ಕಾವೇರಿ ಆರತಿಗೆ ವಿರೋಧ ಮಾಡಬೇಡಿ : ಡಿಸಿಎಂ ಡಿ.ಕೆ.ಶಿವಕುಮಾರ್

KannadaprabhaNewsNetwork | Updated : Jul 01 2025, 08:18 AM IST

ಕಾವೇರಿ ಆರತಿ ಮಾಡುವುದಕ್ಕೆ ವಿರೋಧ ಮಾಡುವುದು ಬೇಡ. ವಿರೋಧ ಮಾಡಲೇಬೇಕೆಂಬ ಕಾರಣಕ್ಕೆ ವಿರೋಧಿಸಬೇಡಿ. ಆರತಿಗೆ ಸಹಕಾರ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

 ಮಂಡ್ಯ :  ಕಾವೇರಿ ಆರತಿ ಮಾಡುವುದಕ್ಕೆ ವಿರೋಧ ಮಾಡುವುದು ಬೇಡ. ವಿರೋಧ ಮಾಡಲೇಬೇಕೆಂಬ ಕಾರಣಕ್ಕೆ ವಿರೋಧಿಸಬೇಡಿ. ಆರತಿಗೆ ಸಹಕಾರ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿ, ಕಾವೇರಿ ಆರತಿಗೆ ವಿರೋಧ ಮಾಡುವವರಲ್ಲಿ ನಾನು ಭಕ್ತಿ, ವಿನಮ್ರತೆಯಿಂದ ಮನವಿ ಮಾಡುತ್ತೇನೆ. ವಿರೋಧ ಮಾಡಲೇಬೇಕು ಎಂಬ ಕಾರಣಕ್ಕೆ ವಿರೋಧಿಸಬೇಡಿ. ಸಹಕಾರ ನೀಡಿ. ನೀರಿಗೆ ಜಾತಿ, ಧರ್ಮವಿಲ್ಲ. ನೀರನ್ನು ಪೂಜೆ ಮಾಡುವುದು ನಮ್ಮ ಸಂಸ್ಕೃತಿ. ಪ್ರಯತ್ನಕ್ಕೆ ಸೋಲಾಗಬಹುದು ಪ್ರಾರ್ಥನೆಗೆ ಸೋಲಾಗುವುದಿಲ್ಲ ಎಂದು ನುಡಿದರು.

ಪ್ರಾರ್ಥನೆಗೆ ಅರ್ಜಿ, ಅನುಮತಿ ಬೇಕಾ?:

ಅಣೆಕಟ್ಟೆಯಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ಕಾವೇರಿ ಆರತಿಗೆ ಜಾಗ ನಿಗದಿ ಮಾಡಿದ್ದೇವೆ. ದೇವರಿಗೆ ಪ್ರಾರ್ಥನೆ ಮಾಡಲು ಅರ್ಜಿ ಹಾಕಬೇಕೆ?, ಯಾರದ್ದಾದರೂ ಅನುಮತಿ ಪಡೆಯಬೇಕೆ?, ಬೆಂಗಳೂರಿನಲ್ಲಿ ಜಲ ಮಂಡಳಿಯಿಂದ ನಡೆಸಿದ ಕಾವೇರಿ ಆರತಿಗೆ ೨೫ ಸಾವಿರ ಜನ ಸೇರಿದ್ದರು. ಇಲ್ಲಿ ಕಾವೇರಿ ಆರತಿ ನಡೆಸಿದರೆ ಮಂಡ್ಯ, ಮೈಸೂರು ಭಾಗದ ೧,೫೦೦ ಜನರಿಗೆ ಉದ್ಯೋಗ ದೊರಕುತ್ತದೆ. ಬೃಂದಾವನ ಉದ್ಯಾನ ಅಭಿವೃದ್ಧಿ ಮಾಡಿದರೆ ಸ್ಥಳಿಯ ೩ ಸಾವಿರ ಜನರಿಗೆ ಉದ್ಯೋಗ ದೊರೆಯುತ್ತದೆ ಎಂದರು.

ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ. ಇಲ್ಲಿ ಜನ ಕುಳಿತುಕೊಳ್ಳಲು ಸ್ಥಳಾವಕಾಶ ಮಾಡಲಾಗುತ್ತಿದೆ. ನೀವು ಏಕೆ ಮನೆಯಲ್ಲಿ ಪ್ರತಿದಿನ ದೇವರ ಪೂಜೆ ಮಾಡುತ್ತೀರಿ. ದೇವರು ಇಲ್ಲದಿದ್ದರೂ ಸೂರ್ಯನಿಗೆ ಏಕೆ ನಮಸ್ಕಾರ ಮಾಡುತ್ತೀರಿ. ನನ್ನ ಮಾತುಗಳು ನೇರ, ದಿಟ್ಟವಾಗಿ ಇರಬಹುದು ಯಾರೂ ಸಹ ಅನ್ಯತಾ ಭಾವಿಸಬಾರದು ಎಂದರು.

ಅತ್ಯುತ್ತಮ ಪ್ರವಾಸಿ ಕೇಂದ್ರ ನಮ್ಮ ಗುರಿ:

ಬೃಂದಾವನ ಉದ್ಯಾನವನ್ನು ಅತ್ಯಂತ ಹೆಚ್ಚು ಆಕರ್ಷಣೀಯಗೊಳಿಸುವುದು ನಮ್ಮ ಉದ್ದೇಶ. ಮೈಸೂರು ದಸರಾ ರೀತಿ ಅತ್ಯುತ್ತಮ ದೀಪಾಲಂಕಾರ ಮಾಡಲಾಗಿದೆ. ಅತ್ಯುತ್ತಮ ಕಾರಂಜಿಗಳನ್ನು ರೂಪಿಸಲಾಗಿದೆ. ವಿದೇಶಗಳಿಂದ ಅಲಂಕಾರಿಕ ಸಸ್ಯಗಳನ್ನು ತರಿಸಲಾಗಿದೆ. ನಮ್ಮ ಮುಖ್ಯಮಂತ್ರಿಗಳು ಇದನ್ನು ಅತ್ಯುತ್ತಮ ಪ್ರವಾಸಿ ಕೇಂದ್ರ ಮಾಡಬೇಕು ಎಂದು ಸಂಕಲ್ಪ ಮಾಡಿದ್ದಾರೆ. ಇದಕ್ಕೆ ಖಾಸಗಿಯವರು ಬಂಡವಾಳ ಹೂಡಬಹುದು ಎಂದು ಟೆಂಡರ್ ಆಹ್ವಾನಿಸಿದ್ದೇವೆ ಎಂದರು.

2 ಸಾವಿರ ಕೋಟಿ ರು.ಗೂ ಹೆಚ್ಚು ಅನುದಾನ:

ಕಾವೇರಿ ಜಲಾನಯನ ಪ್ರದೇಶಕ್ಕೆ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಪ್ರತಿ ಕ್ಷೇತ್ರವನ್ನೂ ಗಮದಲ್ಲಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆ ಒಂದಕ್ಕೆ ೧ ಸಾವಿರ ಕೋಟಿಗೂ ಹೆಚ್ಚು ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ನಮ್ಮ ಸರ್ಕಾರ ಎರಡು ವರ್ಷಗಳ ಅಧಿಕಾರವಧಿಯಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶವನ್ನು ಹೆಚ್ಚು ಮಾಡಿದೆ. ೮೦ ವರ್ಷಗಳ ಹಳೆಯ ಕಾಲುವೆಗಳನ್ನು ದುರಸ್ತಿಗೊಳಿಸಲಾಗಿದೆ ಎಂದರು.

ರಾಜ್ಯದ ಅಣೆಕಟ್ಟುಗಳ ಗೇಟ್‌ಗಳನ್ನು ದುರಸ್ತಿಗೊಳಿಸಲು ಈಗಾಗಲೇ ತಾಂತ್ರಿಕ ಸಮಿತಿ ರಚನೆ ಮಾಡಿದ್ದೇವೆ. ಆ ಸಮಿತಿಯಿಂದ ವರದಿ ತೆಗೆದುಕೊಂಡು ಹಂತ, ಹಂತವಾಗಿ ರಾಜ್ಯದ ಅಣೆಕಟ್ಟುಗಳ ಗೇಟ್ ದುರಸ್ತಿ ಮಾಡಬೇಕು ಎಂದು ಮುಂದಾಗಿದ್ದೇವೆ. ಕೃಷ್ಣ ನ್ಯಾಯಮಂಡಳಿ ಆದೇಶಕ್ಕೆ ಒಮ್ಮೆ ಮಹಾರಾಷ್ಟ್ರದವರು ಅಡ್ಡಗಾಲು ಹಾಕಿದ್ದರು. ಈಗ ಆಂಧ್ರ ಪ್ರದೇಶದವರು ಇದನ್ನು ಮುಂದುವರೆಸಿದ್ದಾರೆ ಎಂದರು.

ತಾಳ್ಮೆಯಿಂದ ಇದ್ದರೆ ಅನುದಾನ ಬರುತ್ತೆ:

ಬಜೆಟ್ ಮಂಡಿಸಿ ಒಂದು ತಿಂಗಳಾಗಿದೆ. ತಾಳ್ಮೆಯಿಂದ ಇದ್ದರೆ ಅನುದಾನ ಬಂದೇ ಬರುತ್ತದೆ. ನಾವು ಕೊಟ್ಟ ಮಾತನ್ನು ತಪ್ಪುವವರಲ್ಲ. ಆರ್ಥಿಕ ಇಲಾಖೆಯವರು ಆರ್ಥಿಕ ಶಿಸ್ತಿಗಾಗಿ ಹಂತ, ಹಂತವಾಗಿ ಹಣ ಬಿಡುಗಡೆ ಮಾಡುತ್ತಾರೆ. ಯಡಿಯೂರಪ್ಪ, ಕುಮಾರಸ್ವಾಮಿ, ಬೊಮ್ಮಾಯಿ ಕಾಲದಲ್ಲಿ ಬಜೆಟ್‌ಗಿಂತ ಹೆಚ್ಚು ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಅದಕ್ಕಾಗಿ ಗುತ್ತಿಗೆದಾರರು ಸ್ವಲ್ಪ ತಾಳ್ಮೆಯಿಂದ ವರ್ತನೆ ಮಾಡಬೇಕು ಎಂದರು.

ತುಂಗಾಭದ್ರಾ ಅಣೆಕಟ್ಟಿನ ಗೇಟ್ ಒಡೆದು ಹೋದಾಗ ಪ್ರತಿ ಪಕ್ಷಗಳು ಇಲ್ಲ ಸಲ್ಲದ ಟೀಕೆ ಮಾಡಿದರು. ಇಡೀ ಡ್ಯಾಂ ಒಡೆದು ಹೋಗುತ್ತದೆ ಎಂದು ಆರೋಪ ಮಾಡಿದರು. ನಾವು ತಕ್ಷಣ ತೀರ್ಮಾನ ತೆಗೆದುಕೊಂಡು ಆ ಗೇಟ್‌ನ್ನು ದುರಸ್ತಿಗೊಳಿಸಿ ರೈತರ ಎರಡನೇ ಬೆಳೆಗೂ ನೀರು ನೀಡಿದ ಇತಿಹಾಸ ಈ ಕಾಂಗ್ರೆಸ್ ಸರ್ಕಾರಕ್ಕಿದೆ. ಆ ಗೇಟ್ ದುರಸ್ತಿಗೆ ದುಡಿದ ಪ್ರತಿಯೊಬ್ಬ ಕಾರ್ಮಿಕನಿಗೂ ನಾನು ಹಾಗೂ ಸಿದ್ದರಾಮಯ್ಯ ಅವರು ಸನ್ಮಾನಿಸಿದೆವು. ಮುಖ್ಯ ಎಂಜಿನಿಯರ್ ಒಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆವು ಎಂದರು.

ಕವನ ವಾಚಿಸಿದ ಡಿಸಿಎಂ:

ಕಾವೇರಿ ತುಂಬಿದ್ದಾಳೆ, ರೈತರು ನಲಿದಿದ್ದಾರೆ. ಕಾವೇರಿ ಒಲಿದಿದ್ದಾಳೆ, ಬರ ಓಡಿಸಿದ್ದಾಳೆ. ನಮ್ಮೆಲ್ಲರ ಪ್ರಾರ್ಥನೆಗೆ, ನಿಮ್ಮೆಲ್ಲರ ಆರತಿಗೆ ಕಾವೇರಿ ತುಂಬಿ ಹರಿಯುತ್ತಿದ್ದಾಳೆ. ಕಾವೇರಿ ತುಂಬಿದರೆ ಶಾಂತಿ. ಕಾವೇರಿ ಹರಿದರೆ ಸಂತೃಪ್ತಿ ಎಂದು ಕವನವನ್ನು ಉಪಮುಖ್ಯಮಂತ್ರಿ ಶಿವಕುಮಾರ್ ಅವರು ವಾಚನ ಮಾಡಿದರು.

ಮೈಸೂರು ರಾಜಮಾತೆ ತಮ್ಮ ಒಡವೆಗಳನ್ನು ಅಡವಿಟ್ಟು ಈ ಅಣೆಕಟ್ಟು ನಿರ್ಮಾಣಕ್ಕೆ ಮುನ್ನುಡಿ ಬರೆದರು. ಈ ಕಾರಣಕ್ಕೆ ಕಬ್ಬಿನ ಸಿಹಿ ಹಂಚಲಾಗುತ್ತಿದೆ, ಇಡೀ ಬೆಂಗಳೂರಿಗೆ, ತಮಿಳುನಾಡಿಗೆ ನೀರು ನೀಡಲಾಗುತ್ತಿದೆ ಎಂದರು.

ಕಾವೇರಿ ನಮ್ಮೆಲ್ಲರ ಜೀವಧಾರೆ, ಕೆಆರ್‌ಎಸ್ ತುಂಬಿದರೆ ಸಂತೃಪ್ತಿಯ ಧಾರೆ, ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ. ಹಿಮಾಲಯದಲ್ಲಿ ಹುಟ್ಟುವ ಗಂಗಾ ನದಿಯಷ್ಟೇ ನಮ್ಮ ರಾಜ್ಯದಲ್ಲಿ ಹುಟ್ಟುವ ಕಾವೇರಿ ನದಿ ಪವಿತ್ರವಾದುದು. ಹುಟ್ಟು ಸಾವು, ಪ್ರಕೃತಿ, ಭೂಮಿ ಯಾವುದು ನಮ್ಮ ಕೈಯಲ್ಲಿ ಇಲ್ಲ. ಎಲ್ಲವೂ ಭಗವಂತನ ಕೈಯಲ್ಲಿದೆ. ಇನ್ನೊಬ್ಬರ ಜೀವನದಲ್ಲಿ ಎಷ್ಟು ಬದಲಾವಣೆ ತರುತ್ತೇವೆ, ಸಂತೋಷ ಉಂಟು ಮಾಡುತ್ತೇವೆ ಎನ್ನುವುದರಲ್ಲಿ ನಮ್ಮ ಬದುಕಿನ ಸಾರ್ಥಕತೆ ಅಡಗಿದೆ ಎಂದು ತಿಳಿಸಿದರು.

Read more Articles on