ಕನ್ನಡಪ್ರಭ ವಾರ್ತೆ ವಿಜಯಪುರ

ಬ್ರಿಟಿಷ್ ಆಡಳಿತದಿಂದ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಪಂಡಿತ್ ಜವಾರಲಾಲ್ ನೆಹರು ಅವರು, ಸ್ವಾತಂತ್ರ್ಯದ ಬಳಿಕ ದೇಶದ ಪ್ರಥಮ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ದೀರ್ಘಕಾಲ ಪ್ರಧಾನಿಯಾಗಿ ದೇಶಸೇವೆ ಸಲ್ಲಿಸಿದ ಹೆಗ್ಗಳಿಕೆ ನೆಹರು ಅವರದ್ದು ಎಂದು ಎಐಸಿಸಿ ಮಾಜಿ ಸದಸ್ಯೆ ಹಾಗೂ ಕಾಂಗ್ರೆಸ್‌ ಯುವ ನಾಯಕಿ ಶ್ರೀದೇವಿ ಉತ್ಲಾಸರ್‌ ಹೇಳಿದರು.

ನಗರದ ಕಸ್ತೂರಿ ಕಾಲೋನಿಯ ಪವಾಡ ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಜನ್ಮ ದಿನಾಚರಣೆ ನಿಮಿತ್ತ ಮಕ್ಕಳ ದಿನಾಚರಣೆಯಲ್ಲಿ ಮಕ್ಕಳಿಗೆ ಪುಸ್ತಕ ವಿತರಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಭಾರತಕ್ಕೆ ಯಾವುದೇ ಆರ್ಥಿಕ ಭದ್ರತೆ ಹಾಗೂ ದೂರದೃಷ್ಟಿಯ ಸಂಪನ್ಮೂಲಗಳು ಇರಲಿಲ್ಲ. ಅಂತಹ ಕಠೋರ ಸನ್ನಿವೇಶದಲ್ಲಿ ದೇಶ ನಡೆಸುವುದಲ್ಲದೇ ಭವಿಷ್ಯದಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುವ ಜೊತೆಗೆ ಸುಭದ್ರ ಭಾರತ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟವರು ನಮ್ಮೆಲ್ಲ ನೆಚ್ಚಿನ ಪ್ರಧಾನಿ ಜವಾರಲಾಲ್‌ ನೆಹರುವರು ಎಂದು ಸ್ಮರಿಸಿದರು.ಈ ಸಂದರ್ಭದಲ್ಲಿ ಬೋರಮ್ಮ ಯರಗುಂಟಿ, ಮುಖ್ಯೋಪಾಧ್ಯಪಕಿ ಸ್ಮಿತಾ ಮಠ, ಬಿ.ಕೆ.ಕುರನದ ಉಪಸ್ಥಿತರಿದ್ದರು.ಭಾರತದ ಭವಿಷ್ಯವನ್ನು ಮಕ್ಕಳಲ್ಲಿಯೇ ಕಂಡಿದ್ದ ಮಾಜಿ ಪ್ರಧಾನಿ ನೆಹರು ಅವರ ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಭವಿಷ್ಯದಲ್ಲಿ ಭಾರತವು ವಿಶ್ವಗುರುವಾಗಿ ಹೊರಹೊಮ್ಮಲು ನೆಹರು ಅವರ ಕೊಡುಗೆ ಅಪಾರ ಹಾಗೂ ಅನನ್ಯವಾಗಿದೆ. ವಿದೇಶಿ ನೀತಿ ಹಾಗೂ ತಂತ್ರಜ್ಞಾನಗಳ ಅಭಿವೃದ್ಧಿ ಕುರಿತು ಜವಾಹರಲಾಲ್‌ ನೆಹರು ಅಂದೇ ಯೋಜನೆ ರೂಪಿಸಿ ತಮ್ಮ ಅಧಿಕಾರ ಅವಧಿಯಲ್ಲಿ ಸಹಕಾರಗೊಳಿಸಿದ್ದರು.

-ಶ್ರೀದೇವಿ ಉತ್ಲಾಸರ್‌, ಕಾಂಗ್ರೆಸ್‌ ಯುವ ನಾಯಕಿ.