ವೀರಶೈವ ಲಿಂಗಾಯತ ಸಮುದಾಯದ ಹೆಸರಲ್ಲಿ ಸಮಾವೇಶ ನಡೆಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಮಾವೇಶ ನಡೆಸದಂತೆ ಹಿತೈಷಿಗಳಿಗೆ ಮತ್ತು ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು : ವೀರಶೈವ ಲಿಂಗಾಯತ ಸಮುದಾಯದ ಹೆಸರಲ್ಲಿ ಸಮಾವೇಶ ನಡೆಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಮಾವೇಶ ನಡೆಸದಂತೆ ಹಿತೈಷಿಗಳಿಗೆ ಮತ್ತು ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ.
ಬಿಜೆಪಿ ಬಂಡಾಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಂಡಕ್ಕೆ ತಿರುಗೇಟು ನೀಡಲು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಬೃಹತ್ ವೀರಶೈವ-ಲಿಂಗಾಯತ ಸಮಾವೇಶ ನಡೆಸಲು ಮುಂದಾಗಿರುವುದನ್ನು ಆಕ್ಷೇಪಿಸಿ ತಕ್ಷಣವೇ ನಿಲ್ಲಿಸುವಂತೆ ತಿಳಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಕೆಲ ಹಿತೈಷಿಗಳು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನನ್ನ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲಿನ ಅಭಿಮಾನದ ಕಾರಣಕ್ಕಾಗಿ ವೀರಶೈವ ಲಿಂಗಾಯತ ಸಮುದಾಯದ ಸರಣಿ ಸಭೆಗಳನ್ನು ನಡೆಸಲು ಹೊರಟಿರುವ ವಿಷಯ ಗಮನಕ್ಕೆ ಬಂದ ತಕ್ಷಣದಲ್ಲೇ ಇದನ್ನು ನಿಲ್ಲಿಸುವಂತೆ ತಿಳಿಸಿದ್ದೇನೆ. ಇದು ಪಕ್ಷಕ್ಕೂ ಮುಜುಗರದ ಸನ್ನಿವೇಶ ಸೃಷ್ಟಿ ಮಾಡಲಿದೆ. ಆದ್ದರಿಂದ ನಮ್ಮ ಹಿತೈಷಿಗಳು ಹಾಗೂ ಅಭಿಮಾನಿಗಳು ತಮ್ಮ ಗಮನವನ್ನು ಪಕ್ಷ ಸಂಘಟನೆಯತ್ತ ಕೇಂದ್ರೀಕರಿಸಬೇಕೇ ಹೊರತು, ಸಮಾಜದ ಹೆಸರಿನಲ್ಲಿ ಸಭೆಗಳನ್ನು ಸಂಘಟಿಸುವ ಪ್ರಯತ್ನಗಳನ್ನು ಈ ಕೂಡಲೇ ನಿಲ್ಲಿಸಬೇಕು ಎಂದಿದ್ದಾರೆ.
ಸಮ ಸಮಾಜ ಕಟ್ಟಲು ತಮ್ಮನ್ನು ಸಮರ್ಪಿಸಿಕೊಂಡ ಬಸವಣ್ಣನವರ ತತ್ವ ಅನುಸರಿಸಿ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು, ‘ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು’ ಎಂಬ ಧ್ಯೇಯದೊಂದಿಗೆ ಆಡಳಿತ ನಡೆಸಿದರು. ಅವರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿರುವ ನಾನು ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದವನು ಎಂಬ ಬಗ್ಗೆ ಕಾಳಜಿ ಪೂರ್ವಕ ಹೆಮ್ಮೆ ಇರಿಸಿಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಸಮಾಜದ ಆಶಯಕ್ಕೆ ಪೂರಕವಾಗಿ ಸರ್ವ ಸಮಾಜಗಳ ಬಗ್ಗೆ ಸಮಭಾವ ಇಟ್ಟುಕೊಂಡು ಒಟ್ಟು ಸಮಾಜದ ಏಳಿಗೆ ಹಾಗೂ ಅಭಿವೃದ್ಧಿಗಾಗಿ ಚಿಂತಿಸುವವನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಸಮಗ್ರ ಕರ್ನಾಟಕದ ಶ್ರೇಯೋಭಿವೃದ್ಧಿಗಾಗಿ ಮತ್ತು ಪ್ರಧಾನಿ ಮೋದಿ ಅವರ ವಿಕಸಿತ ಭಾರತದ ಮಹಾ ಸಂಕಲ್ಪದ ಗುರಿ ಸಾಧಿಸಲು ಪರಿಶ್ರಮಿಸುತ್ತಿರುವ ಬಿಜೆಪಿ ಸಿದ್ಧಾಂತ ಪ್ರತಿಪಾದಿಸುವ ಒಬ್ಬ ನಿಷ್ಠ ಕಾರ್ಯಕರ್ತನಾಗಿ ಹೆಜ್ಜೆ ಇಡುತ್ತಿದ್ದೇನೆ ಎಂದು ಹೇಳಿದ್ದಾರೆ.