರ್ಕಾರ ಕರೆದಿದ್ದೇ ಕಾಲ್ತುಳಿತ ಘಟನೆಗೆ ಕಾರಣ ಎಂದು ವಿಜಯೇಂದ್ರ ಆರೋಪಿಸಿದರು.

PREV
Read more Articles on

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ