ಮಂಡ್ಯ : ಸಿದ್ದರಾಮಯ್ಯ ಅವರ ಕಾಲುಗುಣ ಚೆನ್ನಾಗಿಲ್ಲ, ಕಾಂಗ್ರೆಸ್ ಸರ್ಕಾರದ ಕಾಲುಗುಣ ಸರಿಯಿಲ್ಲ ಎಂದು ವಿರೋಧಪಕ್ಷಗಳು ಟೀಕಿಸಿದ್ದವು. ಈಗ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆ ಆಗುತ್ತಿದೆ. ವಿರೋಧಪಕ್ಷಗಳು ಮೂಢಾತ್ಮರು. ಈಗ ಏನು ಹೇಳುತ್ತಾರೆ. ನಾವು ಅಧಿಕಾರದಲ್ಲಿದ್ದಾಗ ಯಾವಾಗಲಾದರೂ ರೈತರಿಗೆ ಬೀಜ-ಗೊಬ್ಬರಕ್ಕೆ ತೊಂದರೆ ಮಾಡಿದ್ದೇವಾ. ಬಿತ್ತನೆ ಬೀಜ ಕೇಳಿದವರ ಮೇಲೆ ಗೋಲಿಬಾರ್ ಮಾಡಿದ್ದೇವಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗಿನ ಸಮರ್ಪಣಾ ಸಮಾರಂಭದಲ್ಲಿ ಪ್ರಶ್ನಿಸಿದರು.
ಯಾವ ಇಲಾಖೆಗೆ ದುಡ್ಡು ಕೊಟ್ಟಿಲ್ಲ ಹೇಳಲಿ:
ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಶಾಸಕರಿಗೆ ೫೦ ಕೋಟಿ ರು. ಕೊಡಲಾಗಿದೆ. ಡಿ.ಕೆ.ಶಿವಕುಮಾರ್‌ಗೆ ಹೇಳಿ ನೀರಾವರಿಗೆ ಅಂತ ಕೊಡಿಸಿದ್ದೇನೆ. ಆದರೂ ಸರ್ಕಾರದಲ್ಲಿ ದುಡ್ಡಿಲ್ಲ, ಅಭಿವೃದ್ಧಿಗೆ ಕೆಲಸಗಳಿಗೆ ದುಡ್ಡಿಲ್ಲ ಎಂದು ವಿಪಕ್ಷದವರು ಟೀಕೆ ಮಾಡುತ್ತಾರೆ. ಯಾವ ಅಭಿವೃದ್ಧಿಗೆ, ಯಾವ ಇಲಾಖೆಗೆ ದುಡ್ಡು ಕೊಟ್ಟಿಲ್ಲ ಹೇಳಲಿ. ಅಭಿವೃದ್ಧಿಗಾಗಿ ಗ್ಯಾರಂಟಿಗಳನ್ನು ನಿಲ್ಲಿಸಿಲ್ಲ. ಗ್ಯಾರಂಟಿಗಳನ್ನು ಕೊಟ್ಟರೆ ಆರ್ಥಿಕ ದಿವಾಳಿ ಆಗುತ್ತೆ ಎಂದಿದ್ದರು. ಆರ್ಥಿಕ ಶಿಸ್ತಿನ ಮೂಲಕ ಆಡಳಿತ ಮಾಡಿರೋದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಸಮರ್ಥನೆ ಮಾಡಿಕೊಂಡರು.
ಅಣೆಕಟ್ಟು ಭರ್ತಿ ದಾಖಲೆ ಸ್ಮಾರಕವಾಗಲಿ:
ಇಡೀ ದೇಶದಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ನಂಬರ್ ೨ ಸ್ಥಾನದಲ್ಲಿದೆ. ದಿವಾಳಿ ಆಗಿದ್ದರೆ ಇಷ್ಟೆಲ್ಲಾ ಕೆಲಸ ಮಾಡಲು ಸಾಧ್ಯವಾಗುತ್ತಿತ್ತಾ. ರಾಜ್ಯಾದ್ಯಂತ ನೀರಾವರಿಗೆ ೨೫ ಸಾವಿರ ಕೋಟಿ ರು. ಕೊಟ್ಟಿದ್ದೇವೆ. ಪ್ರಕೃತಿ ಕೃಪೆಯಿಂದ ಜೂನ್‌ನಲ್ಲೇ ಬಾಗಿನ ಅರ್ಪಿಸಿದ್ದೇವೆ. ಇದು ವಿಶೇಷವಾದ ದಾಖಲೆ. ಇದು ಜನರ ನೆನಪಿನಲ್ಲಿ ಉಳಿಯಬೇಕು. ಮುಂದಿನ ಜನಾಂಗಕ್ಕೂ ಗೊತ್ತಾಗಬೇಕು. ಹೀಗಾಗಿ ಇದರ ಜ್ಞಾಪಕಾರ್ಥವಾಗಿ ಆದಷ್ಟು ಬೇಗ ಇಲ್ಲೊಂದು ಸ್ಮಾರಕ ನಿರ್ಮಾಣ ಮಾಡುವಂತೆ ಸ್ಥಳೀಯ ಶಾಸಕರು ಮತ್ತು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು.
ನಾವು ನುಡಿದಂತೆ ನಡೆದಿದ್ದೇವೋ, ಇಲ್ಲವೋ ನೀವೇ ವಿಮರ್ಶೆ ಮಾಡಿ. ಜೆಡಿಎಸ್-ಬಿಜೆಪಿಯವರಿಗೆ ಒಂದೇ ವೇದಿಕೆಗೆ ಬನ್ನಿ. ಚರ್ಚೆ ಮಾಡೋಣ ಅಂತ ಕರೆದೆ. ನಮ್ಮಿಂದ ಮಾಡಲು ಸಾಧ್ಯವಾಗುವುದನ್ನು ಮಾಡುತ್ತೇವೆ. ಆಗದಿರುವುದನ್ನು ಮಾಡೋದಿಲ್ಲ ಎಂದೇ ಹೇಳುತ್ತೇವೆ. ಆದರೆ, ಸುಳ್ಳು ಹೇಳುವುದಿಲ್ಲ. ಕೊಟ್ಟ ಮಾತಿನಂತೆ ನಾವು ನಡೆದಿದ್ದೇವೆ. ಅದಕ್ಕಾಗಿ ಜನರ ಆಶೀರ್ವಾದ ನಮಗೆ ಬೇಕು ಎಂದು ಕೋರಿದರು.
ಮೇಕೆದಾಟುಗೆ ಅನುಮತಿ ಕೊಡಿಸುತ್ತಿಲ್ಲ:
ಮೇಕೆದಾಟು ಯೋಜನೆಗೆ ನಾವು ನಿರ್ಧಾರ ಮಾಡಿದ್ದೇವೆ. ಅದಕ್ಕೆ ಕೇಂದ್ರದಿಂದ ಅನುಮತಿ ಕೊಡಿಸಿ ಎಂದರೆ ಕೊಡಿಸುತ್ತಿಲ್ಲ. ಐದು ನಿಮಿಷದಲ್ಲಿ ಅನುಮತಿ ಕೊಡಿಸುತ್ತೇನೆ ಎಂದವರು ಕೊಡಿಸಿದರೇ ಎಂದು ಪರೋಕ್ಷವಾಗಿ ಎಚ್‌ಡಿಕೆ ಕಾಲೆಳೆದ ಸಿಎಂ, ಆದರೂ ಅವರೇ ವೋಟು ಹಾಕುತ್ತೀರಿ ಎಂದು ಕುಟುಕಿದರು.
ನಾವು ಪ್ರತಿ ವರ್ಷ ೧೨೫ ಟಿಎಂಸಿ ನೀರನ್ನು ತಮಿಳುನಾಡಿಗೆ ಕೊಡಬೇಕು. ಈಗಾಗಲೇ ೪೫ ಟಿಎಂಸಿ ನೀರು ತಮಿಳುನಾಡಿಗೆ ಹರಿದುಹೋಗಿದೆ. ಕಳೆದ ವರ್ಷ ೩೦೫ ಟಿಎಂಸಿ ನೀರನ್ನು ಕೊಟ್ಟಿದ್ದೇವೆ. ತಾಯಿ ಚಾಮುಂಡೇಶ್ವರಿ ಕೃಪಾಕಟಾಕ್ಷ ಹೀಗೆಯೇ ಇರಲಿ ಎಂದು ಪ್ರಾರ್ಥಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎನ್.ಚಲುವರಾಯಸ್ವಾಮಿ, ಎಚ್.ಸಿ.ಮಹದೇವಪ್ಪ, ವೆಂಕಟೇಶ್, ಬೋಸರಾಜು, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಕೆ.ಎಂ.ಉದಯ್, ಹರೀಶ್‌ಗೌಡ, ರವಿಶಂಕರ್, ಎ.ಆರ್.ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ, ವಿಧಾನ ಪರಿಷತ್ ಶಾಸಕರಾದ ಮಧು ಜಿ.ಮಾದೇಗೌಡ, ದಿನೇಶ್ ಗೂಳೀಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಇತರರು ಭಾಗವಹಿಸಿದ್ದರು.