;Resize=(412,232))
ಬೆಂಗಳೂರು : ‘ನಮ್ಮಂತೆ ಬೇರೆ ಯಾವುದೇ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಗೆ ಯಾವ ರಾಜ್ಯವೂ ಸಹಕಾರ ನೀಡಿಲ್ಲ. ಯಾವುದೇ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ನೀಡದಷ್ಟು ಸಹಕಾರವನ್ನು ನಾವು ನೀಡಿದ್ದೇವೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಾವು ಯಾರೂ ಕೈಹಾಕಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದ ಬಳಿ ಡಾ.ಬಾಬು ಜಗಜೀವನ್‌ರಾಮ್ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅವರು, ‘ನಮ್ಮಂತೆ ಬೇರೆ ಯಾವುದೇ ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಗೆ ಸಹಕಾರ ನೀಡಿಲ್ಲ. ಪ್ರತಿಯೊಬ್ಬ ಅರ್ಹರಿಗೂ ಮತದಾನದ ಹಕ್ಕು ನೀಡುವುದು ನಮ್ಮ ಸರ್ಕಾರದ ಗುರಿ. ಹೀಗಾಗಿಯೇ ಎಸ್ಐಆರ್ ಪ್ರಕ್ರಿಯೆಗೆ ನಮ್ಮ ವಿರೋಧವಿದ್ದರೂ ಜನರ ಹಕ್ಕು ರಕ್ಷಣೆಗೆ ಕೆಲಸ ಮಾಡುತ್ತಿದ್ದೇವೆ. ನಾವು ಆಯೋಗದ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.
ಆದರೆ, ‘ಎಸ್ಐಆರ್ ವಿಚಾರದಲ್ಲಿ ನಮ್ಮದೇ ಆದ ಭಿನ್ನಾಭಿಪ್ರಾಯವಿದೆ. ಈ ಪ್ರಕ್ರಿಯೆಯ ವೇಳಾಪಟ್ಟಿ ಬಗ್ಗೆ ನಮಗೆ ಅಸಮಾಧಾನವಿದ್ದು, ಅದರ ವಿರುದ್ಧವೂ ಕೋರ್ಟ್ ಮೊರೆ ಹೋಗುತ್ತೇವೆ. ಆದರೆ ಎಲ್ಲರಿಗೂ ಮತದಾನದ ಹಕ್ಕು ರಕ್ಷಿಸಬೇಕು ಎಂಬ ಹಿನ್ನೆಲೆಯಲ್ಲಿ ಸರ್ಕಾರ ಚುನಾವಣಾ ಆಯೋಗದ ಜತೆ ಕೈ ಜೋಡಿಸಿದೆ. ನಿಮ್ಮ ಮತದಾನದ ಹಕ್ಕು, ಬದುಕಿನ ಹಕ್ಕು ಎಂದು ಜನರಿಗೆ ಜಾಗೃತಿ ಮೂಡಿಸುತ್ತಿದ್ದೇವೆ. ಜನರಲ್ಲಿ ಜಾಗೃತಿ ಮೂಡುತ್ತಿರುವುದರಿಂದ ವಿರೋಧಪಕ್ಷಗಳಿಗೆ ಭಯ ಹುಟ್ಟಿದೆ‘ ಎಂದು ಹೇಳಿದರು.
‘ಎಸ್ಐಆರ್ ಪ್ರಕ್ರಿಯೆಗೆ ನಮ್ಮ ವಿರೋಧವಿದೆ. ಎಸ್‌ಐಆರ್ ಮೂಲಕ ಬಡವರು ಹಾಗೂ ಅಲ್ಪಸಂಖ್ಯಾತರ ಮತದಾನದ ಹಕ್ಕು ಕಸಿಯುವುದು ವಿರೋಧ ಪಕ್ಷಗಳ ಕುತಂತ್ರ. ಹೀಗಾಗಿ ಜನರ ಮತದಾನದ ಹಕ್ಕು ರಕ್ಷಣೆಗಾಗಿ ನಮ್ಮ ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ’ ಎಂದೂ ಡಿಕೆಶಿ ನುಡಿದರು.
‘ಎಲ್ಲಾ ಪಕ್ಷದವರು ಬಿಎಲ್ಎ2 ನೇಮಕ ಮಾಡಲು ಚುನಾವಣಾ ಆಯೋಗವೇ ಅವಕಾಶ ನೀಡಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳದವರು ಬಿಎಲ್ಎ ನೇಮಕ ಮಾಡಿದ್ದಾರೆ. ಸಂಘ, ಸಂಸ್ಥೆಗಳು ನೆರವು ನೀಡಲು ಅವಕಾಶ ಕಲ್ಪಿಸಲಾಗಿದೆ’ ಎಂದರು.
‘ಇದು ನನ್ನ ವೈಯಕ್ತಿಕ ವಿಚಾರವಲ್ಲ. ಮೊದಲ ಬಾರಿಗೆ ಪ್ರತಿ ಬೂತ್ ನಲ್ಲಿ ಜನರಿಗಾಗಿ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ನಮ್ಮ ಕಾರ್ಯಕ್ಕೆ ಅವರು ಅಭಿನಂದನೆ ಸಲ್ಲಿಸಬೇಕು. ಅದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಬರಲಿ, ಬಂದು ತನಿಖೆ ಮಾಡಲಿ. ಶಾಸಕರು, ಪರಾಜಿತ ಅಭ್ಯರ್ಥಿಗಳಿಗೆ ಮತಪಟ್ಟಿ ರಕ್ಷಣೆ ಬಗ್ಗೆ ಮಾರ್ಗದರ್ಶನ ನೀಡುವುದು ನಮ್ಮ ಕರ್ತವ್ಯವಲ್ಲವೇ? ಎಂದು ಶಿವಕುಮಾರ್ ಪ್ರಶ್ನಿಸಿದರು.
ಅಕ್ರಮ ವಲಸಿಗರನ್ನು ಯಾಕೆ ಓಡಿಸಲಿಲ್ಲ?:
ರಾಜ್ಯದಲ್ಲಿ ಸುಮಾರು 4.50 ಕೋಟಿ ಜನ ಜಾತಿ ಪ್ರಮಾಣಪತ್ರ ತೆಗೆದುಕೊಂಡಿದ್ದು, ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದೇವೆ. ಇನ್ನು ನಿವಾಸ ದೃಢೀಕರಣ ಪತ್ರ ನೀಡಲು ಉಪ ತಹಸೀಲ್ದಾರ್ ಅವರಿಗೆ ಅಧಿಕಾರ ನೀಡಲಾಗಿದೆ. 2002ನೇ ಮತಪತ್ರ ದಾಖಲೆ ಯಾರ ಬಳಿಯೂ ಇರುವುದಿಲ್ಲ. ಇದನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ವಿರೋಧ ಪಕ್ಷಗಳು ಸುಮ್ಮನೆ ಅಕ್ರಮ ಬಾಂಗ್ಲಾ ವಲಸಿಗರು ಎಂದು ಹೇಳುತ್ತಿದ್ದಾರೆ. ನಿಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಯಾಕೆ ಅವರನ್ನು ಓಡಿಸಲಿಲ್ಲ? ಆಗ ಯಾರು ತಡೆದಿದ್ದರು? ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದರು.