;Resize=(412,232))
ಪಟನಾ : ಬಿಹಾರದಲ್ಲಿ ನೂತನ ಸರ್ಕಾರದ ಪ್ರಮಾಣವಚನ ಸಮಾರಂಭ ನ.20ರಂದು ಪಟನಾದಲ್ಲಿ ನಡೆಯುವ ಸಾಧ್ಯತೆಯಿದೆ. ಈ ಸಂಬಂಧ ನಗರದ ಗಾಂಧಿ ಮೈದಾನದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಇದೇ ವೇಳೆ, ನ.19ರಂದು ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗುವುದು ಎಂದು ಜೆಡಿಯು ಮೂಲವೊಂದು ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರು, ಕೇಂದ್ರ ಸಚಿವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಿರ್ಗಮಿತ ಸರ್ಕಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನ.19ರಂದು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೆ ಪೂರಕವಾಗಿ ಸೋಮವಾರ ಮಾತನಾಡಿದ ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್, ‘ನೂತನವಾಗಿ ಆಯ್ಕೆಯಾದ ಶಾಸಕರು ಮಂಗಳವಾರ ಸಭೆ ನಡೆಸಿ, ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ. ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನ.20 ಅಥವಾ 21ರಂದು ನಡೆಯುವ ಸಾಧ್ಯತೆ ಇದೆ’ ಎಂದು ತಿಳಿಸಿದ್ದಾರೆ.
ನಿರ್ಗಮಿತ ಸರ್ಕಾರದ ಕೊನೆಯ ಸಚಿವ ಸಂಪುಟ ಸಭೆ ಸೋಮವಾರ ನಡೆಯಿತು. ಈ ವೇಳೆ ನ.19ರಂದು ವಿಧಾನಸಭೆಯನ್ನು ವಿಸರ್ಜಿಸುವ ನಿರ್ಣಯವನ್ನು ಸಭೆ ಅಂಗೀಕರಿಸಿತು. ಜೊತೆಗೆ, ಚುನಾವಣೆಯಲ್ಲಿ ಎನ್‌ಡಿಎಗೆ ಅಭೂತಪೂರ್ವ ಜಯ ಗಳಿಸಿಕೊಟ್ಟಿದ್ದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುವ ನಿರ್ಣಯವನ್ನೂ ಅಂಗೀಕರಿಸಲಾಯಿತು.
ಸಭೆಯ ನಂತರ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹಾಗೂ ಮುಖ್ಯ ಕಾರ್ಯದರ್ಶಿ ಪ್ರತ್ಯಯ ಅಮೃತ್ ಅವರು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್‌ರನ್ನು ಭೇಟಿಯಾಗಿ ಸಭೆಯ ನಿರ್ಣಯಗಳ ಕುರಿತು ಮಾಹಿತಿ ನೀಡಿದರು.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ 202 ಸ್ಥಾನಗಳಲ್ಲಿ ಜಯ ಗಳಿಸಿ, ಸರ್ಕಾರ ರಚಿಸಲು ಸಿದ್ಧವಾಗಿದೆ.