ಸಾಲ ನೀಡಲು ನಿರಾಕರಿಸಿದ್ದಕ್ಕೆ ಬೇಕರಿಯ ಬಾಟಲಿಗಳನ್ನು ಒಡೆದು ಹಾಕಿ ದಾಂಧಲೆ ನಡೆಸಿ ಮಹಿಳೆಗೆ ಪ್ರಾಣ ಬೆದರಿಕೆ ಹಾಕಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾಲ ನೀಡಲು ನಿರಾಕರಿಸಿದ್ದಕ್ಕೆ ಬೇಕರಿಯ ಬಾಟಲಿಗಳನ್ನು ಒಡೆದು ಹಾಕಿ ದಾಂಧಲೆ ನಡೆಸಿ ಮಹಿಳೆಗೆ ಪ್ರಾಣ ಬೆದರಿಕೆ ಹಾಕಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹೇಶ್ ಮತ್ತು ರಜತ್ ಬಂಧಿತರು. ಬೇಕರಿ ಮಾಲೀಕರಾಗಿರುವ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಎಚ್‌.ಎಂ.ಟಿ ಲೇಔಟ್‌ನಲ್ಲಿರುವ ಬೇಕರಿಗೆ ಇಬ್ಬರು ಕಿಡಿಗೇಡಿಗಳು ನುಗ್ಗಿ ಮೊಬೈಲ್‌ ಚಾರ್ಜ್‌ ಹಾಕಲು ಮುಂದಾಗಿದ್ದರು. ಈ ವೇಳೆ ವಾಗ್ವಾದವಾಗಿದೆ. ನಂತರ ಸಿಗರೆಟ್ ಮತ್ತು ಟೀಯನ್ನು ಸಾಲ ಕೊಡುವಂತೆ ಕೇಳಿದ್ದಾರೆ. ಅದಕ್ಕೆ ಬೇಕರಿಯಲ್ಲಿದ್ದ ಮಹಿಳೆ ಹಳೇ ಸಾಲ ಇದೆ ಅದನ್ನು ಕೊಡಿ, ಆಮೇಲೆ ಹೊಸದಾಗಿ ಸಾಲ ಕೊಡುತ್ತೇನೆ ಎಂದು ಹೇಳಿದ್ದು, ಇದರಿಂದ ರೊಚ್ಚಿಗೆದ್ದ ಇಬ್ಬರು ಬೇಕರಿಯ ಮುಂಭಾಗದಲ್ಲಿಟ್ಟಿದ್ದ ಬಾಟಲ್‌ಗಳನ್ನು ತೆಗೆದುಕೊಂಡು ನೆಲಕ್ಕೆ ಬಡಿದು, ಗ್ಲಾಸ್‌ಗಳನ್ನು ಒಡೆದು ದಾಂಧಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.