ಹಾಸನ : ‘ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಎಂಬುದು ಮಾಧ್ಯಮದ ಸೃಷ್ಟಿ. ಅಂತಹ ಯಾವುದೇ ಕ್ರಾಂತಿ ನಡೆಯಲ್ಲ. ನಾಯಕತ್ವ ಬದಲಾವಣೆ ನಿಟ್ಟಿನಲ್ಲಿ ಯಾವುದೇ ಕೂಗು ಇಲ್ಲ. ಅದೆಲ್ಲವೂ ಊಹಾಪೋಹ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮದವರು ನವೆಂಬರ್ ಕ್ರಾಂತಿ ಕುರಿತು ಕೇಳಿದ ಪ್ರಶ್ನೆಗೆ ವ್ಯಂಗ್ಯವಾಡಿದ ಸಿಎಂ, ‘ಯಾವ ಕ್ರಾಂತಿಯೂ ಇಲ್ಲ, ಅದು ಮಾಧ್ಯಮಗಳ ಭ್ರಾಂತಿ. ಮಾಧ್ಯಮಗಳದ್ದೇ ಸೃಷ್ಟಿ. ಡಿನ್ನರ್ ಪಾರ್ಟಿಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಶಾಸಕರು, ಸಚಿವರು, ನಾವು ಆಗಾಗ ಸೇರುತ್ತೇವೆ. ಪಕ್ಷದ ವಿಷಯ ಚರ್ಚಿಸುತ್ತೇವೆ. ಜೊತೆಯಾಗಿ ಊಟ ಮಾಡುತ್ತೇವೆ. ಅದರಲ್ಲಿ ರಾಜಕೀಯ ಅರ್ಥ ಹುಡುಕುವುದು ಬೇಡ’ ಎಂದು ಸ್ಪಷ್ಟನೆ ನೀಡಿದರು.
ಕಳೆದ ಮೂರಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ. ಕೋರ್ಟ್‌ನಿಂದ ಹಸಿರು ನಿಶಾನೆ ಬಂದ ತಕ್ಷಣ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸುತ್ತೇವೆ. ಪ್ರಜಾಪ್ರಭುತ್ವ ಬಲವಾಗಬೇಕಾದರೆ ನಿಯಮಿತ ಚುನಾವಣೆಗಳು ನಡೆಯಲೇಬೇಕು ಎಂದರು.
ಜೆಡಿಎಸ್ ಶಾಸಕರು ಅನುದಾನ ತಾರತಮ್ಯದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಕ್ಕೆ ಗರಂ ಆದ ಸಿಎಂ, ಜೆಡಿಎಸ್ ಮತ್ತು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಮ್ಮ ಶಾಸಕರಿಗೆ ಎಷ್ಟು ಅನುದಾನ ನೀಡಿದರು? ನಾವು ಎಷ್ಟು ಕೊಡಬೇಕೋ ಅಷ್ಟು ಕೊಟ್ಟಿದ್ದೇವೆ ಎಂದರು.
1 ವರ್ಷ ಹಿಂದೆಯೇ ನಾನು
ಸಿಎಂ ರೇಸ್‌ನಿಂದ ಹಿಂದಕ್ಕೆ
ನಾನು ಕಳೆದ 1 ವರ್ಷದ ಹಿಂದೆಯೇ ಸಿಎಂ ರೇಸ್‌ನಿಂದ ಹೊರ ಬಂದಿದ್ದೇನೆ. ನವೆಂಬರ್‌ನಲ್ಲಿ ನಮ್ಮ ಪಕ್ಷದಲ್ಲಿ ಯಾವ ಕ್ರಾಂತಿಯೂ ನಡೆಯುವುದಿಲ್ಲ. ನಾನು ಯಾಕೆ ಸಿಎಂ ರೇಸ್‌ನಿಂದ ಹಿಂದೆ ಸರಿದೆ ಎನ್ನುವುದು ಈಗ ಅಪ್ರಸ್ತುತ. ಸಿಎಂ ಬದಲಾವಣೆ ನಿರ್ಧರಿಸುವುದು ನಾನಲ್ಲ.
- ಸತೀಶ ಜಾರಕಿಹೊಳಿ, ಸಚಿವ