ಸಂಪುಟ ಪುನಾರಚನೆಯೂ ಇಲ್ಲ, ಅಧಿಕಾರ ಹಂಚಿಕೆಯೂ ಇಲ್ಲ: ಡಿ.ಕೆ.ಶಿವಕುಮಾರ್‌

KannadaprabhaNewsNetwork |  
Published : Oct 12, 2025, 01:00 AM ISTUpdated : Oct 12, 2025, 05:24 AM IST
ಡಿ.ಕೆ.ಶಿವಕುಮಾರ್‌ | Kannada Prabha

ಸಾರಾಂಶ

ರಾಜ್ಯದಲ್ಲಿ ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಹಾಗೂ ಅಧಿಕಾರ ಹಂಚಿಕೆ ಯಾವುದೂ ಇಲ್ಲ. ಇಂಥ ಯಾವುದೇ ಚರ್ಚೆಯೂ ನಡೆದಿಲ್ಲ. ಚರ್ಚೆ ನಡೆದಿದೆ ಎಂಬುದು ಗಾಳಿ ಸುದ್ದಿಯಷ್ಟೆ. ನವೆಂಬರ್‌ ಕ್ರಾಂತಿ ಸಾಧ್ಯತೆ ಅಲ್ಲಗಳೆದ ಉಪಮುಖ್ಯಮಂತ್ರಿ

  ಬೆಂಗಳೂರು :  ರಾಜ್ಯದಲ್ಲಿ ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಹಾಗೂ ಅಧಿಕಾರ ಹಂಚಿಕೆ ಯಾವುದೂ ಇಲ್ಲ. ಇಂಥ ಯಾವುದೇ ಚರ್ಚೆಯೂ ನಡೆದಿಲ್ಲ. ಚರ್ಚೆ ನಡೆದಿದೆ ಎಂಬುದು ಗಾಳಿ ಸುದ್ದಿಯಷ್ಟೆ.

ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಹಾಗೂ ಅಧಿಕಾರ ಹಸ್ತಾಂತರ ವಿಚಾರ ತೀವ್ರ ಚರ್ಚೆಯಾಗುತ್ತಿರುವ ಈ ಹಂತದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈ ಎರಡೂ ಸಾಧ್ಯತೆಗಳನ್ನು ಅಲ್ಲಗಳೆಯುವ ಹೇಳಿಕೆಯನ್ನು ಶನಿವಾರ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಹಾಗೂ ಅಧಿಕಾರ ಹಂಚಿಕೆ ವಿಚಾರವನ್ನು ನಾನು ಅಥವಾ ಮುಖ್ಯಮಂತ್ರಿಯವರು ಪ್ರಸ್ತಾಪ ಮಾಡಬೇಕು. ಆದರೆ, ನಾವಿಬ್ಬರೂ ಇಂಥ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಅದು ಗಾಳಿ ಸುದ್ದಿ ಎಂದು ಸ್ಪಷ್ಟಪಡಿಸಿದರು.

ತೀರ್ಮಾನ ಹೈಕಮಾಂಡ್‌ನದು:

ಜತೆಗೆ, ಆತುರದಲ್ಲಿ ಇರುವವರು ಇಂತಹ ವಿಚಾರಗಳ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದಾರೆ. ಆದರೆ, ಏನೇ ಇದ್ದರೂ ಅದನ್ನು ತೀರ್ಮಾನಿಸುವುದು ಹೈಕಮಾಂಡ್‌ ಎಂದು ಹೇಳಿದರು.

ಸಂಪುಟ ವಿಸ್ತರಣೆಯೂ ಇಲ್ಲ, ಅಧಿಕಾರ ಹಂಚಿಕೆಯೂ ಇಲ್ಲ. ಕೆಲ ಮಾಧ್ಯಮಗಳು ಗಾಳಿ ಸುದ್ದಿ ಪ್ರಕಟಿಸುತ್ತಿವೆ ಅಷ್ಟೇ ಎಂದರು.

ಮುಂಬರುವ ನಗರ ಪಾಲಿಕೆ, ಜಿಪಂ, ತಾಪಂ ಚುನಾವಣೆಗಳ ಬಗ್ಗೆ ಚರ್ಚೆ ನಡೆಸುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಸದಸ್ಯರಿಗೆ ಔತಣಕೂಟ ಆಯೋಜಿಸಿದ್ದಾರೆ. ಔತಣ ಕೂಟದ ಹಿನ್ನೆಲೆಯಲ್ಲಿ ಬೆಂಗಳೂರಿನ ಐದು ನಗರ ಪಾಲಿಕೆ ಚುನಾವಣೆಗಳ ಬಗ್ಗೆ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತೇನೆ ಎಂದು ಹೇಳಿದರು.

ಮುಂದೆ ಬಿಜೆಪಿ ಅಧಿಕಾರಕ್ಕೆ ಬರಲ್ಲ: ಡಿಕೆಶಿ

ಬಿಜೆಪಿ ನಾಯಕರಿಗೆ ಬೆಂಗಳೂರು ಅಭಿವೃದ್ಧಿ ಮುಖ್ಯವಲ್ಲ, ರಾಜಕೀಯವೇ ಮುಖ್ಯವಾಗಿದೆ. ಜಿಬಿಎ ಸಮಿತಿ ಸಭೆಯಲ್ಲಿ ತಮ್ಮ ಅಭಿಪ್ರಾಯ, ಸಲಹೆ, ದೂರು ಹೇಳಿಕೊಳ್ಳಬಹುದಾಗಿತ್ತು. ಜನ ಅವರನ್ನು ಗೆಲ್ಲಿಸಿ ಅಧಿಕಾರ ನೀಡಿದ್ದು, ಆ ಜನರ ಧ್ವನಿಯಾಗಬೇಕಿತ್ತು. ಆದರೆ, ಆ ಕೆಲಸ ಮಾಡಲಿಲ್ಲ. ಬದಲಿಗೆ ಜಿಬಿಎ ರದ್ದು ಮಾಡುವುದಾಗಿ ಹೇಳಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಹೀಗಾಗಿ ಈ ಆಲೋಚನೆ ಮಾಡುವುದು ಬೇಡ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

- ನವೆಂಬರ್‌ನಲ್ಲಿ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಲಿದೆ, ಸಂಪುಟ ಪುನಾರಚನೆಯಾಗಲಿದೆ ಎಂದು ಭಾರಿ ಚರ್ಚೆ

- ಇದರ ಬೆನ್ನಲ್ಲೇ ತಾವೂ ಸಚಿವ ಸ್ಥಾನಾಕಾಂಕ್ಷಿ ಎಂದು ಕೆಲವು ಶಾಸಕರ ಹೇಳಿಕೆ. ತಮಗೆ ಹುದ್ದೆ ನೀಡಬೇಕೆಂದು ಬೇಡಿಕೆ

- ಇನ್ನೂ ಕೆಲ ನಾಯಕರಿಂದ ಅಧಿಕಾರ ಹಂಚಿಕೆ ಬಗ್ಗೆಯೂ ಹೇಳಿಕೆ. ಪಕ್ಷದಿಂದ ಒಬ್ಬ ಶಾಸಕಗೆ ಪಕ್ಷದಿಂದ ನೋಟಿಸ್‌ ಜಾರಿ- ಸಂಪುಟ ಪುನಾರಚನೆ ವಿಷಯದಲ್ಲಿ ಸಿಎಂ ತಂತ್ರ ರೂಪಿಸಿದ್ದಾರೆ, ಡಿಸಿಎಂ ಪ್ರತಿತಂತ್ರ ಹೂಡುತ್ತಿದ್ದಾರೆ ಎಂದೂ ಚರ್ಚೆ

- ಇದರ ಬೆನ್ನಲ್ಲೇ ಸ್ವತಃ ಡಿಸಿಎಂ ಡಿಕೆಶಿ ಅವರಿಂದಲೇ ಸ್ಪಷ್ಟನೆ. ಸಚಿವ ಸಂಪುಟ ಪುನಾರಚನೆಯೇ ಇಲ್ಲ ಎಂದು ಹೇಳಿಕೆ

- ಅಧಿಕಾರ ಹಸ್ತಾಂತರವೂ ಇಲ್ಲ ಎಂದು ನುಡಿ. ಈ ಬಗ್ಗೆ ಪ್ರಸ್ತಾಪಿಸಬೇಕಾದ ಸಿಎಂ, ನಾನು ಸುಮ್ಮನಿದ್ದೇವೆ ಎಂದು ಮಾತು

 ಸಿಎಂ ಹುದ್ದೆ ಏರುವ ಆತುರ ಇಲ್ಲ, ನನ್ನ ಗುರಿ ನನಗೆ ಗೊತ್ತಿದೆ: ಡಿಕೆಶಿ  

 ಬೆಂಗಳೂರು : ನಾನು ಮುಖ್ಯಮಂತ್ರಿಯಾಗುವ ಕಾಲ ಹತ್ತಿರ ಬಂದಿದೆ ಎಂದು ಹೇಳಿಲ್ಲ. ನನಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಆತುರವೂ ಇಲ್ಲ. ಆದರೆ, ಕೆಲ ಮಾಧ್ಯಮಗಳು ಹೇಳಿಕೆ ತಿರುಚಿ ವಿವಾದ ಸೃಷ್ಟಿಸುತ್ತಿವೆ. ಇದು ಮುಂದುವರೆದರೆ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಶನಿವಾರ ಲಾಲ್‌ಬಾಗ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಭೇಟಿಗೆ ಸಾರ್ವಜನಿಕರು ಬಂದಿದ್ದರು. ಆಗ, ಅವರಲ್ಲಿ ಕೆಲವರು ನೀವು ಮುಖ್ಯಮಂತ್ರಿಯಾಗಬೇಕು ಎಂದರು. ಜತೆಗೆ, ಆ ಸಮಯ ಹತ್ತಿರ ಬರುತ್ತಿದೆಯೇ ಎಂದು ಕೇಳಿದರು. ಆದರೆ, ಕೆಲ ಮಾಧ್ಯಮಗಳು ಸಿಎಂ ಆಗುವ ಕಾಲ ಬರುತ್ತಿದೆ ಎಂದು ನಾನೇ ಹೇಳಿದ್ದಾಗಿ ಸುದ್ದಿ ತಿರುಚಿ ಪ್ರಸಾರ ಮಾಡುತ್ತಿವೆ. ಮಾಧ್ಯಮಗಳು ಹಾಗೆಲ್ಲ ಸುದ್ದಿ ತಿರುಚಿ ತೋರಿಸಬಾರದು ಎಂದರು.ನನಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಆತುರ ಇಲ್ಲ. ನಾನು ಸಾರ್ವಜನಿಕರ ಸೇವೆ ಮಾಡಲು ಬಂದಿದ್ದೇನೆ. ರಾಜಕಾರಣ ಮಾಡುವುದಕ್ಕಲ್ಲ. ಜನರ ಸೇವೆಗಾಗಿ ಹಗಲು ರಾತ್ರಿ ತಿರುಗುತ್ತಿದ್ದೇನೆ. ನನಗೆ ನನ್ನ ಗುರಿ ಗೊತ್ತಿದೆ. ಭಗವಂತ ನನಗೆ ಯಾವಾಗ ಅವಕಾಶ ಕೊಡುತ್ತಾನೋ ಕೊಡಲಿ. ಮಾಧ್ಯಮಗಳು ನನ್ನ ಹೇಳಿಕೆ ತಿರುಚುವುದಾದರೆ ನಾನು ಮಾಧ್ಯಮಗಳಿಗೆ ಸಹಕಾರ ಕೊಡುವುದಿಲ್ಲ. ಕಾರ್ಯಕ್ರಮಗಳಿಗೆ ಕರೆಯುವುದೂ ಇಲ್ಲ. ಮಾಧ್ಯಮಗೋಷ್ಠಿ ನಡೆಸುವುದೂ ಇಲ್ಲ ಎಂದು ಹೇಳಿದರು.

ನಾನು ಆ ಹೇಳಿಕೆ ಎಲ್ಲಿ ಹೇಳಿದ್ದೇನೆ?, ಮಾಧ್ಯಮಗಳು ರಾಜಕಾರಣ ಮಾಡುವುದು ಬೇಡ. ಆ ರೀತಿ ಹೇಳಿಲ್ಲ. ಅದರ ಅಗತ್ಯವೂ ಇಲ್ಲ. ರಾಜ್ಯದ ಜನರ ಸೇವೆ ಹಾಗೂ ಬೆಂಗಳೂರಿನ ನಾಗರಿಕರಿಗೆ ಉತ್ತಮ ಆಡಳಿತ ನೀಡಲು ಶ್ರಮಿಸುತ್ತಿದ್ದೇನೆ. ಆದರೆ, ಒಳ್ಳೆಯ ಕೆಲಸ ಬಿಟ್ಟು ವಿವಾದ ಸೃಷ್ಟಿಸಲು ಕೆಲ ಮಾಧ್ಯಮಗಳು ಪ್ರಯತ್ನಿಸುತ್ತಿವೆ ಎಂದು ಕಿಡಿಕಾರಿದರು.ಇದೇ ರೀತಿ ನನ್ನ ವಿಚಾರದಲ್ಲಿ ಸುಳ್ಳು ಸುದ್ದಿ ಹಾಕಿ, ದಾರಿ ತಪ್ಪಿಸುವ ಪ್ರಯತ್ನ ಮಾಡಿದರೆ, ಮಾನನಷ್ಟ ಮೊಕದ್ದಮೆ ಹಾಕಬೇಕಾಗುತ್ತದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

PREV
Read more Articles on

Recommended Stories

ಸಿಎಂ ಹುದ್ದೆ ಏರುವ ಆತುರ ಇಲ್ಲ, ನನ್ನ ಗುರಿ ನನಗೆ ಗೊತ್ತಿದೆ: ಡಿಕೆಶಿ
ಬೆಳಗಾವಿಯಲ್ಲಿ ಕತ್ತಿ ವರ್ಸಸ್ ಜಾರಕಿಹೊಳಿ ಡಿಸಿಸಿ ಸಮರ