ಮುಂದೆ ನನ್ನದೇ ಬಜೆಟ್: ಸಿದ್ದು

KannadaprabhaNewsNetwork | Published : Mar 19, 2025 11:46 PM

ಸಾರಾಂಶ

ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ಚರ್ಚೆ ನಡೆಯುತ್ತಿರುವ ನಡುವೆಯೇ, ‘ಮುಂದಿನ ವರ್ಷವೂ ನಾನೇ ಬಜೆಟ್‌ ಮಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

- ‘ಸಿಎಂ ಬದಲಾವಣೆ’ ಚರ್ಚೆ ನಡುವೆಯೇ ಕುತೂಹಲ ಮೂಡಿಸಿದ ಸಿದ್ದು ಹೇಳಿಕೆ

- ಸಿಎಂ ಹುದ್ದೆಗೆ ಸಿದ್ದು-ಡಿಕೆಶಿ ಹಗ್ಗಜಗ್ಗಾಟದ ಮಧ್ಯೆ ಈ ಹೇಳಿಕೆ ಚರ್ಚೆಗೆ ನಾಂದಿ

ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್ತು

ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ಚರ್ಚೆ ನಡೆಯುತ್ತಿರುವ ನಡುವೆಯೇ, ‘ಮುಂದಿನ ವರ್ಷವೂ ನಾನೇ ಬಜೆಟ್‌ ಮಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿಗಳು ವಿಧಾನ ಪರಿಷತ್‌ನಲ್ಲಿ ನೀಡಿದ ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ಹಾಗೆಯೇ ರಾಜ್ಯ ರಾಜಕೀಯದಲ್ಲೂ ಸಂಚಲನ ಮೂಡಿಸಿದೆ.

ಕೆಳಮನೆಯಲ್ಲಿ ಇತ್ತೀಚೆಗೆ ಐದು ವರ್ಷಕ್ಕೂ ತಾವೇ ಮುಖ್ಯಮಂತ್ರಿ ಎಂದು ಹೇಳಿದ್ದ ಸಿದ್ದರಾಮಯ್ಯ ಅವರು ಇದೀಗ ಪರಿಷತ್ತಿನಲ್ಲಿ ಮುಂದಿನ ವರ್ಷ ಬಜೆಟ್‌ ಮಂಡಿಸುವ ವಿಚಾರ ಪ್ರಸ್ತಾಪಿಸಿದಾಗ ಬಿಜೆಪಿ ಸದಸ್ಯರು ತೀವ್ರ ಚರ್ಚೆಗೆ ಇಳಿದರು.

ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು.,’ಅಲ್ಲಿಯವರೆಗೂ ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನಿಮ್ಮವರು ಬಿಡ್ತಾರಾ?’ ಎಂದು ಛೇಡಿಸಿದರು.

ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಅವರು, ‘ಛಲವಾದಿ ನಾರಾಯಣಸ್ವಾಮಿಗೆ ನಾನು ಮುಂದಿನ ವರ್ಷವೂ ಬಜೆಟ್‌ ಮಂಡಿಸಬೇಕೆಂಬ ಆಸೆ ಇದೆಯೋ, ಇಲ್ವೋ?’ ಎಂದರು. ಅದಕ್ಕೆ ನಾರಾಯಣಸ್ವಾಮಿ, ‘ನನಗೇನೋ ಇದೆ, ಆದರೆ ನಿಮ್ಮವರಿಗೂ ಇರಬೇಕ್ವಾ?’ ಎಂದು ತಿರುಗೇಟು ನೀಡಿದರು.

ಆಗ ಮುಖ್ಯಮಂತ್ರಿ, ‘ನನ್ನ ಕಟ್ಟಾ ರಾಜಕೀಯ ವಿರೋಧಿಯಾದ ನಿಮಗೆ ಆಸೆ ಇದ್ದ ಮೇಲೆ ನಮ್ಮವರಿಗೂ ಆಸೆ ಇರುತ್ತದೆ ಬಿಡಿ. ಹಿಂದಿನ ಸರ್ಕಾರದಲ್ಲಿ ಹಳಿ ತಪ್ಪಿರುವ ರಾಜ್ಯದ ಆರ್ಥಿಕ ಶಿಸ್ತನ್ನು ನಮ್ಮ ಸರ್ಕಾರದಲ್ಲಿ ಸರಿಪಡಿಸಲಾಗುತ್ತಿದೆ. ಮುಂದಿನ ವರ್ಷ ರಾಜಸ್ವ ಕೊರತೆ ಆಗುವುದಿಲ್ಲ. ಶೇ.100ರಷ್ಟು ಉಳಿಕೆ ಬಜೆಟ್‌ ಮಂಡಿಸುತ್ತೇನೆ’ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.

ಇತ್ತೀಚೆಗೆ ಸಿದ್ದು ಬಜೆಟ್‌ ಮಂಡಿಸಿದ ಬಳಿಕ, ‘ಮುಂದಿನ ಬಜೆಟ್‌ ಕೂಡ ಸಿದ್ದು ಅವರದ್ದೇ’ ಎಂದು ಅವರ ಆಪ್ತ ಸಚಿವರು ಹೇಳಿದ್ದರೆ, ಇನ್ನು ಕೆಲವರು, ‘ಕಾಂಗ್ರೆಸ್‌ ಬಜೆಟ್‌ ಮಂಡಿಸುತ್ತದೆ’ ಎಂದು ಗೂಢಾರ್ಥದ ಹೇಳಿಕೆ ನೀಡಿದ್ದರು. ಇದೇ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಆಪ್ತ ಬಣದ ಹಲವು ನಾಯಕರು ಹಾಗೂ ಶಾಸಕ-ಸಚಿವರು, ‘ವರ್ಷಾಂತ್ಯಕ್ಕೆ ಡಿಕೆಶಿ ಸಿಎಂ ಆಗುತ್ತಾರೆ’ ಎಂದು ಹೇಳಿ ಚರ್ಚೆಗೆ ಕಿಚ್ಚು ಹಚ್ಚಿದ್ದರು.

--

‘ಕನ್ನಡಪ್ರಭ’ ವರದಿ ಪ್ರದರ್ಶಿಸಿದ ಸಿಎಂರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿರುವ ಬಗ್ಗೆ ವಿವರಿಸುವಾಗ ಆ ಕುರಿತ ಬರಹವಿದ್ದ ‘ಕನ್ನಡಪ್ರಭ’ ವರದಿ ಪ್ರದರ್ಶಿಸಿ ಮಾತನಾಡಿದರು.

Share this article