ಕನ್ನಡಪ್ರಭ ವಾರ್ತೆ ಇಳಕಲ್ಲ

ಬಾಗಲಕೋಟೆ ಜಿಲ್ಲೆಯಲ್ಲಿ ಮೂರನೇ ಅತಿ ದೊಡ್ಡ ನಗರ ಇಳಕಲ್ಲ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಇಂತಹ ನಗರಕ್ಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ.

ಮೊದಲು ನಗರದಲ್ಲಿ ಮೊದಲು ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಇರಲಿಲ್ಲ. ಆಗ ಏನೇ ಸಮಸ್ಯೆ ಬಂದರೂ ತಕ್ಷಣ ಅಧಿಕಾರಿಗಳು ಸಮಸ್ಯೆ ಪರಿಹರಿಸುತ್ತಿದ್ದರು. ನಗರಕ್ಕೆ ೨೪/೭ ನೀರಿನ ಯೋಜನೆ ಬಂದಾಗ ಇನ್ಮುಂದೆ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಬರುವುದಿಲ್ಲ ಎಂದು ಇಳಕಲ್ಲ ಜನತೆ ಸಂತಸಪಟ್ಟಿದ್ದರು. ಆದರೆ, ಜನರ ಈ ನಿರೀಕ್ಷೆ ಹುಸಿಯಾಗಿದೆ. ಅಧಿಕಾರಿಗಳ ನಿಷ್ಕಾಳಜಿಯಿಂದ ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ಯೋಜನೆಗೂ ಮುಂಚಿನ ಸ್ಥಿತಿಯೇ ಎಷ್ಟೋ ಉತ್ತಮವಾಗಿತ್ತು ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

೨೪ ತಾಸು ಕುಡಿಯುವ ನೀರು ಪೂರೈಕೆ ಮಾಡುವ ಈ ಯೋಜನೆಯ ಮಷೀನ್‌ಗಳು ದುರಸ್ತಿಗೆ ಬಂದರೆ ತಕ್ಷಣ ದುರಸ್ತಿ ಮಾಡಿ ನೀರು ಪೂರೈಕೆ ಸುಗಮಗೊಳಿಸದಿರುವ ಕಾರಣ ಸಾಮಾನ್ಯ ಜನರಿಗೆ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆ ಆಗುತ್ತಿದೆ. 12 ದಿನಗಳಿಂದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹಿಂದುಗಳ ಅತಿ ದೊಡ್ಡ ಹಬ್ಬ ದೀಪಾವಳಿ ಹಬ್ಬದ ದಿನಗಳಲ್ಲಿ ಜನರು ನೀರಿಗಾಗಿ ಪರದಾಡುವಂತಾಗಿದ್ದು, ಜನರು ನಗರಪಾಲಿಕೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ನಗರಕ್ಕೆ ಕುಡಿಯುವ ನೀರು ಪೂರೈಕೆಯ ಮಷೀನ್‌ನ ಬೇರಿಂಗ್‌ ಹೋಗಿದೆ ಎಂದು ಹೇಳುತ್ತಿದ್ದಾರೆ. ತಕ್ಷಣ ಮಷೀನ್‌ ದುರಸ್ತಿ ಮಾಡಿ ನೀರು ಪೂರೈಕೆ ಸರಳ ಮಾಡುವುದನ್ನು ಬಿಟ್ಟು ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವುದು ನಗರಸಭೆ ಕರ್ತವ್ಯ. ಕನಿಷ್ಠಪಕ್ಷ ಹಬ್ಬದ ಸಂದರ್ಭದಲ್ಲಿ ಟ್ಯಾಂಕರ್‌ ಮೂಲಕವಾದರೂ ಜನರಿಗೆ ಕುಡಿಯುವ ನೀರು ಪೂರೈಸಬೇಕಿತ್ತು. ಆದರೆ ನಗರಸಭೆ ಅಧಿಕಾರಿಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದೆ.

ಶ್ರೀಮಂತರೇನೋ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ. ಆದರೆ, ದಿನನಿತ್ಯ ದುಡಿದು ತಿನ್ನುವ ಬಡವರು ಹಣ ಕೊಟ್ಟು ನೀರು ಖರೀದಿಸುವ ಸ್ಥಿತಿಯಲ್ಲಿ ಇಲ್ಲ. ಎಲ್ಲ ಕೆಲಸ ಬಿಟ್ಟು ನೀರು ಸಂಗ್ರಹಕ್ಕೆ ಅಲೆದಾಡುವ ಸ್ಥಿತಿ ಬಂದಿದೆ. ಜನರು ಸೈಕಲ್‌, ಹಾಗೂ ತಳ್ಳುವ ಗಾಡಿಗಳಲ್ಲಿ ಕೊಡಗಳನ್ನಿಟ್ಟುಕೊಂಡು ಕೈಪಂಪ್‌ ಹಾಗೂ ನೀರಿನ ಮೂಲವಿರುವ ಕಡೆ ಅಲೆದಾಡುವಂತಾಗಿದೆ. ಇದು ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ನಗರಸಭೆ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಮಷಿನ್‌ ದುರಸ್ತಿಗೊಳಿಸಿ ಜನರಿಗೆ ಕುಡಿಯುವ ನೀರು ಪೂರೈಸಬೇಕೆಂದು


ಸಾರ್ವಜನಿಕರಿಗೆ ದಿಪಾವಳಿ ಎಂದರೆ ದೊಡ್ಡ ಹಬ್ಬ. ಇಂಥ ಹಬ್ಬದಲ್ಲೇ ನಗರಸಭೆ ಅಧಿಕಾರಿಗಳು ಇಳಕಲ್ಲ ಜನತೆಗೆ 12 ದಿನಗಳಿಂದ ಕುಡಿಯುವ ನೀರು ಪೂರೈಕೆ ಮಾಡದಿರುವುದು ದರಂತ ಜನರ ಸಮಸ್ಯೆಯನ್ನು ಪರಿಹರಿಸ ಬೇಕಾಗಿರುವದು ನಗರ ಸಭೆ ಕರ್ತವ್ಯ.

- ಲಕ್ಷ್ಮೀಬಾಯಿ ನಗರ ಮಹಿಳೆ

ಆಲಮಟ್ಟಿಯಲ್ಲಿ ನೀರು ಪೂರೈಕೆ ಮಾಡಬೇಕಾದ ಮಷೀನ್‌ ಸಾಫ್ಟ್‌ ಕಟ್‌ ಆಗಿದೆ. ಅದನ್ನು ತರಿಸಿ ಕೂಡ್ರಿಸುವಷ್ಟರಲ್ಲಿ ಮತ್ತೊಂದು ಸಮಸ್ಯೆ ಬರುತ್ತಿದೆ.ಈಗ ದುರಸ್ತಿ ಕೆಲಸ ಮುಗಿದಿದ್ದು, ೨ ದಿನದಲ್ಲಿ ನಗರದ ಜನರಿಗೆ ಕುಡಿಯುವ ನೀರು ಪೂರೈಸಲಾಗುವುದು.

-ಶ್ರೀನಿವಾಸ ಜಾಧವ ನಗರ ಸಭೆ ಪೌರಾಯುಕ್ತರು.