ಮತದಾನದ ಹಕ್ಕು ಇಲ್ಲದಿದ್ದರೆ ಗ್ಯಾರಂಟಿ ಇಲ್ಲ : ಡಿಕೆ

Published : Jun 19, 2026, 11:27 AM IST
DK shivakumar

ಸಾರಾಂಶ

ನಾವೆಲ್ಲಾ ತುಂಬಾ ಎಚ್ಚರಿಕೆಯಿಂದ ಇರಬೇಕು. ನಮ್ಮ ಮುಂದೆ ದೊಡ್ಡ ಅಪಾಯ ಹಾಗೂ ಅವಕಾಶ ಎರಡೂ ಇದೆ. ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭವಾಗುತ್ತಿದ್ದು, ಮೊದಲು ಪ್ರತಿಯೊಬ್ಬರ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಬೇಕು

 ಬೆಂಗಳೂರು :  ನಾವೆಲ್ಲಾ ತುಂಬಾ ಎಚ್ಚರಿಕೆಯಿಂದ ಇರಬೇಕು. ನಮ್ಮ ಮುಂದೆ ದೊಡ್ಡ ಅಪಾಯ ಹಾಗೂ ಅವಕಾಶ ಎರಡೂ ಇದೆ. ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭವಾಗುತ್ತಿದ್ದು, ಮೊದಲು ಪ್ರತಿಯೊಬ್ಬರ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಬೇಕು. ಇಲ್ಲದಿದ್ದರೆ ಗ್ಯಾರಂಟಿ ಯೋಜನೆಗಳು ಸಿಗುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.

ಬಿಎಲ್ಎ ಹಾಗೂ ಬಿಎಲ್ಎ2 ಹೋಗಿ ಬಿಎಲ್ಓ ನೀಡುವ ಅರ್ಜಿಗಳನ್ನು ತೆಗೆದುಕೊಂಡು ಹೋಗಿ. ಒಂದು ದಿನಕ್ಕೆ 50 ಅರ್ಜಿ ನೀಡಲು ಅವಕಾಶವಿದೆ. ನೀವು ಈ ಅರ್ಜಿಗಳನ್ನು ಜನರಿಗೆ ನೀಡಿ, ಅರ್ಜಿ ತುಂಬಿಸಿ, ದಾಖಲೆ ಹಾಗೂ ಅವರ ಸಹಿಯೊಂದಿಗೆ ಬಿಎಲ್ಓಗಳಿಗೆ ಸಲ್ಲಿಕೆ ಮಾಡಬೇಕು. ನೀವು ಜನರಿಗೆ ಮತದಾನದ ಹಕ್ಕು ಕೊಡಿಸಿ ಎಂದು ಕಾಂಗ್ರೆಸ್‌ ಕಾರ್ಯಕರ್ತರಿಗೆ ಕರೆ ನೀಡಿದರು.

ಈಗ ನಮ್ಮ ಮುಂದೆ ದೊಡ್ಡ ಅಪಾಯ ಇದೆ. ಎಸ್ಐಆರ್ ಎಂದರೆ, ಇಡೀ ಮತಪಟ್ಟಿಯನ್ನು ಹೊಸದಾಗಿ ರಚಿಸುವುದು. ಬಿಎಲ್ಎ ನೀಡುವ ಎನ್ಯುಮರೇಷನ್ ಫಾರಂನ್ನು ದಾಖಲೆ ಸಮೇತ ಸಲ್ಲಿಸಿದಾಗ ಮಾತ್ರ ನಿಮಗೆ ಮತದಾನದ ಹಕ್ಕು ಸಿಗುತ್ತದೆ. ಕೆಲವರು ಮ್ಯಾಪಿಂಗ್ ಆಗಿದೆ ಎಂದು ಸುಮ್ಮನಾಗುತ್ತಾರೆ. ಇದರಿಂದ ನಿಮ್ಮ ಮತ ಉಳಿಯುವುದಿಲ್ಲ. 99% ಮ್ಯಾಪಿಂಗ್ ಆದರೂ 50% ಮತ ತೆಗೆದುಹಾಕುವ ಸಾಧ್ಯತೆ ಇದೆ ಎಂದು ಶಿವಕುಮಾರ್ ಎಚ್ಚರಿಸಿದರು.

ಪಶ್ಚಿಮ ಬಂಗಾಳದಲ್ಲಿ, ತಮಿಳುನಾಡಿನಲ್ಲಿ ಏನಾಗಿದೆ ಎಂದು ನಿಮಗೆಲ್ಲಾ ಅರಿವಿದೆ. ನೀವೆಲ್ಲರೂ ಮೊದಲು ಮನೆ, ಮನೆಗೆ ಹೋಗಿ ವಾಸ ದೃಢೀಕರಣ ಪತ್ರ, ಪಿಂಚಣಿ ಪ್ರಮಾಣ ಪತ್ರ ಸೇರಿದಂತೆ ಎಲ್ಲ ದಾಖಲೆ ನೀಡಿದಾಗ ಮಾತ್ರ ಮತದಾನದ ಹಕ್ಕು ಉಳಿಯುತ್ತದೆ ಎಂದು ಜನರಿಗೆ ಹೇಳಿದರು.

ಮತ ಹಕ್ಕು ಇಲ್ಲದಿದ್ದರೆ ಗ್ಯಾರಂಟಿ ಇಲ್ಲ:

ಹೊರ ರಾಜ್ಯಗಳಲ್ಲಿ ಮತದಾನದ ಹಕ್ಕು ಇಲ್ಲದವರಿಗೆ ಸರ್ಕಾರದ ಯೋಜನೆ ತೆಗೆಯಲು ಹೊರಟಿದ್ದಾರೆ. ಮುಂದೆ ಮತದಾನವಿಲ್ಲವಿದ್ದರೆ ಕೇಂದ್ರದಿಂದ ಯಾವುದೇ ಹಕ್ಕನ್ನು ನೀಡುವುದಿಲ್ಲ. ಹೀಗಾಗಿ, ನಮ್ಮ ರಾಜ್ಯದವರಿಗೆ ತೊಂದರೆ ಆಗಬಾರದು. ವೃದ್ದಾಪ್ಯ ವೇತನ, ವಿಧವಾ ವೇತನ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಕಿತ್ತು ಹಾಕುವುದು ನಮ್ಮ ಉದ್ದೇಶವಲ್ಲ. ನಮ್ಮ ಯೋಜನೆಗಳು ನೈಜ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮುಂದಾಗಿದ್ದೇವೆ. ಹೀಗಾಗಿ, ಮತ ಹಕ್ಕು ಇಲ್ಲದಿದ್ದರೆ ಗ್ಯಾರಂಟಿ ಸಿಗುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ನಮ್ಮ ರಾಜ್ಯದವರಿಗೆ ಮಾತ್ರ ನಮ್ಮ ಯೋಜನೆ:

ಗೃಹಜ್ಯೋತಿ ಯೋಜನೆಯಲ್ಲಿ ನಮ್ಮ ರಾಜ್ಯದವರು ಉಚಿತ ವಿದ್ಯುತ್ ಪಡೆಯುತ್ತಿದ್ದಾರಾ?. ಬೇರೆ ರಾಜ್ಯದವರು ಪಡೆಯುತ್ತಿದ್ದಾರಾ? ಎಂದು ಪರಿಶೀಲನೆ ಮಾಡಬೇಕು. ನಮ್ಮ ರಾಜ್ಯದಲ್ಲಿ ಈಗಾಗಲೇ 20 ಲಕ್ಷ ಜನರು ಹೊರ ರಾಜ್ಯಗಳಿಂದ ಬಂದು ವಿವಿಧ ಕೆಲಸ ಮಾಡುತ್ತಿದ್ದಾರೆ. ಅವರ ಮತ ಇಲ್ಲಿದೆಯೇ?, ಇಲ್ಲವೇ? ಎಂದು ಪರಿಶೀಲನೆ ಮಾಡಬೇಕಲ್ಲವೇ?. 

ನಾವು ನಮ್ಮ ಮತದಾರರಿಗೆ ಶಕ್ತಿ ನೀಡಬೇಕೋ?, ಹೊರಗಿನವರಿಗೆ ಶಕ್ತಿ ನೀಡಬೇಕೋ?. ಇಲ್ಲಿ ಮತದಾನದ ಹಕ್ಕು ಇರುವವರಿಗೆ ಯೋಜನೆ ನೀಡುವುದು ನಮ್ಮ ಕರ್ತವ್ಯ. ಬಸ್ ಗಳಲ್ಲೂ ರಾಜ್ಯದ ಮಹಿಳೆಯರಿಗೆ ಗುರುತಿನ ಚೀಟಿ ನೀಡಲು ಮುಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಗೃಹಲಕ್ಷ್ಮಿ ಹಣ ಅನರ್ಹರಿಗೆ ಸೇರುತ್ತಿದೆ. ಸಾಲ ಕೊಟ್ಟವರು ಚೆಕ್ ಬರೆಸಿಕೊಂಡು ಈ ಹಣವನ್ನು ಡ್ರಾ ಮಾಡಿಕೊಳ್ಳುತ್ತಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಮೃತರಾಗಿದ್ದರೂ ಅವರ ಹೆಸರಿನಲ್ಲಿ ಬೇರೆಯವರು ಈ ಹಣ ಪಡೆಯುತ್ತಿದ್ದಾರೆ. ಇವೆಲ್ಲದಕ್ಕೂ ಕಡಿವಾಣ ಹಾಕಲು ನಮ್ಮ ಸರ್ಕಾರ ಮುಂದಾಗಿದೆ. ಗ್ಯಾರಂಟಿ ಯೋಜನೆಗಳನ್ನು ಯಾವ ರೀತಿ ಶಿಸ್ತುಬದ್ಧವಾಗಿ ರೂಪಿಸಬೇಕು ಎಂದು ನಮ್ಮ ರೇವಣ್ಣ ಅವರ ತಂಡ ಸಮಾಲೋಚನೆ ಮಾಡುತ್ತಿದೆ ಎಂದು ಶಿವಕುಮಾರ್ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಚಿವ ಸಂಪುಟದಲ್ಲಿ ಲಿಂಗಾಯತ ಒಳ ಪಂಗಡಕ್ಕಿಲ್ಲ ಪ್ರಾಶಸ್ತ್ಯ : ಅಸಮಾಧಾನ
ತಾಳ್ಮೆಯಿಂದ ಇರಿ, ನಾನೂ ತಾಳ್ಮೆಯಿಂದಿರಲಿಲ್ವೇ? : ಡಿಕೆ