ಕಸ ವಿಲೇವಾರಿ ವಿಚಾರವಾಗಿ ನೆರೆಹೊರೆಯವರ ಮಧ್ಯೆ ನಡೆದಿದ್ದ ಜಗಳ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಸ ವಿಲೇವಾರಿ ವಿಚಾರವಾಗಿ ನೆರೆಹೊರೆಯವರ ಮಧ್ಯೆ ನಡೆದಿದ್ದ ಜಗಳ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ದೊಡ್ಡ ನಾಗಮಂಗಲ ಗ್ರಾಮದ ಬ್ರೆನ್ವುಡ್ ಅಪಾರ್ಟ್ಮೆಂಟ್ ನಿವಾಸಿ ಎಂ.ಆರ್.ಚಂದ್ರಶೇಖರ್ ಗುಪ್ತ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ಆದೇಶಿಸಿದೆ.
ನೆರೆಹೊರೆಯವರು ವ್ಯಕ್ತಿ ಮತ್ತು ಕುಟುಂಬಗಳು ದೈನಂದಿನ ಬದುಕಿನಲ್ಲಿ ವಿಶಿಷ್ಟ ಸ್ಥಾನ ಹೊಂದಿರುತ್ತಾರೆ. ಇತರ ಹಲವು ಸಂಬಂಧಗಳಂತೆ ನೆರೆಹೊರೆಯವರನ್ನು ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ. ಕೆಲವೇ ನಿಮಿಷಗಳ ಭಿನ್ನಾಭಿಪ್ರಾಯವನ್ನು ನಿಯಂತ್ರಿಸದೆ ಬಿಟ್ಟರೆ, ಅದು ಹಲವು ವರ್ಷಗಳ ವೈರತ್ವಕ್ಕೆ ಕಾರಣವಾಗಬಹುದು. ನಂತರ ಅದೇ ಮನೆ ಅಥವಾ ವಸತಿ ಪ್ರದೇಶದಲ್ಲಿ ಅನುಮಾನ, ಅಸಮಾಧಾನ ಮತ್ತು ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಗಬಹುದು. ಹಾಗಾಗಿ, ನೆರೆಹೊರೆಯವರನ್ನು ಪ್ರೀತಿಸಿ ಎಂಬ ಮಾತು ಎಲ್ಲ ವಿಚಾರಗಳಲ್ಲೂ ಒಪ್ಪಿಕೊಳ್ಳಬೇಕು. ನೆರೆಹೊರೆಯ ವಿವಾದಗಳನ್ನು ದೈಹಿಕ ಹಿಂಸಾಚಾರದ ಮೂಲಕ ಬಗೆಹರಿಸುವುದು ಸ್ವೀಕಾರಾರ್ಹವಲ್ಲ. ಅರ್ಜಿದಾರರ ವಿರುದ್ಧದ ಆರೋಪಪಟ್ಟಿ ರದ್ದುಪಡಿಸಲು ಸಕಾರಣಗಳಿಲ್ಲ ಎಂದು ಪೀಠ ಹೇಳಿದೆ.ಪ್ರಕರಣವೇನು?
ಕಸ ಸರಿಯಾಗಿ ವಿಲೇವಾರಿ ಮಾಡದಿರುವ ವಿಚಾರದಲ್ಲಿ ಬ್ರೆನ್ವುಡ್ ಅಪಾರ್ಟ್ಮೆಂಟ್ನ ಎಂ.ಆರ್. ಚಂದ್ರಶೇಖರ್ಗುಪ್ತ, ಅವರ ಪತ್ನಿ ನೇಹಾ ಗುಪ್ತ ಮತ್ತು ಸ್ವಾತಿ ಶರ್ಮಾ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ಅದು ದೈಹಿಕ ಹಲ್ಲೆಗೆ ತಿರುಗಿತ್ತು. ಇಬ್ಬರೂ ಪರಸ್ಪರ ದೂರು-ಪ್ರತಿ ದೂರು ದಾಖಲಿಸಿದ್ದರು. ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ಹಲ್ಲೆ ಹಾಗೂ ಜೀವ ಬೆದರಿಕೆ ಸೇರಿದಂತೆ ಇನ್ನಿತರ ಅಪರಾಧಗಳ ಸಂಬಂಧ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.