ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದ ಹನಿಟ್ರ್ಯಾಪ್ ವಿರುದ್ಧ ಕ್ರಮಕ್ಕೆ ಪಕ್ಷಾತೀತ ಆಗ್ರಹ

ಸಾರಾಂಶ

ವಿಧಾನ ಮಂಡಲದ ಅಧಿವೇಶನದಲ್ಲಿ ಶುಕ್ರವಾರ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದ ಹನಿಟ್ರ್ಯಾಪ್ ಪ್ರಕರಣ ಶನಿವಾರ ಸದನದ ಹೊರಗೆ ಸುದ್ದು ಮಾಡಿದೆ. ಸಹಕಾರ ಸಚಿವ ರಾಜಣ್ಣ ಸೇರಿದಂತೆ ಹಲವು ರಾಜಕೀಯ ನಾಯಕರು ಪಕ್ಷಾತೀತವಾಗಿ ಪರ-ವಿರೋಧದ ಮಾತುಗಳನ್ನಾಡಿದ್ದಾರೆ

 ಬೆಂಗಳೂರು : ವಿಧಾನ ಮಂಡಲದ ಅಧಿವೇಶನದಲ್ಲಿ ಶುಕ್ರವಾರ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದ ಹನಿಟ್ರ್ಯಾಪ್ ಪ್ರಕರಣ ಶನಿವಾರ ಸದನದ ಹೊರಗೆ ಸುದ್ದು ಮಾಡಿದೆ. ಸಹಕಾರ ಸಚಿವ ರಾಜಣ್ಣ ಸೇರಿದಂತೆ ಹಲವು ರಾಜಕೀಯ ನಾಯಕರು ಪಕ್ಷಾತೀತವಾಗಿ ಪರ-ವಿರೋಧದ ಮಾತುಗಳನ್ನಾಡಿದ್ದಾರೆ. ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ತನಿಖೆಗೆ ಒತ್ತಾಯಿಸಿದ್ದಾರೆ.

ಕೋಲಾರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು, ಹನಿಟ್ರ್ಯಾಪ್ ಪ್ರಕರಣ ಕುರಿತಂತೆ ಎರಡ್ಮೂರು ದಿನದಲ್ಲಿ ಸರ್ಕಾರಕ್ಕೆ, ಗೃಹ ಸಚಿವರಿಗೆ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.

ಹನಿಟ್ರ್ಯಾಪ್ ಪ್ರಕರಣದಲ್ಲಿ ತುಮಕೂರು ಇಬ್ಬರು ಪ್ರಭಾವಿ ಸಚಿವರು ಇದ್ದಾರೆ ಎಂದು ಮಾಧ್ಯಮಗಳಲ್ಲಿ ತೋರಿಸಿದರು, ನಾನ್ಯಾಕೆ ಮಾತಾಡಿ ಮೈಮೇಲೆ ಎಳೆದುಕೊಳ್ಳಬೇಕು ಅಂತ ಸುಮ್ಮನಿದ್ದೆ. ಆದರೆ ಹೆಸರು ಹೇಳದೆ ಸಿದ್ದರಾಮಯ್ಯಗೆ ಬೇಕಾಗಿರುವ ಸಚಿವರು ಇದ್ದಾರೆ ಎಂದು ಸುನಿಲ್ ಕುಮಾರ್ ಹೇಳಿದರು. ಮರು ದಿನ ನಾನು, ಪರಮೇಶ್ವರ್ ಇಬ್ಬರು ಇದ್ದ ವೇಳೆ ನನ್ನ ಹೆಸರು ಹೇಳಿ ಯತ್ನಾಳ್ ಪ್ರಸ್ತಾಪ ಮಾಡಿದ್ರು. ಅದಕ್ಕೆ ಪ್ರತಿಕ್ರಿಯೆ ನೀಡದಿದ್ರೆ ತಪ್ಪಾಗುತ್ತೆ ಎಂದು ತನಿಖೆ ಮಾಡಿ ಎಂದು ನಾನು ಹೇಳಿದ್ದೇನೆ ಎಂದು ರಾಜಣ್ಣ ತಿಳಿಸಿದರು.

ಸಿಬಿಐ ತನಿಖೆಯಾಗಲಿ- ರವಿ: ಚಿಕ್ಕಮಗಳೂರಲ್ಲಿ ಶಾಸಕ ಸಿ.ಟಿ. ರವಿ ಮಾತನಾಡಿ, ಹಿರಿಯ ಸಚಿವ ಮತ್ತೊಬ್ಬ ಹಿರಿಯ ಸಚಿವನ ರಾಜಕೀಯ ಜೀವನ ಮುಗಿಸುವುದಕ್ಕೆ ಹನಿಟ್ರ್ಯಾಪ್ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ಸಚಿವರೊಬ್ಬರು ಹನಿಟ್ರ್ಯಾಪ್ ಬಗ್ಗೆ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ. ಜಡ್ಜ್, ಶಾಸಕರು, ಮುಖಂಡರು, ಮಂತ್ರಿಗಳನ್ನು ಹನಿ ಟ್ರ್ಯಾಪ್ ಮಾಡಿಸಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ. ಈ ಬಗ್ಗೆ ನ್ಯಾಯಾಂಗ ಅಥವಾ ಸಿಬಿಐ ತನಿಖೆಯಾಗಬೇಕು ಎಂದರು.

ರಾಷ್ಟ್ರಮಟ್ಟದಲ್ಲೇ ಕಾಯ್ದೆ ಬರಲಿ - ಮಹಾದೇವಪ್ಪ: ಹನಿ ಟ್ರ್ಯಾಪ್ ಮಾಡುವವರಿಗೆ ಕಠಿಣ ಶಿಕ್ಷೆಯಾಗುವ ರೀತಿಯಲ್ಲಿ ರಾಷ್ಟ್ರ ಮಟ್ಟದಲ್ಲೇ ಕಾಯ್ದೆ ತರಬೇಕು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು. ಮೈಸೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹನಿಟ್ರ್ಯಾಪ್ ಪ್ರಕರಣದಿಂದ ರಾಜಣ್ಣ ಅವರ ಅಗ್ರೇಸಿವ್ ನೆಸ್ ಏನು ಕಡಿಮೆಯಾಗುವುದಿಲ್ಲ. ರಾಜಣ್ಣ ಹನಿಟ್ರ್ಯಾಪ್ ಬಗ್ಗೆ ಉನ್ನತ ಮಟ್ಟದ ತನಿಖೆಯಾಗುತ್ತದೆ ಎಂದು ಹೇಳಿದರು.

ಹಗರಣಗಳಿಂದ ಕೂಡಿದ ಸರ್ಕಾರ - ಕಾರಜೋಳ:  ಮಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಅಸೆಂಬ್ಲಿಯಲ್ಲಿ ಹನಿಟ್ರ್ಯಾಪ್‌ ಬಗ್ಗೆ ಕಾಂಗ್ರೆಸ್‌ ಸದಸ್ಯರೇ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಭ್ರಷ್ಟಾಚಾರ, ಅನೈತಿಕತೆ ಹಗರಣಗಳಿಂದ ಕೂಡಿದ ಸರ್ಕಾರಕ್ಕೆ ಜನರನ್ನು ಪ್ರತಿನಿಧಿಸುವ ನೈತಿಕತೆ ಇಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಮುಖ್ಯಮಂತ್ರಿ ರಾಜಿನಾಮೆಗೆ ಒತ್ತಾಯಿಸಿದರು.

ಆಂತರಿಕ ಚರ್ಟೆ ಮಾಡಬೇಕಿತ್ತು - ಮೊಯ್ಲಿ:

ಹನಿಟ್ರ್ಯಾಪ್‌ ವಿಚಾರ ಹೊಸದೇನಲ್ಲ. ಸದನದಲ್ಲಿ ಹನಿಟ್ರ್ಯಾಪ್ ಬಗ್ಗೆ ಚರ್ಚೆ ಹುಟ್ಟು ಹಾಕಿದ್ದೇ ನಮ್ಮ ಪಕ್ಷದವರು. ನಮ್ಮ ಪಕ್ಷದ ಸಚಿವರು ಇದನ್ನು ಆಂತರಿಕವಾಗಿ ಚರ್ಚೆ ಮಾಡಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಪ್ರತಿಕ್ರಿಯಿಸಿದ್ದಾರೆ. ಇಂತಹ ವಿಷಯದ ಬಹಿರಂಗ ಚರ್ಚೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತದೆ. ವಿರೋಧ ಪಕ್ಷದವರು ಸದಾಕಾಲ ಹನಿಟ್ರ್ಯಾಪ್‌ನಂಥ ವಿಷಯಗಳನ್ನು ಹುಡುಕುತ್ತಲೇ ಇರುತ್ತಾರೆ. ಅವರ ಪ್ರಚೋದನೆಗೆ ಯಾರೂ ಒಳಗಾಗಬಾರದು ಎಂದೂ ಅವರು ತಿಳಿಸಿದರು.

Share this article