ನಿಜ ಸಂಗತಿ ತಿಳಿಯದೇ ವಿಕಸಿತ ಭಾರತ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರಿಗೆ ಸುಳ್ಳು ಹೇಳಿ ದಿಕ್ಕು ತಪ್ಪಿಸುತ್ತದೆ ಎಂದು ಬಿಜೆಪಿ ಮುಖಂಡ ಹನಗವಾಡಿ ವೀರೇಶ್ ದೂರಿದ್ದಾರೆ.

- ಕೇಂದ್ರ ೬೦%, ರಾಜ್ಯ ೪೦% ಅನುದಾನ ಒದಗಿಸಿ ಯೋಜನೆ ಜಾರಿ

- - -

ಮಲೇಬೆನ್ನೂರು: ನಿಜ ಸಂಗತಿ ತಿಳಿಯದೇ ವಿಕಸಿತ ಭಾರತ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರಿಗೆ ಸುಳ್ಳು ಹೇಳಿ ದಿಕ್ಕು ತಪ್ಪಿಸುತ್ತದೆ ಎಂದು ಬಿಜೆಪಿ ಮುಖಂಡ ಹನಗವಾಡಿ ವೀರೇಶ್ ದೂರಿದರು. ಪಟ್ಟಣದ ಕಾಳಿಕಾದೇವಿ ದೇವಾಲಯ ಆವರಣದಲ್ಲಿ ಭಾಜಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಖಾತ್ರಿಯನ್ನು ೧೦೦ ದಿನದಿಂದ ೧೨೫ ದಿನದವರೆಗೆ ಹೆಚ್ಚಿಸಲಾಗಿದೆ. ಯೋಜನೆಯಲ್ಲಿ ಪಾರದರ್ಶಕ ಆಡಳಿತ ಜಾರಿಗೊಳಿಸುವ ಉದ್ದೇಶಕ್ಕೆ ನೂತನ ತಂತ್ರಜ್ಞಾನ ತರಲಾಗಿದೆ. ಈ ಹಂತದಲ್ಲಿ ಹೆಚ್ಚು ಸುಧಾರಣೆಗಳನ್ನು ಕಾಣಬಹುದಾಗಿದೆ. ರಾಜ್ಯ ಸರ್ಕಾರ ವಿನಾಕಾರಣ ದೂರುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದರು.

ನರೇಗಾ ಯೋಜನೆಗೆ ಇಲ್ಲಿಯವರೆಗೂ ಕೇಂದ್ರ ಸರ್ಕಾರವೇ ಅನುದಾನ ನೀಡುತ್ತಿದ್ದು, ಪ್ರಸ್ತುತ ಕೇಂದ್ರ ೬೦%, ರಾಜ್ಯ ೪೦% ಅನುದಾನ ಒದಗಿಸಿ ಯೋಜನೆ ಜಾರಿಗೊಳಿಸಲಾಗುತ್ತದೆ. ರಾಜ್ಯ ಸರ್ಕಾರದ ಜವಾಬ್ದಾರಿ ಹೆಚ್ಚಿಸುವುದು ಈ ಯೋಜನೆಯ ಸದುದ್ದೇಶ ಮತ್ತು ಗುಣಮಟ್ಟದ ಕಾಮಗಾರಿ ಮಾಡುವುದಾಗಿದೆ ಎಂದರು.

ಎಚ್. ಲಿಂಗರಾಜ್ ಮಾತನಾಡಿ, ನೂತನ ಉದ್ಯೋಗ ಖಾತ್ರಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಈ ಹಿಂದೆ ಇದ್ದ ಲೋಪದೋಷಗಳನ್ನು ಸರಿಪಡಿಸಲಾಗಿದೆ. ಸ್ಥಳೀಯ ಆಡಳಿತದ ಗ್ರಾಮಸಭೆಯಲ್ಲಿ ಚರ್ಚಿಸಿದ ಉದ್ಯೋಗ ಬಯಸಿದ ಗ್ರಾಮೀಣ ಕೃಷಿ ಕಾರ್ಮಿಕರಿಗೆ ಇದು ವರದಾನವಾಗಲಿದೆ. ಕಾಂಗ್ರೆಸ್ ವಿರೋಧ ಮಾಡುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

ಭಾಜಪ ಮುಖಂಡರಾದ ಮುದೇಗೌಡರ ತಿಪ್ಪೇಶ್, ಟಿ ಸಿದ್ದಪ್ಪ, ಪುರಸಭಾ ಸದಸ್ಯ ಬಿ.ರೇವಣಸಿದ್ದಪ್ಪ, ಹರಳಹಳ್ಳಿ ಶ್ರೀನಿವಾಸ್, ನಿರಂಜನ್, ಐರಣಿ ಅಣ್ಣಪ್ಪ, ಆದಾಪುರ ವೀರೇಶ್, ಪ್ರಕಾಶಾಚಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

- - -

-ಚಿತ್ರ೧: ಸುದ್ದಿಗೋಷ್ಠಿಯಲ್ಲಿ ಭಾಜಪ ಮುಖಂಡ ಹನಗವಾಡಿ ವೀರೇಶ್ ಮಾತನಾಡಿದರು.