‘ನನ್ನ ಮಾತು ನಡೆಯುತ್ತಾ, ಇಲ್ವಾ? ನಂಗಷ್ಟೇ ಗೊತ್ತು’

Published : Sep 18, 2026, 10:53 AM IST
Former CM Siddaramaiah

ಸಾರಾಂಶ

ಸರ್ಕಾರದಲ್ಲಿ ನನ್ನ ಮಾತು ನಡೆಯುತ್ತದೆ ಎಂದು ಬಹಳ ಜನ ಅಂದುಕೊಂಡಿದ್ದಾರೆ. ನಾನು ಕೂಡ ಹಾಗೇ ಅಂದುಕೊಂಡಿದ್ದೇನೆ. ಆದರೆ, ಎಷ್ಟು ನಡೆಯುತ್ತಿದೆ, ಎಷ್ಟು ನಡೆಯುತ್ತಿಲ್ಲ ಎಂಬುದು ನನಗೆ ಮಾತ್ರ ಗೊತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು : ಸರ್ಕಾರದಲ್ಲಿ ನನ್ನ ಮಾತು ನಡೆಯುತ್ತದೆ ಎಂದು ಬಹಳ ಜನ ಅಂದುಕೊಂಡಿದ್ದಾರೆ. ನಾನು ಕೂಡ ಹಾಗೇ ಅಂದುಕೊಂಡಿದ್ದೇನೆ. ಆದರೆ, ಎಷ್ಟು ನಡೆಯುತ್ತಿದೆ, ಎಷ್ಟು ನಡೆಯುತ್ತಿಲ್ಲ ಎಂಬುದು ನನಗೆ ಮಾತ್ರ ಗೊತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

ಗುರುವಾರ ಸರ್ಕಾರಿ ನೌಕರರ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಪತ್ರಿಕಾ ಸಂಪಾದಕರ ಸಂಘದಿಂದ ಆಯೋಜಿಸಿದ್ದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಘದಿಂದ ನೀಡಲಾದ ಬೇಡಿಕೆಗಳ ಮನವಿ ಪತ್ರಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು.

ಟಿವಿ, ಪತ್ರಿಕೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶಗಳು ದೊರೆಯಬೇಕು. ಈ ಸಮುದಾಯದವರಿಗೆ ಬುದ್ಧಿವಂತಿಕೆ, ಪ್ರೌಢಿಮೆಯ ಕೊರತೆಯಿಲ್ಲ. ನಾನು ಈಗ ಮುಖ್ಯಮಂತ್ರಿ ಅಲ್ಲ. ಆದರೆ, ನಾನು 8 ವರ್ಷ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಉತ್ತಮ ಬದಲಾವಣೆಗಳನ್ನು ತರುವ ಪ್ರಯತ್ನ ಮಾಡಿದೆ. ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆ ಎಸ್‌ಸಿ ಎಸ್ಪಿ-ಟಿಎಸ್‌ಪಿ ಅನುದಾನ ಮೀಸಲು ಜಾರಿ, ಸರ್ಕಾರಿ ಉದ್ಯೋಗದ ಮುಂಬಡ್ತಿಯಲ್ಲಿ ಮೀಸಲಾತಿಯನ್ನು ಜಾರಿಗೆ ತಂದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಎರಡು ಹೊಸ ದತ್ತಿ ಪ್ರಶಸ್ತಿಗಳಿಗೆ 2 ಲಕ್ಷ ರು.

ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಅವರು ಇದೇ ವೇಳೆ ಸಂಘದಿಂದ ನೀಡಲಾಗುವ ಎರಡು ಹೊಸ ದತ್ತಿ ಪ್ರಶಸ್ತಿಗಳಿಗೆ 2 ಲಕ್ಷ ರು. ನೀಡುವುದಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ವೆಂಕಟೇಶ, ಎ.ಆರ್.ಕೃಷ್ಣಮೂರ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ವಿ.ಶಿವಾನಂದ ತಗಡೂರು, ಎಸ್ಸಿ ಎಸ್ಟಿ ಸಂಪಾದಕರ ಸಂಘದ ಅಧ್ಯಕ್ಷ ಚಲುವರಾಜು, ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕ ಎನ್‌.ರವಿಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ವಿಜೇತರು: 

ಬಾಬಾ ಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ- ಕೆ.ದೀಪಕ್, ಬಿ.ರಾಚಯ್ಯ ದತ್ತಿ ಪ್ರಶಸ್ತಿ- ಕೆ.ಬುದ್ರುದ್ದೀನ್, ಪ್ರೊ.ಬಿ.ಕೃಷ್ಣಪ್ಪ ದತ್ತಿ ಪ್ರಶಸ್ತಿ- ಗುರುಪ್ರಸಾದ್ ಕೆರೆಗೋಡು ಹಾಗೂ ಬಿ.ಬಸವಲಿಂಗಪ್ಪ ದತ್ತಿ ಪ್ರಶಸ್ತಿಯನ್ನು ಯತಿರಾಜ ಬ್ಯಾಲಹಳ್ಳಿ ಅವರಿಗೆ ಪ್ರದಾನ ಮಾಡಲಾಯಿತು.

ರಾಜ್ಯದ ವಿವಿಧ ಪತ್ರಿಕೆಗಳ ಸಂಪಾದಕರಾದ ಚಂದ್ರಣ್ಣ, ದೇವೇಂದ್ರಪ್ಪ ಕಪ್ಪನೂರು, ಬಿ.ಒ.ಕರಿಯಮ್ಮ, ಸುಭಾಷ್ ಹೊದ್ಲೂರು ಹಾಗೂ ಅನೂಪ್ ಕುಮಾರ್ ಅವರಿಗೆ ಸಂಘದ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನೂರಾರು ವರ್ಷಗಳಿಂದ ಶಿಕ್ಷಣದ ಅವಕಾಶಗಳಿಂದ ಈ ಸಮುದಾಯದವರು ವಂಚಿತರಾಗಿದ್ದರು. ಹೀಗಾಗಿ, ಮಾಧ್ಯಮಗಳಲ್ಲಿ ಅವರ ಸಂಖ್ಯೆ ಕಡಿಮೆಯಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಪತ್ರಕರ್ತರು ಸತ್ಯವಾದ ಸುದ್ದಿಗಳನ್ನು ಜನರಿಗೆ ತಿಳಿಸಬೇಕು. ಮಾಧ್ಯಮದ ಮೂಲಕ ಅಸತ್ಯ ಹೇಳಿದರೆ ಜನ ಅದನ್ನು ನಂಬುವ ಸಾಧ್ಯತೆ ಇರುತ್ತದೆ. ಊಹಾಪೋಹಗಳ ಪತ್ರಿಕೋದ್ಯಮವನ್ನು ಪತ್ರಿಕಾರಂಗ ಮಾಡಬಾರದು. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾವಂತರೇ ಜಾತಿ ಹಾಗೂ ಅಸ್ಪೃಶ್ಯತೆಯ ಆಚರಣೆಗಳನ್ನು ಮುಂದುವರಿಸುವುದನ್ನು ಕಾಣುತ್ತೇವೆ. ಹಾಗಾದರೆ ಎಲ್ಲರನ್ನು ಸಮಾನವಾಗಿ ಕಾಣಬೇಕು ಎನ್ನುವ ಶಿಕ್ಷಣದ ಮೂಲ ಉದ್ದೇಶ ಈಡೇರುವುದೇ? ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜ್ಯಾದ್ಯಂತ ಪ್ರಧಾನಿ ಮೋದಿ ಜನ್ಮದಿನ ಸಂಭ್ರಮ
ಮಂಗಳೂರಲ್ಲಿ ಇಂದು ಐತಿಹಾಸಿಕ ಸಂಪುಟ ಸಭೆಯ ಕುತೂಹಲ