ರಾಜ್ಯದಲ್ಲಿ ಫುಟ್‌ಪಾತ್‌ ಮೇಲೆ ಸಂಚರಿಸುವ ವಾಹನಗಳಿಗೆ ದಂಡ ಹೆಚ್ಚಳ ಮಾಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಈ ತೀರ್ಮಾನ ಸಮಾಜದ ಬದಲಾವಣೆಗೆ ಅಲ್ಲ. ಖಾಲಿಯಾಗಿರುವ ಖಜಾನೆಯನ್ನು ಯಾವ ರೂಪದಲ್ಲಾದರೂ ತುಂಬಿಸಿಕೊಳ್ಳಲು ಜನರ ಜೇಬಿಗೆ ನೇರವಾಗಿ ಕೈ ಹಾಕುತ್ತಿದೆ.

- ಎಆರ್‌ಎಐ ಪರೀಕ್ಷಾ ಕೇಂದ್ರಕ್ಕೆ ಮೊದಲು ಭೂಮಿ ಕೊಟ್ಟು ಮಾತನಾಡಲಿ

- ನಮ್ಮ ಇಲಾಖೆಯಿಂದ ಕಾರ್ಖಾನೆಗಳನ್ನು ತರಲು ಸಾಧ್ಯವಿಲ್ಲ

- ರಾಜ್ಯದಲ್ಲಿ ಜಾಗ ಕೇಳಿದರೆ ವೈಟ್ ಎಷ್ಟು, ಬ್ಲಾಕ್ ಎಷ್ಟು ಅಂತ ಕೇಳುವರುಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರ ಜನರನ್ನು ದರೋಡೆ ಮಾಡುತ್ತಿದೆ. ಉಸಿರಾಡುವ ಗಾಳಿಗೆ ಯಾವಾರ ರೇಟ್‌ ಫಿಕ್ಸ್‌ ಮಾಡುವರೋ ಗೊತ್ತಿಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದೆ‌‌. ಅದನ್ನು ತುಂಬಲು ಜನರನ್ನು ದರೋಡೆ ಮಾಡಲು ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

ರಾಜ್ಯದಲ್ಲಿ ಫುಟ್‌ಪಾತ್‌ ಮೇಲೆ ಸಂಚರಿಸುವ ವಾಹನಗಳಿಗೆ ದಂಡ ಹೆಚ್ಚಳ ಮಾಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಈ ತೀರ್ಮಾನ ಸಮಾಜದ ಬದಲಾವಣೆಗೆ ಅಲ್ಲ. ಖಾಲಿಯಾಗಿರುವ ಖಜಾನೆಯನ್ನು ಯಾವ ರೂಪದಲ್ಲಾದರೂ ತುಂಬಿಸಿಕೊಳ್ಳಲು ಜನರ ಜೇಬಿಗೆ ನೇರವಾಗಿ ಕೈ ಹಾಕುತ್ತಿದೆ ಎಂದರು.

ಮೇಕೆದಾಟು ವಿಚಾರದಲ್ಲಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಟೀಕೆಗಳು ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, ಮೇಕೆದಾಟು ವಿಚಾರವನ್ನ ನಾನು ಯಾವಾಗ ಮಾಡಬೇಕು ಗೊತ್ತಿದೆ. ಈಗ ಅವರು ತುಂಬಾ ಸ್ಪೀಡ್‌ನಲ್ಲಿದ್ದಾರೆ. ಮೇಕೆದಾಟು ಮಾಡುವ ಸ್ಪೀಡ್ ನೋಡೋಣ. ಈ ಬಗ್ಗೆ ಮುಂದೆ ಮಾತನಾಡುತ್ತೇನೆ ಎಂದು ಚುಟುಕಾಗಿ ಉತ್ತರಿಸಿ ಜಾರಿಕೊಂಡರು.

ಸರ್ಕಾರ ಇನ್ನೂ ಭೂಮಿಯನ್ನೇ ಕೊಟ್ಟಿಲ್ಲ:

ಮಂಡ್ಯದಲ್ಲಿ ಎಆರ್‌ಎಐ ಘಟಕ ಸ್ಥಾಪನೆ ವಿಚಾರ ಕುರಿತು, ಸರ್ಕಾರ ಇನ್ನೂ ಭೂಮಿಯನ್ನೇ ಕೊಟ್ಟಿಲ್ಲ, ಎಆರ್‌ಎಐ ಎಲ್ಲಿ ತರಲಿ. ಮೊದಲು ಜಾಗ ಎಲ್ಲಿದೆ ಎಂದು ತೋರಿಸಲಿ. ನೀವು ಎಲ್ಲಿ ಬೇಕಾದರೂ ಜಾಗ ಕೊಡಿ ಎಂದು ಕೇಳಿದ್ದೇನೆ. ಬಸರಾಳು ಗ್ರಾಮದ ಬಳಿಯೇ ಜಾಗ ಕೊಡಲಿ. ಇಲ್ಲಿಯವರೆಗೆ ಕೆಐಎಡಿಬಿಗೆ ಜಾಗ ಕೊಟ್ಟು ನೋಟಿಫಿಕೇಶನ್ ಮಾಡಿಲ್ಲ. ಅವರು ಜಾಗ ಕೊಡುತ್ತಾರಾ ನೋಡೋಣ. ಡಿಸಿ ಪತ್ರ ಬರೆದರೆ ಎಲ್ಲಾ ಆಗೋಲ್ಲ. ಸರ್ಕಾರದಿಂದ ಕೆಐಎಡಿಬಿಗೆ ಜಾಗ ವರ್ಗಾವಣೆ ಆಗಬೇಕು. ಇದುವರೆಗೆ ಕಾನೂನು ಬದ್ಧವಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನವರಿಗೆ ಅಭಿವೃದ್ಧಿ ಬೇಕಿಲ್ಲ:

ಕಾಂಗ್ರೆಸ್‌ನವರಿಗೆ ಯಾವುದೇ ಅಭಿವೃದ್ಧಿ ಬೇಕಾಗಿಲ್ಲ. ಸಣ್ಣ ಬಸ್ ಸ್ಟ್ಯಾಂಡ್ ಕಟ್ಟಿಸುತ್ತೇವೆ ಎಂದರೆ ಅಡ್ಡಿ ಮಾಡುವರು. ಸಿಎಸ್‌ಆರ್ ಫಂಡ್ ತರೋದು ದೊಡ್ಡ ಸಾಧನೇನಾ ಅಂತಾ ಕಾಮೆಂಟ್ ಮಾಡ್ತಾರೆ. ನಾನೇಕೆ ರೈತರನ್ನು ಎತ್ತಿ ಕಟ್ಟಲಿ.

ನನಗೆ ಬೇಕಿರೋದು ಎಆರ್‌ಎಐ ಘಟಕ ಸ್ಥಾಪನೆ ಮಾಡುವ ಕಮಿಟ್‌ಮೆಂಟ್. ಈ ಬಗ್ಗೆ ನಾನು ಡೈರಕ್ಷನ್ ಕೊಟ್ಟಿದ್ದೇನೆ.

ಜಾಗ ಕೊಡುವುದು ರಾಜ್ಯ ಸರ್ಕಾರಕ್ಕೆ ಸೇರಿದ್ದು. ಗೊಂದಲ ಸರಿಪಡಿಸಿಕೊಂಡು ಇರುವ ಸಮಸ್ಯೆ ಬಗೆಹರಿಸಬೇಕಾಗಿರುವುದು ರಾಜ್ಯ ಸರ್ಕಾರದ್ದು. ನನಗೆ ಎಲ್ಲಿ ಬೇಕಾದರೂ ಜಾಗ ಕೊಡಲಿ ಎಂದು ಮನವಿ ಮಾಡಿದ್ದೇನೆ.

ನನ್ನಿಂದ ತಪ್ಪಾಗಲು ಯಾವುದೇ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ಇಲಾಖೆಯಿಂದ ಕಾರ್ಖಾನೆ ತರಲಾಗದು:

ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಮೂಲಭೂತ ಸೌಕರ್ಯ ಕಲ್ಪಿಸುವುದು ರಾಜ್ಯ ಸರ್ಕಾರ ಕರ್ತವ್ಯ. ನಾನು ಬೃಹತ್‌ ಕೈಗಾರಿಕಾ ಸಚಿವನಾಗಿದ್ದರೂ ನನ್ನ ಇಲಾಖೆಯಿಂದ ಕಾರ್ಖಾನೆಗಳನ್ನು ಪ್ರಾರಂಭ ಮಾಡಲು ಆಗುವುದಿಲ್ಲ.

ಕೈಗಾರಿಕೆ ಸ್ಥಾಪನೆ ಮಾಡುವ ಹೂಡಿಕೆದಾರರಿಗೆ ಕೆಲವು ಸ್ಕೀಮ್‌ಗಳನ್ನು ಜಾರಿಗೆ ತರುತ್ತೇವೆ. ಯಾವ ರಾಜ್ಯದಲ್ಲಿ ಮಾಡಬೇಕೆಂದು ಉದ್ಯಮಿಗಳು ನಿರ್ಧಾರ ಮಾಡುತ್ತಾರೆ. ಆಂಧ್ರಪ್ರದೇಶದಲ್ಲಿ ಬಂಡವಾಳ ಹಾಕುವವರಿಗೆ ಆ ಸರ್ಕಾರ ಶೇ.50ರಷ್ಟು ವಿನಾಯ್ತಿ ಕೊಡುತ್ತಾರೆ. ನಮ್ಮ ರಾಜ್ಯದಲ್ಲಿ ಜಾಗ ಕೇಳಿದರೆ ವೈಟ್ ಎಷ್ಟು, ಬ್ಲಾಕ್ ಎಷ್ಟು ಎಂದು ಮಾತಾಡುತ್ತಾರೆ. ಎಂ.ಬಿ.ಪಾಟೀಲ್ ಅವರನ್ನು ಕೇಳಿ ಅಂತಾರೆ. ಬ್ಲಾಕ್, ವೈಟ್ ತೆಗೆದುಕೊಳ್ಳಲು ಯಾರನ್ನು ಇಟ್ಟುಕೊಂಡಿದ್ದಾರೆ ಅನ್ನೋದು ಗೊತ್ತಾಗುತ್ತೆ. ಈ ಕಾರಣದಿಂದ ಯಾವ ಉದ್ಯಮಿಗಳೂ ರಾಜ್ಯಕ್ಕೆ ಬರಲು ತಯಾರಿಲ್ಲ.

ನಾವು ಬೆಳೆದು ಬಿಟ್ಟಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಾರೆ. ಹಿಂದೆ ಪೂರ್ವಿಕರು ಮಾಡಿದ್ದರಿಂದ ಬೆಳೆದಿರೋದು.

ಇವರು ಬೆಳೆದಿರೋದನ್ನು ತಿಂದುಕೊಂಡು ಕೂತಿದ್ದಾರೆ ಎಂದು ಕುಟುಕಿದರು.