ಕಲಾದಗಿ: ಹಣ್ಣುಬೆಳೆಗಾರರ ವಿದ್ಯಾಸಂಸ್ಥೆಯಲ್ಲಿ ನಡೆದ ವಿಜ್ಞಾನ ಹಬ್ಬದ ಸಮಾರೋಪದಲ್ಲಿ ಬೀಳಗಿಯ ಮೊರಾರ್ಜಿ ವಸತಿ ಶಾಲೆಯ ಉಪ ಪ್ರಾಂಶುಪಾಲ ಕೆ.ಆರ್.ಕುಲಕರ್ಣಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಮಕ್ಕಳಾದ ನೀವು ತಯಾರಿಸಿರುವ ಸಣ್ಣ ಪ್ರಯೋಗದ ಮಾದರಿಗಳು, ನಾಳಿನ ದೇಶದ ದೊಡ್ಡ ಆವಿಷ್ಕಾರಕ್ಕೆ ಕಾರಣವಾಗಬಹುದು. ಆದ್ದರಿಂದ ಇಂದಿನ ವಿದ್ಯಾರ್ಥಿಗಳಾದ ನೀವೆಲ್ಲ ಮುಂದಿನ ಭವಿಷ್ಯತ್ತಿನ ವಿಜ್ಞಾನಿಗಳಾಗುವ ಎಲ್ಲಾ ಸಾಧ್ಯತೆಗಳಿವೆ. ಆದ್ದರಿಂದ ವೈಕ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ. ಪರಿಶ್ರಮ, ಶ್ರದ್ಧೆಯಿಂದ ಜ್ಞಾನ ಹೆಚ್ಚಿಕೊಳ್ಳಿ ಎಂದು ಬೀಳಗಿಯ ಮೊರಾರ್ಜಿ ವಸತಿ ಶಾಲೆಯ ಉಪ ಪ್ರಾಂಶುಪಾಲ, ವಿಜ್ಞಾನ ಶಿಕ್ಷಕ ಕೆ.ಆರ್.ಕುಲಕರ್ಣಿ ಹೇಳಿದರು.

ಗ್ರಾಮದ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆಯಲ್ಲಿ ಶನಿವಾರ ಮಕ್ಕಳದಿನಾಚರಣೆ ನಿಮಿತ್ತ ನಡೆದ ವಿಜ್ಞಾನ ಹಬ್ಬದ ವಿಜ್ಞಾನ ವಸ್ತು ಪ್ರದರ್ಶನದ ಸಮಾರೋಪದಲ್ಲಿ ಮಾತನಾಡಿದ ಅವರು, ಯಾವುದೇ ವಿಷಯವನ್ನು ಕುತೂಹಲದಿಂದ ನೋಡಿ, ಏಕೆ? ಹೇಗೆ?ಎಂದು ಪ್ರಶ್ನಿಸಿಕೊಂಡು ಅದಕ್ಕೆ ಉತ್ತರ ಕಂಡುಕೊಳ್ಳಿ. ಈ ಮನೋಭಾವವೇ ವೈಜ್ಞಾನಿಕ ಚಿಂತನೆಗೆ ಮೊದಲ ಹೆಜ್ಜೆಯಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಟಿ. ಪಾಟೀಲ, ನೀವು ಇಂದು ಪ್ರದರ್ಶಿಸಿದ ವಿಜ್ಞಾನದ ಮಾದರಿಗಳು ಬರಿ ಬಹುಮಾನ ಪಡೆಯಲು ಮಾತ್ರ ಸೀಮಿತವಾಗಬಾರದು. ಅವು ನಿಮ್ಮ ಭವಿಷ್ಯದ ಸಂಶೋಧನೆಗಳಿಗೆ ಮೊದಲ ಮೆಟ್ಟಿಲುಗಳಾಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ವಿದ್ಯಾಸಂಸ್ಥೆಯ ಕೋಶಾಧ್ಯಕ್ಷ ಕೆ.ಎಲ್. ಬಿಲಕೇರಿ, ನಿರ್ದೇಶಕ ಎಸ್.ಎಸ್. ಪಾಟೀಲ, ಮುಖ್ಯ ಗುರುಗಳಾದ ಆರ್.ವ್ಹಿ.ಜಾಧವ, ಶ್ರೀಕಾಂತ ಕೆರಕಲಮಟ್ಟಿ ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಆರ್.ವಿ. ಜಾಧವ ಸ್ವಾಗತಿಸಿದರು. ಐ. ಕೆಂಚನಗೌಡರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಾಬೂ ಪೂಜಾರಿ ನಿರೂಪಿಸಿದರು. ಪಿ.ಎಚ್. ಮಾರಂಗಪ್ಪನವರ ವಂದಿಸಿದರು.

ಇದಕ್ಕೂ ಮೊದಲು ಬೆಳಗ್ಗೆ ನಡೆದ ಉದ್ಘಾಟನೆಯಲ್ಲಿ ಹಣ್ಣುಬೆಳೆಗಾರರ ಸಂಘದ ಎಸ್.ಆರ್. ವಾಘ, ಸಂಸ್ಥೆಯ ಕಾರ್ಯದರ್ಶಿ ವ್ಹಿ.ಜಿ.ದೇಶಪಾಂಡೆ ಮತ್ತಿತರರು ಪಾಲ್ಗೊಂಡಿದ್ದರು.