;Resize=(412,232))
ಬೆಂಗಳೂರು : ರಾಜ್ಯದಲ್ಲಿ ಎಸ್ಐಆರ್ ಬಳಿಕ ಕೈಬಿಟ್ಟು ಹೋಗಿರುವ ಅರ್ಹ ಮತದಾರರನ್ನು ಪತ್ತೆ ಹಚ್ಚಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಕಾಂಗ್ರೆಸ್ ‘ಮತ ರಕ್ಷಕ ಅಭಿಯಾನ’ ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಪಂಚಾಯ್ತಿ ಮಟ್ಟದಲ್ಲಿ ಮತದಾರರ ನೋಂದಣಾಧಿಕಾರಿ ನೇಮಕ ಸೇರಿದಂತೆ ವಿವಿಧ ಕ್ರಮ ಕೈಗೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಕಾಯ್ದೆಗೆ ತಿದ್ದುಪಡಿ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಎಸ್ಐಆರ್ ಗೊಂದಲ ನಿವಾರಣೆಗಾಗಿ ಹಾಗೂ ಎಸ್ಐಆರ್ ವೇಳೆ ಬಿಟ್ಟು ಹೋಗಿರುವ ಅರ್ಹ ಮತದಾರರ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ. ಮತದಾರ ನೋಂದಣಿ ಅಧಿಕಾರಿಗಳ ನೇಮಕ, ಮತದಾರರ ಪಟ್ಟಿಗೆ ಹೆಸರು ಸೇರಿಸುವ ಪ್ರಕ್ರಿಯೆ ಹಾಗೂ ಕ್ರಮಗಳಿಗೆ ಅವಕಾಶ ಮಾಡಿಕೊಟ್ಟು ಕಾಯ್ದೆಗೆ ತಿದ್ದುಪಡಿ ತರಲಾಗಿದೆ.
ಇದ್ಕಾಗಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಮೂರನೇ ತಿದ್ದುಪಡಿ) ವಿಧೇಯಕ-2026ಕ್ಕೆ ತಿದ್ದುಪಡಿಗೆ ಅನುಮೋದನೆ ನೀಡಲಾಗಿದ್ದು, ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ‘ಮತದಾರರ ಪಟ್ಟಿ ಪರಿಷ್ಕರಣೆ, ಮತದಾರರ ಹೆಸರು ನೋಂದಣಿ, ಪಂಚಾಯ್ತಿ ಮಟ್ಟದಲ್ಲಿ ಮತದಾರರ ನೋಂದಣಾಧಿಕಾರಿ (ಎಆರ್ಒ) ನೇಮಕ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ (ಮೂರನೇ ತಿದ್ದುಪಡಿ) ವಿಧೇಯಕ 2026ಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು. ಎಸ್ಐಆರ್ ಬಗ್ಗೆ ಈಗಲೂ ಸಾಕಷ್ಟು ಗೊಂದಲಗಳಿವೆ. ಮತದಾರರ ಅಂತಿಮ ಪಟ್ಟಿ ಇನ್ನೂ ಪ್ರಕಟಗೊಂಡಿಲ್ಲ. ಒಂದು ವೇಳೆ ಪ್ರಕಟಗೊಳ್ಳದಿದ್ದರೆ, 2011ರ ಜನಗಣತಿ ಪ್ರಕಾರವೇ ಮುಂದುವರಿಯಬೇಕಾಗಬಹುದು. ಇದೆಲ್ಲದರ ಹಿನ್ನೆಲೆಯಲ್ಲಿ ತಿದ್ದುಪಡಿ ವಿಧೇಯಕ ತರಲು ಉದ್ದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇದರ ಜೊತೆಗೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಮಾಸ್ಟರ್ ಪ್ಲಾನ್ (ಮಹಾಯೋಜನೆ) ಅನುಮೋದನೆ ಮತ್ತು ಮಾಸ್ಟರ್ ಪ್ಲಾನ್ಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಎರಡನೇ ತಿದ್ದುಪಡಿ) ವಿಧೇಯಕ 2026ಕ್ಕೂ ಸಂಪುಟ ಸಭೆ ಅನುಮೋದನೆ ನೀಡಿತು ಎಂದು ಡಾ.ಜಿ. ಪರಮೇಶ್ವರ್ ತಿಳಿಸಿದರು.
ಇನ್ನು ಸಣ್ಣಪುಟ್ಟ ಅಗತ್ಯ ತಿದ್ದುಪಡಿಗಳಿಗಾಗಿ ‘ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2026’ಕ್ಕೆ ಅನುಮೋದನೆ ನೀಡಲಾಗಿದೆ. ಇದನ್ನು ಬರುವ ಅಧಿವೇಶನದಲ್ಲಿ ಅಂಗೀಕಾರಕ್ಕಾಗಿ ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಮುಂದಿನ ಸಂಪುಟದಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಸ್ ಬಗ್ಗೆ ಸುಳಿವು
ಮತಾಂತರ ನಿಷೇಧ ಕಾಯ್ದೆ ವಾಪಸ್ ತೆಗೆದುಕೊಳ್ಳುವುದು ಸೇರಿದಂತೆ ಇನ್ನೂ ಹಲವು ವಿಧೇಯಕಗಳು ಮುಂದಿನ ಸಚಿವ ಸಂಪುಟದ ಮುಂದೆ ಬರುವ ಸಾಧ್ಯತೆ ಇದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ಸಂಬಂಧ ವಿಧೇಯಕ ಸಂಪುಟದ ಮುಂದೆ ಬಂದಿಲ್ಲ. ಅಧಿವೇಶನಕ್ಕೆ ಮೊದಲು ಅಂದರೆ ಮುಂದಿನ ಸಂಪುಟದಲ್ಲಿ ಬರಬಹುದು. ಅದು ಸೇರಿದಂತೆ ಇನ್ನೂ ಕೆಲವು ವಿಧೇಯಕಗಳು ಬರುವುದಿದೆ. ಆಯಾ ಇಲಾಖೆಗಳಿಂದ ವಿಧೇಯಕಗಳಿಗೆ ಸಂಬಂಧಿಸಿದ ಪ್ರಸ್ತಾವನೆ ಸಲ್ಲಿಸಲಿವೆ. ಅದನ್ನು ಪರಿಶೀಲಿಸಿ ಸಂಪುಟ ಸೂಕ್ತ ನಿರ್ಣಯ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.
ಇನ್ನು ರೈತರು ಹಾಗೂ ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯುವ ಬಗ್ಗೆಯೂ ಸಂಪುಟದಲ್ಲಿ ಚರ್ಚೆಯಾಗಿಲ್ಲ ಎಂದರು.