ಕೇಂದ್ರ ಸರ್ಕಾರದ ‘ವಿಬಿ ಜಿ ರಾಮ್‌ ಜಿ ಕಾಯ್ದೆ’ ರದ್ದುಪಡಿಸುವಂತೆ ಹಾಗೂ ‘ಮನರೇಗಾ ಕಾಯ್ದೆ’ ಪುನರ್‌ ಸ್ಥಾಪಿಸುವಂತೆ ರಾಜ್ಯ ಸರ್ಕಾರ ಉಭಯ ಸದನಗಳಲ್ಲಿ ಮಂಡಿಸಿದ ನಿರ್ಣಯವನ್ನು ಬುಧವಾರ ವಿರೋಧ ಪಕ್ಷಗಳ ಸದಸ್ಯರ ಗದ್ದಲ ಹಾಗೂ ಸಭಾತ್ಯಾಗದ ನಡುವೆ ಧ್ವನಿ ಮತದ ಮುಖಾಂತರ ಅಂಗೀಕರಿಸಲಾಯಿತು.

- ವಿಧಾನಮಂಡಲದಲ್ಲಿ ಸರ್ಕಾರ ನಿರ್ಣಯ- ಮನರೇಗಾ ಕಾಯ್ದೆ ಮರುಜಾರಿಗೆ ಆಗ್ರಹ- ಬಿಜೆಪಿ ಸಭಾತ್ಯಾಗದ ಮಧ್ಯೆ ಅಂಗೀಕಾರ

---

ನಿರ್ಣಯದ ಮತ್ತೆ

ಹರಿದ ಅಶೋಕ್‌

ಮನರೇಗಾ ಯೋಜನೆಯಲ್ಲಿ ಈ ಸರ್ಕಾರ ಕೋಟ್ಯಂತರ ರು. ಲೂಟಿ ಮಾಡಿದೆ. ವಿಬಿ ಜಿರಾಮ್‌ ಜಿ ಯೋಜನೆ ಒಳ್ಳೆಯ ಯೋಜನೆ. ಪಾರದರ್ಶಕತೆ ತರಲಾಗಿದೆ. ಇಂಥ ಕಾಯ್ದೆ ವಿರೋಧಿಸಿ ಈ ಸರ್ಕಾರ ನಿರ್ಣಯ ಮಾಡಿದೆ. ಈ ನಿರ್ಣಯಕ್ಕೆ ನಮ್ಮ ವಿರೋಧವಿದೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಅವರು ಮತ್ತೊಮ್ಮೆ ನಿರ್ಣಯದ ಪ್ರತಿ ಹರಿದು ಎಸೆದರು. ಬಳಿಕ ವಿರೋಧ ಪಕ್ಷದ ಎಲ್ಲ ಸದಸ್ಯರು ಸಭಾತ್ಯಾಗ ಮಾಡಿ ಸದನದಿಂದ ಹೊರನಡೆದರು.

--

ಕನ್ನಡಪ್ರಭ ವಾರ್ತೆ ವಿಧಾನಸಭೆ

ಕೇಂದ್ರ ಸರ್ಕಾರದ ‘ವಿಬಿ ಜಿ ರಾಮ್‌ ಜಿ ಕಾಯ್ದೆ’ ರದ್ದುಪಡಿಸುವಂತೆ ಹಾಗೂ ‘ಮನರೇಗಾ ಕಾಯ್ದೆ’ ಪುನರ್‌ ಸ್ಥಾಪಿಸುವಂತೆ ರಾಜ್ಯ ಸರ್ಕಾರ ಉಭಯ ಸದನಗಳಲ್ಲಿ ಮಂಡಿಸಿದ ನಿರ್ಣಯವನ್ನು ಬುಧವಾರ ವಿರೋಧ ಪಕ್ಷಗಳ ಸದಸ್ಯರ ಗದ್ದಲ ಹಾಗೂ ಸಭಾತ್ಯಾಗದ ನಡುವೆ ಧ್ವನಿ ಮತದ ಮುಖಾಂತರ ಅಂಗೀಕರಿಸಲಾಯಿತು.

ವಿಧಾನಸಭೆಯಲ್ಲಿ ನಿರ್ಣಯದ ಮೇಲಿನ ಚರ್ಚೆ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ಣಯ ಅಂಗೀಕರಿಸುವಂತೆ ಸದನವನ್ನು ಕೋರಿದರು. ಸ್ಪೀಕರ್‌ ಯು.ಟಿ.ಖಾದರ್‌ ಅವರು ನಿರ್ಣಯವನ್ನು ಧ್ವನಿ ಮತಕ್ಕೆ ಹಾಕುವ ಮೂಲಕ ಅಂಗೀಕರಿಸಿ, ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಸದನದ ಬಾವಿಗಿಳಿದು ಪ್ರತಿಭಟನೆ:

ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಬುಧವಾರವೂ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಸದನದ ಬಾವಿಯಲ್ಲಿ ಧರಣಿ ಮುಂದುವರೆಸಿದರು. ಗದ್ದಲದ ನಡುವೆ ಈ ನಿರ್ಣಯ ಬೆಂಬಲಿಸಿ ಕಾಂಗ್ರೆಸ್‌ನ ಕೆಲ ಶಾಸಕರು ಮಾತನಾಡಿದರು. ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳ್‌ ಈ ವಿಬಿ ಜಿ ರಾಮ್‌ ಜಿ ಕಾಯ್ದೆ ಬೆಂಬಲಿಸಿ ಮಾತನಾಡಿದರು. ಕೊನೆಗೆ ಸಚಿವ ಪ್ರಿಯಾಂಕ್‌ ಖರ್ಗೆ ಈ ನಿರ್ಣಯ ಸಮರ್ಥಿಸಿಕೊಂಡರು. ಬಳಿಕ ವಿರೋಧ ಪಕ್ಷದ ಸದಸ್ಯರು ಈ ನಿರ್ಣಯ ವಿರೋಧಿಸಿ ಸಭಾತ್ಯಾಗ ಮಾಡಿ ಹೊರ ನಡೆದರು.

ಸಭಾತ್ಯಾಗಕ್ಕೂ ಮುನ್ನ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಈ ಸರ್ಕಾರ ಅಬಕಾರಿ ಹಗರಣದಲ್ಲಿ 6 ಸಾವಿರ ಕೋಟಿ ರು. ಲೂಟಿ ಮಾಡಿದೆ. ಈ ಹಗರಣ ಕುರಿತು ತನಿಖೆ ನಡೆಸಬೇಕು. ಅಬಕಾರಿ ಸಚಿವ ರಾಜೀನಾಮೆ ಕೊಡುವಂತೆ ಆಗ್ರಹಿಸಿದರೂ ರಾಜೀನಾಮೆ ಕೊಟ್ಟಿಲ್ಲ. ಅಬಕಾರಿ ಸಚಿವ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.