ಸಂಕ್ರಾಂತಿ ಬಳಿಕ ನಿಖಿಲ್‌ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಪಟ್ಟ? - ಚನ್ನಪಟ್ಟಣ ಸೋಲಿನ ಕಾರಣ ಮೀನಮೇಷ

ಸಾರಾಂಶ

ಹೊಸ ವರ್ಷದ ಸಂಕ್ರಾಂತಿ ಹಬ್ಬದ ಬಳಿಕ ಜೆಡಿಎಸ್‌ಗೆ ನೂತನ ಸಾರಥಿ ನೇಮಿಸುವ ಬಗ್ಗೆ ಪಕ್ಷದಲ್ಲಿ ಚರ್ಚೆ ಆರಂಭ‍ವಾಗಿದೆ. ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೆಸರು ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿ ಬರುತ್ತಿದೆ.

ಬೆಂಗಳೂರು :  ಹೊಸ ವರ್ಷದ ಸಂಕ್ರಾಂತಿ ಹಬ್ಬದ ಬಳಿಕ ಜೆಡಿಎಸ್‌ಗೆ ನೂತನ ಸಾರಥಿ ನೇಮಿಸುವ ಬಗ್ಗೆ ಪಕ್ಷದಲ್ಲಿ ಚರ್ಚೆ ಆರಂಭ‍ವಾಗಿದೆ. ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೆಸರು ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿ ಬರುತ್ತಿದೆ.

ಹಾಲಿ ರಾಜ್ಯಾಧ್ಯಕ್ಷರಾಗಿರುವ ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ ಹುದ್ದೆ ಅಲಂಕರಿಸಿ ಬರೋಬ್ಬರಿ ಆರು ತಿಂಗಳಾಗಿದೆ. ಸಹಜವಾಗಿಯೇ ಪಕ್ಷದ ಸಂಘಟನೆ ಕೆಲಸ ದುರ್ಬಲಗೊಂಡಿದೆ. ಅವರ ಪರ ಪುತ್ರ ಹಾಗೂ ಪಕ್ಷದ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ಕೆಲ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರೂ ಅದು ಪೂರ್ಣಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಿಖಿಲ್ ಕುಮಾರಸ್ವಾಮಿ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದರೆ ಹೇಗೆಂಬ ಚರ್ಚೆ ಪಕ್ಷದ ಪಾಳೆಯದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಒಂದು ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ ಇಷ್ಟು ಹೊತ್ತಿಗೆ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ನಿರ್ಧಾರ ಹೊರಬೀಳುವ ಸಾಧ್ಯತೆಯಿತ್ತು. ಆದರೆ, ಈಗ ಸೋಲನುಭವಿಸಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ ಇನ್ನೂ ಮೀನಮೇಷ ಎಣಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದರ ನಡುವೆಯೂ ನಿಖಿಲ್ ಕುಮಾರಸ್ವಾಮಿ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ದಿಕ್ಕಿನಲ್ಲಿ ಅವರ ತಂದೆ ಎಚ್‌.ಡಿ.ಕುಮಾರಸ್ವಾಮಿ ಮತ್ತು ತಾತ ಎಚ್.ಡಿ.ದೇವೇಗೌಡ ಅವರು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಸಂಕ್ರಾಂತಿ ಹಬ್ಬದ ಬಳಿಕ ಪಕ್ಷದ ಇತರ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಪಕ್ಷ ಸಂಘಟನೆಗೊಳ್ಳಲು ರಾಜ್ಯಾಧ್ಯಕ್ಷರ ಸ್ಥಾನ ಬದಲಾವಣೆಯಾಗುವ ನಿರೀಕ್ಷೆ ಇರುವ ಕಾರಣ ಪಕ್ಷದ ಹಿರಿಯ ನಾಯಕ ಜಿ.ಟಿ.ದೇವೇಗೌಡ ಅವರೂ ಆ ಹುದ್ದೆಯ ಪ್ರಬಲ ಆಕಾಂಕ್ಷಿ.

ಮುಡಾ ಹಗರಣ ಬಹಿರಂಗಗೊಂಡ ಬಳಿಕ ಜಿ.ಟಿ.ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದರು. ಇದು ದಳಪತಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಜಿ.ಟಿ.ದೇವೇಗೌಡ ಅವರು ಪಕ್ಷದ ಹಿರಿಯ ನಾಯಕರಾಗಿರುವ ಕಾರಣ ಅವರ ಮನವೊಲಿಕೆ ಮಾಡಿ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕು ಎಂಬುದು ಪಕ್ಷದ ಕೆಲ ಶಾಸಕರಿಂದ ಒತ್ತಾಯವೂ ಕೇಳಿಬರುತ್ತಿದೆ.

Share this article