ನಾಡಿನ ಸಾಂಸ್ಕೃತಿಕ ನಾಯಕ, ವಚನಕಾರ ಬಸವಣ್ಣ ಅವರ ಕುರಿತು ವಿವಾದಾತ್ಮಕ ಪುಸ್ತಕ ರಚನೆ, ಹೇಳಿಕೆ ಸಂಬಂಧ ಲೇಖಕ ಹಾಗೂ ಯೂಟ್ಯೂಬ್ ಚಾನೆಲ್ ಮಾಲೀಕರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು: ನಾಡಿನ ಸಾಂಸ್ಕೃತಿಕ ನಾಯಕ, ವಚನಕಾರ ಬಸವಣ್ಣ ಅವರ ಕುರಿತು ವಿವಾದಾತ್ಮಕ ಪುಸ್ತಕ ರಚನೆ, ಹೇಳಿಕೆ ಸಂಬಂಧ ಲೇಖಕ ಹಾಗೂ ಯೂಟ್ಯೂಬ್ ಚಾನೆಲ್ ಮಾಲೀಕರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್ಐಆರ್ ದಾಖಲಾಗಿದೆ.
ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ ಅವರು ನೀಡಿದ ದೂರಿನ ಮೇರೆಗೆ ವಿವಾದಾತ್ಮಕ ಪುಸ್ತಕ ‘ಬಸವಮಂಟಪ’ ರಚನೆಕಾರ ರವಿ ಹಂಜ್ ಹಾಗೂ ಪ್ರಕಾಶಕರು ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಎಫ್ಐಆರ್ನಲ್ಲಿ ಏನಿದೆ?:
ಕಳೆದೆರಡು ವರ್ಷಗಳಲ್ಲಿ ಕನ್ನಡ ಪತ್ರಿಕೆಯೊಂದರಲ್ಲಿ ರವಿ ಹಂಜ್ರವರು ಬರೆದ ಅಂಕಣಗಳನ್ನು ಕ್ರೋಢಿಕರಿಸಿ ‘ಬಸವ ಮಂಟಪ’ ಎನ್ನುವ ಪುಸ್ತಕವನ್ನು ಪ್ರಕಟಿಸಲಾಗಿದೆ. ಈ ಪುಸ್ತಕದ ಕುರಿತು ನೀಡುವ ಸಂದರ್ಶನ ವೇಳೆಯಲ್ಲಿ ವಿಶ್ವಗುರು ಬಸವಣ್ಣ ರವರ ಕುರಿತು ಅವಹೇಳನಕಾರಿಯಾಗಿ ರವಿ ಮಾತನಾಡಿದ್ದಾರೆ ಎಂದು ಅರವಿಂದ್ ಜತ್ತಿ ದೂರಿದ್ದಾರೆ.
12ನೇ ಶತಮಾನದಲ್ಲಿ ಸಮಾನತೆ, ಕಾಯಕ, ದಾಸೋಹ, ಸತ್ಯ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕ ಹಾಗೂ ರಾಜ್ಯ ಸರ್ಕಾರದಿಂದ ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಲ್ಪಟ್ಟ ವಿಶ್ವಗುರು ಬಸವಣ್ಣನವರು ಹಾಗೂ ಶರಣ ಪರಂಪರೆಯ ಲಕ್ಷಾಂತರ ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಯಾಗಿದೆ.
ಬಸವ ಮಂಟಪ ಕೃತಿಯ ಚರ್ಚೆಯ ಹೆಸರಿನಲ್ಲಿ ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ವಚನವನ್ನು ಉಲ್ಲೇಖಿಸಿ ಬಸವಣ್ಣನವರನ್ನು ಕಳ್ಳ ಮತ್ತು ಕೊಲೆಗಾರನಂತೆ ಬಿಂಬಿಸಿ ಅವಹೇಳನ ಮಾಡಿರುವುದು ಹಾಗೂ ಲಿಂಗಾಯತ ಪದವನ್ನು ತಿರುಚಿ ಲಿಂಗಾಹತ ಎಂದು ಹೇಳಿದ್ದಾರೆ. ರವಿ ಹಂಜ್ರವರು ಲಿಂಗಾಯತ ಸಮುದಾಯ ಮತ್ತು ಸಮುದಾಯದ ಪೂಜ್ಯರ ಕುರಿತು ಹಲವಾರು ಆಕ್ಷೇಪಾರ್ಯ ಹೇಳಿಕೆಗಳನ್ನು ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಧರ್ಮದಲ್ಲಿ ಒಡಕು
ಧರ್ಮದಲ್ಲಿ ಒಡಕು ಉಂಟುಮಾಡಿ ಪಂಗಡಗಳ ನಡುವೆ ದ್ವೇಷ ಭಾವನೆ ಬಿತ್ತನೆ ಮಾಡುತ್ತಿರುವ ಹಾಗೂ ಸುಳ್ಳು ಹೇಳಿಕೆಗಳನ್ನು ನೀಡಿ ಸಮಾಜದ ಶಾಂತಿ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿರುವ ರವಿ ಹಂಜ್ ಹಾಗೂ ಇದಕ್ಕೆ ಪ್ರಚೋದನೆ ನೀಡಿದ ಪತ್ರಕರ್ತರು ಸೇರಿದಂತೆ ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.