ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳು ತಮ್ಮ ಜೀವನದುದ್ದಕ್ಕೂ ಬಸವಣ್ಣನವರ ಸಮಸಮಾಜದ ಕನಸನ್ನು ನನಸು ಮಾಡುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಡಂಬಳ

ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳು ತಮ್ಮ ಜೀವನದುದ್ದಕ್ಕೂ ಬಸವಣ್ಣನವರ ಸಮಸಮಾಜದ ಕನಸನ್ನು ನನಸು ಮಾಡುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಅವರ ಜೀವನವೇ ನಮಗೆಲ್ಲ ಆದರ್ಶವಾಗಿದೆ. ದುಡಿಯುವವರ, ಶ್ರಮಿಕರ ಪರವಾದ ಉದಾರತೆ ತೋರಿದ ತೋಂಟದ ಶ್ರೀಗಳು ಈ ಶತಮಾನದ ಬಸವಣ್ಣನಾಗಿ ಗುರುತಿಸಿಕೊಂಡಿದ್ದಾರೆ ಎಂದು ತೋಂಟದ ಡಾ. ಸಿದ್ದರಾಮ ಸ್ವಾಮೀಜಿ ಹೇಳಿದರು.

ಡಂಬಳ ತೋಂಟದಾರ್ಯ ಮಠದ ದಾಸೋಹ ಭವನದಲ್ಲಿ ಏರ್ಪಡಿಸಿದ್ದ ಲಿಂ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ತೋಂಟದಾರ್ಯ ಮಠವು ಕಾಯಕ, ದಾಸೋಹದ ಮೂಲಕ ಮುಂದುವರಿದುಕೊಂಡು ಬಂದಿದೆ. ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಶ್ರೀಗಳು ಕಪ್ಪತ್ತಗುಡ್ಡ ಉಳಿವಿಗೆ ಹೋರಾಟ ನಡೆಸಿದರು. ಇಂದು ಕಪ್ಪತ್ತಗುಡ್ಡ ಉಳಿದಿದೆ ಎಂದರೆ ಅದಕ್ಕೆ ತೋಂಟದ ಸಿದ್ಧಲಿಂಗ ಶ್ರೀಗಳೇ ಕಾರಣ. ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಆದರೆ ಮಾತ್ರ ಈ ದೇಶ ಅಭಿವೃದ್ಧಿ ಸಾಧ್ಯ ಎಂದು ಶ್ರೀಮಠದಿಂದ ಗ್ರಾಮೀಣ ಮಕ್ಕಳಿಗೆ ಶೈಕ್ಷಣಿಕ ಕ್ರಾಂತಿ ಆರಂಭಿಸಿದರು ಎಂದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಭೌತಿಕವಾಗಿ ನಮ್ಮನ್ನು ಅಗಲಿದರೂ ಶ್ರೇಷ್ಠ ಸಂದೇಶಗಳು ಹಾಗೂ ಸತ್ಕಾರ್ಯಗಳ ಮೂಲಕ ಅಜರಾಮರವಾಗಿದ್ದಾರೆ. ಗಂಧದ ಕೊರಡಿನಂತೆ ದೀಪದ ಬೆಳಕಿನಂತೆ ಜನಕಲ್ಯಾಣಕ್ಕಾಗಿ ಶ್ರಮಿಸಿದ್ದ ಶ್ರೀಗಳು ಬಸವತತ್ವವನ್ನು ಜನರಿಗೆ ತಲುಪಿಸಲು ಅವಿರತ ಶ್ರಮ ವಹಿಸಿದರು ಎಂದು ತಿಳಿಸಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ನಿಂಗು ಸೊಲಗಿ ಉಪನ್ಯಾಸ ನೀಡಿದರು. ಈ ಸಂದರ್ಭ ನಿವೃತ್ತ ಶಿಕ್ಷಕ ಎ.ಬಿ. ಹಿರೇಮಠ ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವ್ಹಿ. ಹಿರೇಮಠ, ಹಿರಿಯರಾದ ಮರಿತೆಮ್ಮಪ್ಪ ಆದಮ್ಮನವರ, ವಿರೂಪಾಕ್ಷ ಲಕ್ಕುಂಡಿ, ಮಲ್ಲಣ್ಣ ಯರಾಶಿ, ಗೋಣಿಬಸಪ್ಪ ಕೊರ್ಲಹಳ್ಳಿ, ಯುವ ಮುಖಂಡ ಬಸವರಡ್ಡಿ ಬಂಡಿಹಾಳ, ನಾಗೇಶ ಹುಬ್ಬಳ್ಳಿ, ಮಹೇಶ ಗಡಗಿ, ಗವಿಸಿದ್ದಪ್ಪ ಬಿಸನಳ್ಳಿ, ಸಿ.ಟಿ. ಪ್ಯಾಟಿ, ಮುದಿಯಪ್ಪ ಗದಗಿನ, ಮಲ್ಲಪ್ಪ ಮಠದ, ಗೌಸುಸಾಬ ತಾಂಬೋಟಿ, ಅಶೋಕ ಮಾನೆ, ಈಶಣ್ಣ ಪಟ್ಟಣಶೆಟ್ಟಿ, ಕಾಶಪ್ಪ ಅಳವುಂಡಿ, ರಾಮಣ್ಣ ಮೇಗಲಮನಿ, ಯಂಕಣ್ಣ ಗಡಗಿ, ಬುಡ್ನೆಸಾಬ ಅತ್ತಾರ, ಮುತ್ತಣ್ಣ ಹಾಲಕೇರಿ, ಪಾಲಾಕ್ಷಿ ಗಣದ್ದೀನಿ, ಎ.ಕೆ. ಮುಲ್ಲಾ, ಅಂಜುಮನ್‌ ಅಧ್ಯಕ್ಷ ಶಫೀಕ್ ಮೂಲಿಮನಿ, ಶರಣು ಬಂಡಿಹಾಳ, ಶಿಕ್ಷಕ ಪ್ರಕಾಶ ತಳವಾರ, ಶಿಕ್ಷಕ ಆರ್.ಜಿ. ಕೊರ್ಲಹಳ್ಳಿ ನಿರೂಪಿಸಿದರು. ಐಟಿಐ, ಪಿಯುಸಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.