ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
12ನೇ ಶತಮಾನದ ಬಸವಾದಿ ಶರಣರು ರಚಿಸಿದ್ದ ವಚನ ಸಾಹಿತ್ಯ ಸಂರಕ್ಷಣೆ ಮಾಡುವಲ್ಲಿ ಜ್ಞಾನಿ ಚನ್ನಬಸವಣ್ಣನವರ ಪಾತ್ರ ಯಾರೂ ಮರೆಯುವಂತಿಲ್ಲ ಎಂದು ಶಿಕ್ಷಕ ಬಸವರಾಜ ಹಂಚಲಿ ಹೇಳಿದರು.ಪಟ್ಟಣದ ಲಕ್ಷ್ಮೀ ನಗರದ ಕ್ವಾಟಿ ಲಕ್ಷ್ಮೀದೇವಿ ದೇವಸ್ಥಾನದ ಜಾತ್ರಮಹೋತ್ಸವ ಪ್ರಯುಕ್ತ ಶನಿವಾರ ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಘಟಕ ಜಾತ್ರಾಮಹೋತ್ಸವದ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚನ್ನಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಚನ್ನಬಸವಣ್ಣನವರು ವಚನ ಸಾಹಿತ್ಯದ ಉಳಿವಿಗಾಗಿ ಜೀವನವನ್ನೇ ತ್ಯಾಗ ಮಾಡಿದರು. ನಮಗಾಗಿ ವಚನ ಸಾಹಿತ್ಯ ಸಿಗುವಂತೆ ಮಾಡಿದ ಕೀರ್ತಿ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸನಗೌಡ ಪಾಟೀಲ ಹರನಾಳ ಮಾತನಾಡಿ, ಶರಣರ ವಿಚಾರಗಳನ್ನು ಮನೆ ಮನೆಗೆ ಮುಟ್ಟಿಸುವ ಜವಾಬ್ದಾರಿಯನ್ನು ನಾವೆಲ್ಲ ಒಟ್ಟಾಗಿ ಮಾಡಬೇಕಾಗಿದೆ. ಶರಣರ ನಿಜವಾದ ತತ್ವಗಳನ್ನು ಮುಟ್ಟಿಸುವ ಕೆಲಸ ನಮ್ಮದಾಗಬೇಕು. ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳಿವೆ ಎಂದರು.ಅಧ್ಯಕ್ಷತೆಯನ್ನು ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಎಂ.ಜಿ.ಆದಿಗೊಂಡ ವಹಿಸಿದ್ದರು. ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಾತ್ರಾ ಕಮಿಟಿ ಅಧ್ಯಕ್ಷ ಶ್ರೀಶೈಲ ಕುಂಬಾರ, ಅಶೋಕ ಬಡಿಗೇರ, ಲಕ್ಷ್ಮಣ ಅಂಬಿಗೇರ, ರಾಜಕುಮಾರ ಹೊನವಾಡ, ಈರಪ್ಪ ಕುಂಬಾರ ಇತರರು ಇದ್ದರು. ಮಹಾಸಭಾದ ತಾಲೂಕು ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಕಲ್ಯಾಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರು ಹದಿಮೂರು ಸ್ವಾಗತಿಸಿದರು. ಕೊಟ್ರೇಶ ಹೆಗಡ್ಯಾಳ, ಶಿವು ಮಡಿಕೇಶ್ವರ ನಿರೂಪಿಸಿದರು. ಪಿ.ಎಸ್.ಬಾಗೇವಾಡಿ ವಂದಿಸಿದರು.