ಕನ್ನಡಪ್ರಭ ವಾರ್ತೆ ಬೆಳಗಾವಿಗೋವಾದಿಂದ ಮಹಾರಾಷ್ಟ್ರ ಮಾರ್ಗವಾಗಿ ಕರ್ನಾಟಕಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ₹35 ಲಕ್ಷ ಮೌಲ್ಯದ ಗೋವಾ ಮದ್ಯವನ್ನು ಬಾಚಿ ಗ್ರಾಮದ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅಬಕಾರಿ ಇಲಾಖೆ ಅಪರ ಆಯುಕ್ತ ಡಾ.ವೈ.ಮಂಜುನಾಥ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗೋವಾದಿಂದ ಮಹಾರಾಷ್ಟ್ರ ಮಾರ್ಗವಾಗಿ ಕರ್ನಾಟಕಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ₹35 ಲಕ್ಷ ಮೌಲ್ಯದ ಗೋವಾ ಮದ್ಯವನ್ನು ಬಾಚಿ ಗ್ರಾಮದ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅಬಕಾರಿ ಇಲಾಖೆ ಅಪರ ಆಯುಕ್ತ ಡಾ.ವೈ.ಮಂಜುನಾಥ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನು ಸಾಗಿಸುವ ಇನ್ಸುಲೇಟೆಡ್ ಕಂಟೇನರ್‌ನಲ್ಲಿ ಮದ್ಯದ ಬಾಕ್ಸ್‌ಗಳನ್ನು ಅಡಗಿಸಿಟ್ಟು ಸಾಗಿಸಲಾಗುತ್ತಿತ್ತು. ಮದ್ಯದ ಜತೆಗೆ ₹20 ಲಕ್ಷ ಮೌಲ್ಯದ ವಾಹನವನ್ನು ಜಪ್ತಿ ಮಾಡಲಾಗಿದ್ದು, ಚಾಲಕ ಪರಾರಿಯಾಗಿದ್ದಾನೆ ಎಂದರು.

ಈ ಹಿಂದೆ ಗೋವಾದಿಂದ ಖಾನಾಪುರ ತಾಲೂಕಿನ ಕಣಕುಂಬಿ ಮಾರ್ಗವಾಗಿ ರಾಜ್ಯಕ್ಕೆ ಮದ್ಯ ಸಾಗಿಸಲಾಗುತ್ತಿತ್ತು. ಈ ಮಾರ್ಗದಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ ಕಟ್ಟುನಿಟ್ಟಿನ ನಿಗಾ ವಹಿಸಿದ ಬಳಿಕ ಕಳ್ಳಸಾಗಣೆದಾರರು ಮಹಾರಾಷ್ಟ್ರದ ಬಾಚಿ ಮಾರ್ಗವನ್ನು ಬಳಸಲಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಮೇಲೆ ನಿಗಾ ಇರಿಸಿ ಕಾರ್ಯಾಚರಣೆ ನಡೆಸಲಾಗಿದೆ ಎಂದರು.

ಅಕ್ರಮ ಮದ್ಯ ಸಾಗಣೆಯ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅಬಕಾರಿ ಉಪನಿರೀಕ್ಷಕ ಸುನೀಲ ಪಾಟೀಲ ನೇತೃತ್ವದ ತಂಡ ಬಾಚಿ ಮಾರ್ಗವಾಗಿ ಬೆಳಗಾವಿಗೆ ಬರುವ ವಾಹನಗಳ ಮೇಲೆ ನಿಗಾ ಇರಿಸಿತ್ತು. ಸಂಶಯಾಸ್ಪದ ವಾಹನ ತಡೆದು ವಿಚಾರಿಸಿದಾಗ ಚಾಲಕ ಮೀನು ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆ. ಆದರೆ, ವಾಹನ ಪರಿಶೀಲಿಸಿದಾಗ ಮೀನು ಮತ್ತು ಐಸ್ ಗಡ್ಡೆಗಳಿದ್ದ ಟ್ರೇಗಳ ಹಿಂದೆ 350 ಬಾಕ್ಸ್ ಮದ್ಯ ಪತ್ತೆಯಾಗಿವೆ ಎಂದರು.

ವಾಹನವು ಉಡುಪಿಯಲ್ಲಿ ನೋಂದಣಿಯಾಗಿದ್ದು, ಮದ್ಯದ ಬಾಟಲಿಗಳ ಮೇಲೆ ತಯಾರಿಕಾ ಸಂಸ್ಥೆಯ ವಿವರಗಳೂ ನಮೂದಾಗಿಲ್ಲ. ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಲಾಗಿದೆ. ಮದ್ಯ ಸೇವನೆಗೆ ಯೋಗ್ಯವಾಗಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ತಿಳಿದು ಬಂದಿದ್ದರು, ಅಕ್ರಮವಾಗಿ ಸಾಗಿಸಿದ ಮದ್ಯವನ್ನು ಸಾರ್ವಜನಿಕರು ಸೇವಿಸಬಾರದು. ಇಂತಹ ಮದ್ಯ ಆರೋಗ್ಯಕ್ಕೆ ಹಾನಿಕಾರಕವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.