ಕನ್ನಡಪ್ರಭ ವಾರ್ತೆ ಅಥಣಿರೈತಾಪಿ ವರ್ಗದ ಆರ್ಥಿಕ ಸಬಲೀಕರಣ ಹಾಗೂ ಅನುಕೂಲಕ್ಕಾಗಿ ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ (ಪಿಕೆಪಿಎಸ್) ಸಂಘಗಳನ್ನು ಸ್ಥಾಪಿಸಲಾಗುವುದು. ಜಿಲ್ಲೆ ವಿಭಜನೆಯಾದಲ್ಲಿ ಪ್ರತ್ಯೇಕ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ರೈತಾಪಿ ವರ್ಗದ ಆರ್ಥಿಕ ಸಬಲೀಕರಣ ಹಾಗೂ ಅನುಕೂಲಕ್ಕಾಗಿ ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ (ಪಿಕೆಪಿಎಸ್) ಸಂಘಗಳನ್ನು ಸ್ಥಾಪಿಸಲಾಗುವುದು. ಜಿಲ್ಲೆ ವಿಭಜನೆಯಾದಲ್ಲಿ ಪ್ರತ್ಯೇಕ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.ಸೋಮವಾರ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ರೈತ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ 73ನೇ ಸಹಕಾರಿ ಸಪ್ತಾಹ ಆಚರಣೆ ಹಾಗೂ ಅಥಣಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ನಾಮಫಲಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ರೈತ ಸಮುದಾಯದ ಏಳಿಗೆಗಾಗಿ ಕೆಲಸ ಮಾಡಬೇಕೆಂಬ ಕನಸಿದೆ. ರೈತ ಸಬಲೀಕರಣಗೊಂಡಾಗ ಮಾತ್ರ ದೇಶದ ಪ್ರಗತಿ ಸಾಧ್ಯ. ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ಸ್ಥಾಪಿಸುವ ಉದ್ದೇಶವಿದೆ. ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕ ಆಡಳಿತ ಮತ್ತು ಪ್ರಾಮಾಣಿಕ ಸೇವೆ ಒದಗಿಸಲು ವಿಶೇಷ ಅನುದಾನದ ಅಗತ್ಯವಿದ್ದು, ಮುಂಬರುವ ಬಜೆಟ್ನಲ್ಲಿ ಸಹಕಾರ ಕ್ಷೇತ್ರಕ್ಕೆ ವಿಶೇಷ ಅನುದಾನ ಹಾಗೂ ಪ್ರತ್ಯೇಕ ಸಹಕಾರ ಬಜೆಟ್ ಮಂಡಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಮಾಡಲಾಗಿದೆ ಎಂದರು.2008ರಲ್ಲಿ ಸಹಕಾರ ಸಚಿವನಾಗಿದ್ದಾಗ ಕೂಡಲಸಂಗಮದ ಸಮಾವೇಶದಲ್ಲಿ ರೈತರಿಗೆ ಬಡ್ಡಿರಹಿತ ಸಾಲ ಸೌಲಭ್ಯ ಘೋಷಿಸಿದ್ದೆ. ಅಂದಿನಿಂದ ಇಂದಿನವರೆಗೂ ಈ ಯೋಜನೆ ಮುಂದುವರಿದಿರುವುದು ಸಂತಸ ತಂದಿದೆ. ಸಹಕಾರಿ ಸಂಘಗಳಲ್ಲಿನ ವ್ಯಾಜ್ಯಗಳ ಇತ್ಯರ್ಥಕ್ಕಾಗಿ ಬೆಳಗಾವಿಯಿಂದಲೇ ಸಹಕಾರಿ ನ್ಯಾಯಾಲಯ ಸ್ಥಾಪಿಸಿ, ರಾಜ್ಯದ ಇತರೆ ಮೂರು ವಲಯಗಳಲ್ಲಿಯೂ ನ್ಯಾಯಾಲಯ ಆರಂಭಿಸಲು ಉದ್ದೇಶಿಸಲಾಗಿದೆ. ಸಹಕಾರಿ ಕಾಯ್ದೆ ತಿದ್ದುಪಡಿ ಹಾಗೂ ಹೊಸ ಕಾನೂನುಗಳ ಅನುಷ್ಠಾನಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿಕೆಪಿಎಸ್ ಸಂಘಗಳ ಲೆಕ್ಕಪರಿಶೋಧನೆಗಾಗಿ ಗ್ರಾಮೀಣ ನಿರುದ್ಯೋಗಿ ಯುವಕರನ್ನು ನೇಮಕ ಮಾಡಿಕೊಂಡು ಎಂಟು ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಇದರಿಂದ ಸಹಕಾರಿ ಸಂಘಗಳ ಲೆಕ್ಕಪತ್ರ ಪರಿಶೀಲನೆಯಲ್ಲಿ ಪಾರದರ್ಶಕತೆ ಹೆಚ್ಚುವುದರ ಜತೆಗೆ ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ದೊರೆಯಲಿದೆ. ಇತ್ತೀಚೆಗೆ ಹಾಲಿನ ದರವನ್ನು ₹7 ಹೆಚ್ಚಿಸಿರುವುದು ರೈತರ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಾಗಿದೆ. ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯಬೇಕು ಎಂದರು.ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ರಮೇಶ ಕತ್ತಿ ಮಾತನಾಡಿ, ಸಹಕಾರಿ ಸಂಸ್ಥೆಗಳು ಉಳಿದು ಬೆಳೆಯಬೇಕಾದರೆ ಸಹಕಾರಿಗಳಲ್ಲಿ ತ್ಯಾಗದ ಮನೋಭಾವ ಇರಬೇಕು. ಸಹಕಾರಿ ಕ್ಷೇತ್ರವನ್ನು ರಾಜಕೀಯಗೊಳಿಸಬಾರದು. ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ₹65 ಸಾವಿರ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜಗದೀಶ ಕವಟಗಿಮಠ, ನ್ಯಾಯವಾದಿ ಅಮೋಘ ಖೋಬ್ರಿ ಹಾಗೂ ಶಂಭುಲಿಂಗ ಮಮದಾಪುರ ಮಾತನಾಡಿ, ಅಥಣಿಯಲ್ಲಿ ಸಹಾಯಕ ನಿಬಂಧಕರ ಕಚೇರಿ ಆರಂಭಿಸಿರುವುದರಿಂದ ಈ ಭಾಗದ ಸಹಕಾರಿಗಳಿಗೆ ಅನುಕೂಲವಾಗಲಿದೆ ಎಂದರು.ಇದೇ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ಪಿಕೆಪಿಎಸ್ ಅಥಣಿ, ಪಿಕೆಪಿಎಸ್ ನದಿ ಇಂಗಳಗಾಂವ, ವರ್ಧಮಾನ ಅರ್ಬನ್ ಕೋ-ಆಪರೇಟಿವ್ ಸೊಸೈಟಿ ಅಥಣಿ ಹಾಗೂ ಶೇಡಬಾಳ ಅರ್ಬನ್ ಕೋ-ಆಪರೇಟಿವ್ ಸೊಸೈಟಿಗಳಿಗೆ ಉತ್ತಮ ಸಹಕಾರಿ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಕೆಎಂಎಫ್ ನಿರ್ದೇಶಕ ಮಹಾದೇವ ಬಿಳಿಕುರಿ, ಸಹಕಾರಿ ಸಂಘಗಳ ನಿಬಂಧಕ ಕಲ್ಲಪ್ಪ ಓಬಣ್ಣಗೋಳ, ಉಪನಿಬಂಧಕ ರವೀಂದ್ರ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ರವೀಂದ್ರ ಪಾಟೀಲ ಸ್ವಾಗತಿಸಿದರು. ಶ್ರೀಶೈಲ ಯಡಹಳ್ಳಿ ಹಾಗೂ ವಸಂತಗೀತಾ ನಿರೂಪಿಸಿದರು. ರಾಘವೇಂದ್ರ ನೂಲಿ ವಂದಿಸಿದರು.ಪ್ರತ್ಯೇಕ ಬಿಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಭರವಸೆ:
ಬೆಳಗಾವಿ ಜಿಲ್ಲೆ ವಿಭಜನೆಯಾದಲ್ಲಿ ಮತ್ತೊಂದು ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ಸ್ಥಾಪಿಸಲಾಗುವುದು. ಬಿಡಿಸಿಸಿ ಬ್ಯಾಂಕ್ ಅನ್ನು ಸಹಕಾರಿಗಳ ಒಗ್ಗಟ್ಟು ಮತ್ತು ಪ್ರಾಮಾಣಿಕ ಪ್ರಯತ್ನದಿಂದ ಪ್ರಗತಿಯತ್ತ ತರಲಾಗಿದೆ. ಪಿಕೆಪಿಎಸ್ ಸಂಘಗಳನ್ನು ಉಳಿಸಿ ಬೆಳೆಸುವುದು ನಮ್ಮ ಸಂಕಲ್ಪವಾಗಿದೆ. ಈಗಾಗಲೇ ಅಥಣಿಗೆ ಆರ್ಟಿಒ ಹಾಗೂ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮಂಜೂರು ಮಾಡಲಾಗಿದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.