ಪಟ್ಟಣದ ಸಾರ್ವಜನಿಕ ಗ್ರಂಥಾಲಯದ ಸಿಬ್ಬಂದಿಯ ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯದಿಂದ ಉಂಟಾದ ಅವ್ಯವಸ್ಥೆ ಕಂಡು ದಂಗಾದ ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧಿಕಾರಿಗಳು ಗ್ರಂಥಪಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ

ಕನ್ನಡಪ್ರಭ ವಾರ್ತೆ ನಾಲತವಾಡಪಟ್ಟಣದ ಸಾರ್ವಜನಿಕ ಗ್ರಂಥಾಲಯದ ಸಿಬ್ಬಂದಿಯ ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯದಿಂದ ಉಂಟಾದ ಅವ್ಯವಸ್ಥೆ ಕಂಡು ದಂಗಾದ ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧಿಕಾರಿಗಳು ಗ್ರಂಥಪಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಂಥಾಲಯದ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರಥಮ ದರ್ಜೆ ಸಹಾಯಕ ಮಂಜುನಾಥ ಹೆಬ್ಬಳ್ಳಿ ಹಾಗೂ ಗ್ರಂಥಾಲಯ ಸಹಾಯಕ ಮುರುಗೇಶ ಸಂಗಂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಂಥಾಲಯಕ್ಕೆ ಭೇಟಿ ನೀಡಿದಾಗ ಪುಸ್ತಕಗಳು ಧೂಳು ಹಿಡಿದಿರುವುದು, ಸ್ವಚ್ಛತೆ ಇಲ್ಲದಿರುವುದು ಹಾಗೂ ನಿರ್ವಹಣೆಯ ಕೊರತೆ ಕಂಡುಬಂದಿದೆ. ಇದರಿಂದ ಅಸಮಾಧಾನಗೊಂಡ ಅಧಿಕಾರಿಗಳು ಗ್ರಂಥಪಾಲಕರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ನೋಟಿಸ್ ಜಾರಿ ಮಾಡಿದರು. ನೋಟಿಸ್‌ಗೆ ಕೂಡಲೇ ಉತ್ತರ ನೀಡಬೇಕು ಹಾಗೂ ಪ್ರತಿದಿನ ಗ್ರಂಥಾಲಯದ ಕಾರ್ಯನಿರ್ವಹಣೆಯ ಜಿಪಿಎಸ್‌ ಸಹಿತ ಪೋಟೋ ಕಳುಹಿಸಬೇಕು ಎಂದು ಸೂಚಿಸಿದರು. ಮುಂದೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.ದೂರು ನೀಡಿದ್ದ ರಾಜು ಮಸಿಬನಾಳ ಎಂಬುವರು, ಕರ್ತವ್ಯ ನಿರ್ವಹಿಸದ ಗ್ರಂಥಪಾಲಕರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಅಧಿಕಾರಿಗಳ ಮುಂದೆ ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಈಗ ನೋಟಿಸ್ ನೀಡಲಾಗಿದೆ. ಮುಂದೆ ಕೆಲಸ ಮಾಡದಿದ್ದರೆ ಸಂಬಳ ಪಾವತಿಸದಿರುವ ಜೊತೆಗೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಗ್ರಂಥಪಾಲಕ ಗ್ರಂಥಾಲಯವನ್ನು ನಿತ್ಯ ತೆರೆಯದಿರುವ ಬಗ್ಗೆ ಈಗಾಗಲೇ ಅನೇಕ ಬಾರಿ ದೂರು ನೀಡಿದ್ದೇವೆ. ಇನ್ನು ಮೇಲೂ ಸುಧಾರಣೆಯಾಗದಿದ್ದರೆ ಕೆಲಸದಿಂದ ವಜಾ ಮಾಡಬೇಕು, ಇಲ್ಲವಾದರೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಂದೇ ಧರಣಿ ನಡೆಸುವುದಾಗಿ ಎಚ್ಚರಿಸಿದರು.