ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸ್ವಂತ ನಿವೇಶನ ದಾನ ಮಾಡಿದ ಶಾಸಕ ಕೆ.ಎಂ.ಉದಯ್

KannadaprabhaNewsNetwork | Updated : Jul 01 2025, 08:14 AM IST

ಮದ್ದೂರು ಪುರಸಭೆ ವ್ಯಾಪ್ತಿಯ ಚನ್ನೇಗೌಡನದೊಡ್ಡಿ ಕೆಲ ತಿಂಗಳ ಹಿಂದೆ ಎಂ.ಸಿ.ಲೋಕೇಶ್ ಅವರಿಂದ 80 ಲಕ್ಷ ರು . ಮೌಲ್ಯದ 5,445 ಚದರ ಅಡಿ ನಿವೇಶನವನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ದಾನ ನೀಡಲು ಶಾಸಕ ಉದಯ್ ಖರೀದಿ ಮಾಡಿದ್ದರು.

 ಮದ್ದೂರು :  ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಅವರು ತಮ್ಮ ಸ್ವಂತ ನಿವೇಶನವನ್ನು ಸೋಮವಾರ ಕೆಪಿಸಿಸಿಗೆ ದಾನವಾಗಿ ನೀಡಿದರು.

ಪಟ್ಟಣದ ತಾಲೂಕ ಕಚೇರಿ ಹಿಂಭಾಗದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣದ ನಿವೇಶನದ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಶಾಸಕ ಉದಯ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನಿವೇಶನದ ದಾನ ಪತ್ರವನ್ನು ನೀಡಿದರು.

ಮದ್ದೂರು ಪುರಸಭೆ ವ್ಯಾಪ್ತಿಯ ಚನ್ನೇಗೌಡನದೊಡ್ಡಿ ಕೆಲ ತಿಂಗಳ ಹಿಂದೆ ಎಂ.ಸಿ.ಲೋಕೇಶ್ ಅವರಿಂದ 80 ಲಕ್ಷ ರು . ಮೌಲ್ಯದ 5,445 ಚದರ ಅಡಿ ನಿವೇಶನವನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ದಾನ ನೀಡಲು ಶಾಸಕ ಉದಯ್ ಖರೀದಿ ಮಾಡಿದ್ದರು. ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆ ಆರ್ ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಅವರನ್ನು ಮದ್ದೂರು ಉಪ ನೊಂದಣಿ ಕಚೇರಿಗೆ ಕರೆತಂದು ಕಾಂಗ್ರೆಸ್ ಭವನ ನಿರ್ಮಾಣದ ದಾನ ಪತ್ರವನ್ನು ಹಸ್ತಾಂತರ ಮಾಡಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ಪುರಸಭಾಧ್ಯಕ್ಷೇ ಕೋಕಿಲ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ತಹಸೀಲ್ದಾರ್ ಡಾ.ಸ್ಮಿತಾರಾಮು, ಕೆಪಿಸಿಸಿ ಕಚೇರಿ ಅಧಿಕಾರಿಗಳು ಇದ್ದರು.

ಕಾಂಗ್ರೆಸ್ ಭವನಗಳ ನಿರ್ಮಾಣಕ್ಕೆ 100 ನಿವೇಶನಗಳ ಖರೀದಿ

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಭವನಗಳ ನಿರ್ಮಾಣಕ್ಕೆ 100 ನಿವೇಶನಗಳನ್ನು ಖರೀದಿ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋಮವಾರ ಹೇಳಿದರು.

ಪಟ್ಟಣದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಶಾಸಕ ಕೆ.ಎಂ.ಉದಯ್ ಕೆಪಿಸಿಸಿಗೆ ದಾನವಾಗಿ ನೀಡಿದ ನಿವೇಶನದ ಹಕ್ಕು ಪತ್ರವನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮದ್ದೂರು ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ 100 ನಿವೇಶನಗಳನ್ನು ಖರೀದಿ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಸದ್ಯದಲ್ಲಿಯೇ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ವರ್ಚುಯಲ್ ಮೂಲಕ ಏಕಕಾಲದಲ್ಲಿ ಭವನಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಕಾಂಗ್ರೆಸ್ ಕಚೇರಿ ಕಾರ್ಯಕರ್ತರಿಗೆ ದೇವಾಲಯ: ಶಾಸಕ ಕೆ.ಎಂ.ಉದಯ್

ನಮ್ಮ ನಿಷ್ಠಾವಂತ ಕಾರ್ಯಕರ್ತರು ದಿನದ ಆರಂಭವನ್ನೇ ಕಾಂಗ್ರೆಸ್ ಕಚೇರಿಯಿಂದ ಆರಂಭಿಸುವಂತಹ ನಂಬಿಕೆ ಮತ್ತು ಭಕ್ತಿಯುಳ್ಳವರು. ಅಂತಹ ಭಾವಪೂರ್ಣ ನಿಷ್ಠೆಗೆ ಗೌರವವಾಗಿ ಪಟ್ಟಣದ ಟಿ.ಬಿ.ಸರ್ಕಲ್‌ನಲ್ಲಿ ನನ್ನ ಸ್ವಂತ ಜಾಗವನ್ನು ಕೆಪಿಸಿಸಿಗೆ ದಾನವಾಗಿ ನೀಡಿದ್ದೇನೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕೆಪಿಸಿಸಿಗೆ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೂಲಕ ಈ ನಿವೇಶನದ ನೋಂದಣಿ ಮಾಡಿಕೊಡುವ ಭಾಗ್ಯ ನನಗೆ ಲಭ್ಯವಾಯಿತು. ಮಹಾತ್ಮ ಗಾಂಧೀಜಿ ಅವರ ಶತಮಾನೋತ್ಸವದ ಸ್ಮರಣಾರ್ಥವಾಗಿ ರಾಜ್ಯಾದ್ಯಂತ ನಿರ್ಮಿಸಲಾಗುತ್ತಿರುವ 100 ಕಾಂಗ್ರೆಸ್ ಕಚೇರಿಗಳ ಪೈಕಿ ಮದ್ದೂರಿನ ಈ ಕಚೇರಿ ಕೂಡ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಇದು ನಮ್ಮ ಪಕ್ಷದ ಶಕ್ತಿಕೇಂದ್ರವಾಗಿ, ಜನತೆಯ ಆಶೆಗಳ ಕೇಂದ್ರವಾಗಿ, ಮುಂದಿನ ಜನಾಂಗದ ರಾಜಕೀಯ ತರಬೇತಿಯ ನೆಲೆಯಲ್ಲಿ ಬೆಳೆಯಲಿ ಎಂದು ಉದಯ್ ಹಾರೈಸಿದ್ದಾರೆ.

Read more Articles on