ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಕ್ರೀಡಾಪಟುಗಳಿಗೆ ಎಸ್.ಎಸ್.ವಿ.ವಿ ಶಿಕ್ಷಣ ಸಂಸ್ಥೆಯು ನೀಡುತ್ತಿರುವ ಪ್ರೋತ್ಸಾಹ ಅನನ್ಯವಾದದ್ದು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ದೈಹಿಕ, ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ಕುಂಟೋಜಿ ಭಾವೈಕ್ಯತಾ ಹಿರೇಮಠದ ಡಾ.ಶ್ರೀಗುರು ಚನ್ನವೀರ ಶಿವಾಚಾರ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಕ್ರೀಡಾಪಟುಗಳಿಗೆ ಎಸ್.ಎಸ್.ವಿ.ವಿ ಶಿಕ್ಷಣ ಸಂಸ್ಥೆಯು ನೀಡುತ್ತಿರುವ ಪ್ರೋತ್ಸಾಹ ಅನನ್ಯವಾದದ್ದು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ದೈಹಿಕ, ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ಕುಂಟೋಜಿ ಭಾವೈಕ್ಯತಾ ಹಿರೇಮಠದ ಡಾ.ಶ್ರೀಗುರು ಚನ್ನವೀರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಎಸ್.ಎಸ್.ಶಿವಾಚಾರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಸಾಧನೆ ವಿದ್ಯಾರ್ಥಿಗಳ ಆತ್ಮಶಕ್ತಿ ಹೆಚ್ಚಿಸುತ್ತದೆ. ಈ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸಾಧನೆಗೆ ಅಣಿಯಾಗಿರುವುದು ಅವರ ಆತ್ಮಶಕ್ತಿಗೆ ಹಿಡಿದ ಕನ್ನಡಿ. ಇವರು ಮುದ್ದೇಬಿಹಾಳ ಮಾತ್ರವಲ್ಲದೆ ಇಡೀ ಜಿಲ್ಲೆಯ ಕೀರ್ತಿ ಹೆಚ್ಚಿಸಿ ದೊಡ್ಡ ಗೌರವ ತಂದುಕೊಟ್ಟಿದ್ದು, ವಿದ್ಯಾರ್ಥಿಗಳ ಸಾಧನೆ ಬಾನೆತ್ತರಕ್ಕೆ ಏರಲಿ ಎಂದು ಹಾರೈಸಿದರು.

ಎಂಜಿಎಂಕೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಕೆ.ಹರನಾಳ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ಆರ್.ಎನ್.ನಾಯಕ ಮಾಡುತ್ತಿರುವುದು ಶ್ಲಾಘನೀಯ. ಓದುವ ಸಮಯದಲ್ಲಿ ಅನ್ಯ ಚಟುವಟಿಕೆಗಳತ್ತ ಗಮನ ಹರಿಸದೆ ಸಾಧನೆ ಗುರಿಯಾಗಿಸಿಕೊಂಡು ಸಾಮರ್ಥ್ಯ ತೋರಿಸಬೇಕು. ಈ ವಿದ್ಯಾರ್ಥಿಗಳ ಸಾಧನೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದಿಯಾಗಿ ಅಧಿಕಾರಿಗಳೆಲ್ಲ ಅಭಿನಂದಿಸಿರುವುದು ಹೆಮ್ಮೆಯ ವಿಷಯ ಎಂದರು.

ಸಂಘದ ಸಂಸ್ಥಾಪಕ ಆರ್.ಎನ್.ನಾಯಕ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಶಾಲೆ, ಕಾಲೇಜುಗಳು ಬಡವರು, ರೈತರ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ಕೊಡುತ್ತವೆ. ಈ ಕಬಡ್ಡಿ ತಂಡಕ್ಕೆ ತಗಲುವ ಎಲ್ಲ ಖರ್ಚು ವೆಚ್ಚವನ್ನು ಸಂಘದಿಂದಲೇ ಭರಿಸಲಾಗುತ್ತದೆ. ಈ ವಿದ್ಯಾರ್ಥಿಗಳ ಮಾಡಿರುವ ಸಾಧನೆ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದು, ರಾಜ್ಯ ನಮ್ಮ ಕಾಲೇಜಿನತ್ತ ತಿರುಗಿ ನೋಡುವಂತಾಗಿದೆ. ಎಲ್ಲ ಸಾಧಕ ವಿದ್ಯಾರ್ಥಿಗಳನ್ನು, ತರಬೇತಿ ನೀಡಿದವರನ್ನು ಅಭಿನಂದಿಸುವುದಾಗಿ ತಿಳಿಸಿದರು.ಪದವಿ ಪೂರ್ವ ಶಿಕ್ಷಣ ಇಲಾಖೆಯು ಹಾಸನ ಜಿಲ್ಲೆಯ ಚನ್ನರಾಯಪಟ್ಟದ ನವೋದಯ ಪದವಿ ಪೂರ್ವ ಕಾಲೇಜಿನಲ್ಲಿ ನ.13, 14ರಂದು ಆಯೋಜಿಸಿದ್ದ 2026-27ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರು ದಕ್ಷಿಣ ತಂಡವನ್ನು ಸೋಲಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಎಸ್.ಎಸ್.ಶಿವಾಚಾರ್ಯ ಪದವಿ ಪೂರ್ವ ಕಾಲೇಜಿನ ಕಬಡ್ಡಿ ತಂಡದ ಕ್ರೀಡಾಪಟುಗಳಾದ ಸಂದೀಪ ಚವ್ಹಾಣ, ವಿವೇಕಾನಂದ ಲಮಾಣಿ, ಭರತ ಕಾಂಬಳೆ, ದರ್ಶನ ಹುಗ್ಗೇನವರ್, ವಿಕಾಸ ಲಮಾಣಿ, ಪ್ರಶಾಂತ ಬಸರಿ, ಅರುಣ ಚಲವಾದಿ, ಬೀರಪ್ಪ ಕಂದಗಲ್, ಚಿನ್ಮಯ ಹಿರೇಮಠ, ರಾಜಕುಮಾರ ವಾಂಗಿ, ಕಾಜಪ್ಪ ಪೇಟಕರ್, ಮಲ್ಲಿಕಾರ್ಜುನ ಕಟಗೇರಿ, ತಂಡದ ಕೋಚ್ ದೈಹಿಕ ಶಿಕ್ಷಕ ಬಸವರಾಜ ಚಿನ್ನಾಪುರ, ತಂಡದ ಮ್ಯಾನೇಜರ್ ಸಿದ್ದಲಿಂಗೇಶ ಹಿರೇಮಠ ಅವರನ್ನು ಸಂಘದಿಂದ ಸ್ವಾಮೀಜಿ, ರವಿ ನಾಯಕ ಅವರು ಸನ್ಮಾನಿಸಿ ಗೌರವಿಸಿದರು. ರವಿ ನಾಯಕ ಕ್ರೀಡಾಪಟುಗಳಿಗೆ ತಲಾ ₹ 2000 ಹಾಗೂ ಕೋಚ್‌ಗೆ ₹ 25 ಸಾವಿರ ಪ್ರೋತ್ಸಾಹಧನ ನೀಡಿದರು.ಈ ವೇಳೆ ಸಂಘದ ಆಡಳಿತಾಧಿಕಾರಿಗಳಾದ ಬಿ.ಜಿ.ಬಿರಾದಾರ, ಎಸ್.ಎಂ.ಹಿರೇಮಠ, ಪ್ರಾಚಾರ್ಯರಾದ ಬಿ.ಎಚ್.ದೊಡಮನಿ, ಎಂ.ಟಿ.ದೊಡಮನಿ, ಆರ್.ವಿ.ಕುಲಕರ್ಣಿ, ಮುಖ್ಯಾಧ್ಯಾಪಕ ಪಿ.ಎಲ್.ರಾಠೋಡ, ಶಿಕ್ಷಕರು, ಉಪನ್ಯಾಸಕರು ಸೇರಿ ವಿದ್ಯಾರ್ಥಿಗಳು ಇದ್ದರು. ನಂತರ ಕ್ರೀಡಾಪಟುಗಳನ್ನು ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಲಾಯಿತು.