ಮೆಟ್ರೋ ರೈಲಿನಲ್ಲಿ ಸಾಫ್ಟ್‌ವೇರ್ ಮಹಿಳಾ ಉದ್ಯೋಗಿಯೊಬ್ಬರ ವಿಡಿಯೋ ಮಾಡಿರುವ ಕಿಡಿಗೇಡಿ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೆಟ್ರೋ ರೈಲಿನಲ್ಲಿ ಸಾಫ್ಟ್‌ವೇರ್ ಮಹಿಳಾ ಉದ್ಯೋಗಿಯೊಬ್ಬರ ವಿಡಿಯೋ ಮಾಡಿರುವ ಕಿಡಿಗೇಡಿ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಘಟನೆ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಸಂತ್ರಸ್ತೆ ವಿಡಿಯೋ ಅಪ್‌ಲೋಡ್ ಮಾಡಿದ್ದರು. ಇದನ್ನು ಗಮನಿಸಿದ ಪೊಲೀಸರು, ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದಲು ಅಡಾವತ್ ಹೇಳಿದ್ದಾರೆ.

ಪಟ್ಟಂದೂರು ನಿವಾಸಿಯಾದ ಸಂತ್ರಸ್ತೆ ಅವರು, ಕೆಲಸ ಮುಗಿಸಿಕೊಂಡು ಮಂಗಳವಾರ ಸಂಜೆ ಮೆಟ್ರೋದಲ್ಲಿ ಮನೆಗೆ ಮರಳುತ್ತಿದರು. ಆಗ ಮಾರ್ಗ ಮಧ್ಯೆ ಅವರ ಹಿಂಬದಿ ಪ್ರಯಾಣಿಕ ವಿಡಿಯೋ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಿಡಿಗೇಡಿಯಿಂದ ಮೊಬೈಲ್ ಕಸಿದುಕೊಂಡು ಆತನ ವರ್ತನೆಗೆ ಸಂತ್ರಸ್ತೆ ಆಕ್ಷೇಪಿಸಿದ್ದಾರೆ. ನಂತರ ಕೂಡಲೇ ಬಿಎಂಆರ್‌ಸಿ ಭದ್ರತಾ ಸಿಬ್ಬಂದಿ ಗಮನಕ್ಕೆ ಅವರು ತಂದಿದ್ದಾರೆ. ಆಗ ಕಾಡುಗೋಡಿ ನಿಲ್ದಾಣದಲ್ಲಿ ಸಂತ್ರಸ್ತೆ ಬಳಿ ಕ್ಷಮೆ ಕೋರಿ ಆತ ತೆರಳಿದ್ದಾನೆ. ಈ ಘಟನೆ ಕುರಿತು ವಿಡಿಯೋದಲ್ಲಿ ಸಂತ್ರಸ್ತೆ ಹಂಚಿಕೊಂಡಿದ್ದಾರೆ. ಈಗ ಅನುಚಿತ ವರ್ತನೆ ತೋರಿದ ಅಪರಿಚಿತನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.