ಹಿರಿಯರನ್ನು ವಿಶ್ವಾಸಕ್ಕೆ ಪಡೆಯದ್ದೇ ರಾಜ್ಯ ಬಿಜೆಪಿ ಭಿನ್ನಮತಕ್ಕೆ ಕಾರಣ

KannadaprabhaNewsNetwork | Updated : Mar 20 2024, 03:20 PM IST

ಸಾರಾಂಶ

ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯಲ್ಲಿ ಉದ್ಭವಿಸಿದ್ದ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿನ ಗೊಂದಲ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲೂ ಪುನರಾವರ್ತಿತಗೊಂಡಿದ್ದು, ಪಕ್ಷದ ವರಿಷ್ಠರು ರಾಜ್ಯ ನಾಯಕತ್ವವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ 

ವಿಜಯ್ ಮಲಗಿಹಾಳ
ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿಯಲ್ಲಿ ಉದ್ಭವಿಸಿದ್ದ ಟಿಕೆಟ್ ಹಂಚಿಕೆ ಪ್ರಕ್ರಿಯೆಯಲ್ಲಿನ ಗೊಂದಲ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲೂ ಪುನರಾವರ್ತಿತಗೊಂಡಿದ್ದು, ಪಕ್ಷದ ವರಿಷ್ಠರು ರಾಜ್ಯ ನಾಯಕತ್ವವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬ ಅಸಮಾಧಾನ ಬಿಜೆಪಿ ಪಾಳೆಯದಲ್ಲಿ ಕಂಡು ಬಂದಿದೆ.

ಪಕ್ಷದ ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸುವ ನಿರ್ಧಾರ ಕೈಗೊಂಡರೂ ಅದನ್ನು ಮುಂಚಿತವಾಗಿಯೇ ಆಯಾ ನಾಯಕರನ್ನು ಕರೆದು ಗೌರವಯುತವಾಗಿ ತಿಳಿಸುವ ಬದಲು taken for granted ಎಂಬಂತೆ ಕೊನೆಯ ಕ್ಷಣದವರೆಗೂ ಏನನ್ನೂ ಹೇಳದೆ ನಿರ್ಲಕ್ಷ್ಯ ವಹಿಸುವುದು ಅಪಮಾನ ಮಾಡಿದಂತೆ ಎಂಬ ಆಕ್ಷೇಪ ಬಲವಾಗಿ ಕೇಳಿಬರುತ್ತಿದೆ.

ಹಾಲಿ ಸಂಸದರಿಗೆ ಟಿಕೆಟ್ ತಪ್ಪಿರುವ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡ ಬಳಿಕವೇ ಟಿಕೆಟ್ ಕೈತಪ್ಪಿರುವ ಬಗ್ಗೆ ಮಾಹಿತಿ ತಲುಪಿದೆ. ಹಾಲಿ ಸಂಸದರು ಅದರಲ್ಲೂ ಹಿರಿಯ ಸಂಸದರು ಕೊನೆಯ ಹಂತದವರೆಗೂ ಈ ಬಾರಿ ಸ್ಪರ್ಧಿಸುತ್ತೇವೆಯೋ ಅಥವಾ ಇಲ್ಲವೋ ಎಂಬ ಗೊಂದಲದಲ್ಲೇ ಕಾಯುತ್ತಿರಬೇಕು ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಹಲವು ಮಾಜಿ ಸಚಿವರು, ಹಿರಿಯ ಮುಖಂಡರಿಗೆ ಟಿಕೆಟ್ ನೀಡುವುದಿಲ್ಲ ಎಂಬುದನ್ನು ಯಾರೊಬ್ಬರೂ ಅಧಿಕೃತವಾಗಿ ಕರೆದು ಹೇಳಲೇ ಇಲ್ಲ. 

ಅವರ ಹಿರಿತನಕ್ಕೆ ಸಲ್ಲಬೇಕಾದ ಗೌರವ ವರಿಷ್ಠರಿಂದ ಸಲ್ಲಲೇ ಇಲ್ಲ. ಈ ಕಾರಣಕ್ಕಾಗಿಯೇ ಹಲವರು ಪಕ್ಷ ತೊರೆದು ಹೋದದ್ದು ಕಣ್ಣ ಮುಂದೆಯೇ ಇದೆ.ಈಗ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಂಥದ್ದೇ ಆರಂಭವಾಗಿದೆ. 

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಹಾಲಿ ಸಂಸದರಾದ ಪ್ರತಾಪ್ ಸಿಂಹ, ಕರಡಿ ಸಂಗಣ್ಣ, ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಪುತ್ರ ಕಾಂತೇಶ್‌ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂಬುದನ್ನು ಮುಂಚಿತವಾಗಿಯೇ ಸುಳಿವು ನೀಡಿದ್ದರೆ ಇಷ್ಟೊಂದು ಗೊಂದಲ ಉಂಟಾಗುತ್ತಿರಲಿಲ್ಲ ಎಂಬ ಚರ್ಚೆ ಪಕ್ಷದಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

‘ಲಕ್ಷಾಂತರ ಜನರ ಪ್ರತಿನಿಧಿಯಾಗಿ ಆಯ್ಕೆಯಾಗಿ ಕೆಲಸ ಮಾಡುತ್ತಿರುವ ಮುಖಂಡನಿಗೆ ಈ ಬಾರಿ ನಿಮಗೆ ಯಾಕೆ ಟಿಕೆಟ್ ನೀಡುವುದಿಲ್ಲ ಎಂಬುದನ್ನು ಎಂಬುದನ್ನು ವರಿಷ್ಠರು ಕರೆದು ಮನವರಿಕೆ ಮಾಡಿಕೊಟ್ಟರೆ ಅಥವಾ ಕಳಪೆ ಸಾಧನೆ ಮಾಡಿದ್ದರೆ ಅದರ ಬಗ್ಗೆ ಸೂಕ್ತ ದಾಖಲೆಗಳನ್ನು ಮುಂದಿಟ್ಟು ಮನವೊಲಿಸಿದರೆ ಅಲ್ಲಿನ ಜನರಿಗೂ ನೀಡುವ ಗೌರವ. 

ಇಲ್ಲದಿದ್ದರೆ ಅಬ್ಬೇಪಾರಿಯಂತೆ ಅಭ್ಯರ್ಥಿಗಳ ಪಟ್ಟಿ ಘೋಷಣೆ ಬಳಿಕವೇ ನಮಗೆ ಟಿಕೆಟ್ ಸಿಕ್ಕಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದರೆ ನಾವೇನು ಅಷ್ಟೊಂದು ಕೆಳಮಟ್ಟದಲ್ಲಿ ಇದ್ದೇವೆಯೇ? ಸುದೀರ್ಘ ಅ‍ವಧಿ ಸಾರ್ವಜನಿಕ ಜೀವನದಲ್ಲಿರುವವರಿಗೆ ಏಕಾಏಕಿ ಟಿಕೆಟ್ ನಿರಾಕರಿಸುವ ಮೂಲಕ ನೋವು ಕೊಟ್ಟು, ಕಣ್ಣೀರು ಹಾಕಿಸುವುದರಿಂದ ಪಕ್ಷಕ್ಕೆ ಪ್ರಯೋಜನ ಆಗುವ ಬದಲು ನಷ್ಟವೇ ಹೆಚ್ಚು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿಯ ಹಿರಿಯ ನಾಯಕರೊಬ್ಬರು ಬೇಸರ ಹೊರಹಾಕಿದರು.

ನೀವು ಪಕ್ಷ ಸಂಘಟನೆ ಮಾಡಿ. ಅಭ್ಯರ್ಥಿಗಳನ್ನು ನಾವು ನಿರ್ಧರಿಸುತ್ತೇವೆ ಎಂಬ ಮಾತನ್ನು ಬಿಜೆಪಿ ವರಿಷ್ಠರು ಕಳೆದ ವಿಧಾನಸಭಾ ಚುನಾವಣೆಯಿಂದಲೂ ಪಕ್ಷದ ರಾಜ್ಯ ನಾಯಕರಿಗೆ ಹೇಳುತ್ತಿದ್ದಾರೆ. ಅಂದರೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಜ್ಯ ನಾಯಕತ್ವಕ್ಕೆ ಮಹತ್ವವೇ ಇಲ್ಲದಂತಾಗಿದೆ.

ರಾಜ್ಯ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಇದೆ. ಹಿಂದೆ ಆ ಕಮಿಟಿ ಹಲವು ಸುತ್ತಿನ ಸಭೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಶಿಫಾರಸು ಮಾಡಿದ ಮೇಲೆ ಒಂದೆರಡು ಬದಲಾವಣೆ ಹೊರತುಪಡಿಸಿ ಬಹುತೇಕ ಅವರಿಗೇ ಟಿಕೆಟ್ ನೀಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಈ ಸಂಪ್ರದಾಯಕ್ಕೆ ತಿಲಾಂಜಲಿ ನೀಡಲಾಗಿದೆ. 

ಆಂತರಿಕ ಸಮೀಕ್ಷೆ ಹಾಗೂ ಹೊಸ ಪ್ರಯೋಗದ ಹೆಸರಲ್ಲಿ ಪಕ್ಷದ ವರಿಷ್ಠರು ರಾಜ್ಯದ ನಾಯಕರ ಅಭಿಪ್ರಾಯವನ್ನು ಲೆಕ್ಕಕ್ಕೇ ಇಟ್ಟುಕೊಳ್ಳದೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಇದು ಬದಲಾಗದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಲಿದೆ ಎಂಬ ಆತಂಕವನ್ನು ರಾಜ್ಯ ಬಿಜೆಪಿಯ ಹಲವು ನಾಯಕರು ಖಾಸಗಿಯಾಗಿ ವ್ಯಕ್ತಪಡಿಸುತ್ತಿದ್ದಾರೆ.

Share this article