‘ಸ್ಟಿಂಗ್‌ ಆಪರೇಷನ್‌ ವಿಚಾರದಲ್ಲಿ ಜೆಡಿಎಸ್ ಕಾರ್ಯಕರ್ತರು ಪೊಲೀಸ್‌ ಆಧಿಕಾರಿಗಳನ್ನು ಕಂಡು ಭಯಪಡುವ ಅಗತ್ಯವಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ನಿಮ್ಮ ಮನೆಗೆ ನುಗ್ಗಿ ಕಾನೂನುಬಾಹಿರವಾಗಿ ವರ್ತಿಸುತ್ತಿರುವ ಆ ಅಧಿಕಾರಿಗಳ ಹೆಸರು ಬರೆದಿಟ್ಟುಕೊಳ್ಳಿ. ಅವರಿಗೆ ಕಾಲವೇ ಉತ್ತರಿಸಲಿದೆ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬುಧವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸ್ ಅಧಿಕಾರಿಗಳು ಯಾರ ಒತ್ತಡಕ್ಕೆ ಮಣಿದು ಯಾವ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಕಾರ್ಯಕರ್ತರು ಅಧೀರರಾಗಬೇಕಿಲ್ಲ. ಇನ್ನೊಂದು ವರ್ಷದ ಬಳಿಕ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ಲೆಕ್ಕ ಚುಕ್ತಾ ಮಾಡೋಣ. ಆದರೆ ಕಾನೂನು ಮೀರದೆ ಜನರ ಪರವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ಗೌರವ ಕೊಡಿ ತಿಳಿಸಿದರು.

ಹಾಲಿ ಮುಖ್ಯಮಂತ್ರಿ ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ ಎಂದು ಪದೇಪದೇ ಹೇಳುತ್ತಿದ್ದಾರೆ. ನಮಗೂ ಒಂದು ಕಾಲ ಬಂದೇ ಬರುತ್ತದೆ. ಆ ಕಾಲವೇ ಇಂತಹ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಉತ್ತರ ನೀಡುತ್ತದೆ. ಕಾನೂನು ಮೀರಿ ವರ್ತಿಸುವ ಪ್ರತಿಯೊಬ್ಬ ಅಧಿಕಾರಿಯೂ ಮುಂದೆ ತಕ್ಕ ಶಾಸ್ತಿ ಕಾದಿದೆ. ಅವರು ಸೇವೆಯಲ್ಲಿರಲಿ ಅಥವಾ ನಿವೃತ್ತಿಯಾಗಿ ಮನೆಯಲ್ಲೇ ಇರಲಿ, ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ನಾಯಕಿಯೇ ಷಡ್ಯಂತ್ರದ ಸೂತ್ರಧಾರಿ:

ಈ ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಯಾರು ಎಂಬುದನ್ನು ಗೃಹ ಸಚಿವರು ಬಹಿರಂಗಪಡಿಸಲಿ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿದ್ದ ಕಾಂಗ್ರೆಸ್‌ನ ಮಹಿಳಾ ನಾಯಕಿಯೇ ಈ ಇಡೀ ಷಡ್ಯಂತ್ರದ ಮುಖ್ಯ ಸೂತ್ರಧಾರಿ. ಯುವತಿಯನ್ನು ಕೂರಿಸಿ ಟ್ರ್ಯಾಪ್‌ ಮಾಡಲು ಪ್ರಚೋದಿಸಿ ಖಾಸಗಿ ಸುದ್ದಿ ವಾಹಿನಿಯ ವ್ಯಕ್ತಿಯಿಂದ ವಿಡಿಯೋ ರೆಕಾರ್ಡ್ ಮಾಡಿಸಿದವರ ಬಗ್ಗೆ ತನಿಖೆ ಏಕೆ ನಡೆಯುತ್ತಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.