- ಸರ್ಕಾರದ ಗ್ಯಾರಂಟಿ ಸ್ಕೀಂ ಸಾಧನೆಯ ಅಂಕಿ-ಅಂಶ ತೆರೆದಿಟ್ಟ ಎಂಎಲ್‌ಸಿ - ಬಿಜೆಪಿ-ಜೆಡಿಎಸ್‌ಗೆ ಇದನ್ನು ಸಹಿಸಲು ಆಗುತ್ತಿಲ್ಲ: ಆಕ್ರೋಶ ಕನ್ನಡಪ್ರಭ ವಾರ್ತೆ ಮಂಡ್ಯ ಸರ್ಕಾರದ ಜನಕಲ್ಯಾಣ ಯೋಜನೆಗಳು ರಾಜ್ಯದ ಎಲ್ಲ ಜನರನ್ನು ತಲುಪಿ ಆರ್ಥಿಕ ಶಕ್ತಿ ನೀಡುತ್ತಿದ್ದರೂ ವಿರೋಧ ಪಕ್ಷಗಳು ಅನಗತ್ಯವಾಗಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ ಗೂಳಿಗೌಡ ಕಿಡಿಕಾರಿದ್ದಾರೆ. ‘ರಾಜ್ಯ ಸರ್ಕಾರದ ಯೋಜನೆಗಳು ಲಕ್ಷಾಂತರ ಕುಟುಂಬಗಳನ್ನು ತಲುಪಿವೆ. ಕುಟುಂಬಗಳಿಗೆ ಅನ್ನ ಮತ್ತು ಆರ್ಥಿಕ ಶಕ್ತಿ ನೀಡುತ್ತಿವೆ. ಸರ್ಕಾರದ ಯೋಜನೆಗಳಿಂದ ಮಹಿಳೆಯರು ಸಂತುಷ್ಟರಾಗಿದ್ದಾರೆ ಎಂಬ ಬಗ್ಗೆ ಅಂಕಿ-ಅಂಶಗಳು ಕಣ್ಣ ಮುಂದೆಯೇ ಇವೆ. ಅದನ್ನು ನೋಡಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರಿಗೆ ಸಹಿಸಲು ಆಗುತ್ತಿಲ್ಲ. ನಾಯಕತ್ವ ಇಲ್ಲದೇ ಪರದಾಡುತ್ತಿರುವ ಬಿಜೆಪಿ, ಜೆಡಿಎಸ್ ಜೊತೆ ಸೇರಿ ಸರ್ಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ. ಜನರ ದಿಕ್ಕು ತಪ್ಪಿಸುವ ವ್ಯರ್ಥ ಪ್ರಯತ್ನ ನಡೆಸಿದೆ’ ಎಂದು ಗೂಳಿಗೌಡ ಟೀಕಿಸಿದ್ದಾರೆ. ‘ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನೀಡುತ್ತಿರುವ ಜನಪ್ರಿಯ ಯೋಜನೆಗಳಿಂದ ಸರ್ಕಾರದ ಪರ ಜನಾಭಿಪ್ರಾಯ ಮೂಡಿದೆ. ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ ಜನರ ಕಷ್ಟಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದೆ. ತೀವ್ರ ಬರಗಾಲದ ನಡುವೆಯೂ ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಸರ್ವ ಜನಾಂಗದ ಬೆಂಬಲ ಗಳಿಸಿದೆ. ಪ್ರತಿಪಕ್ಷಗಳ ಹೋರಾಟಗಳಿಗೆ ಜನರು ಕಿಮ್ಮತ್ತು ನೀಡದೆ, ಸುಳ್ಳು ಆರೋಪಗಳಿಗೆ ಸ್ಪಂದಿಸದೆ ಇರುವುದರಿಂದ ವಿರೋಧ ಪಕ್ಷಗಳ ನಾಯಕರು ಕವಲು ದಾರಿಯಲ್ಲಿದ್ದಾರೆ’ ಎಂದು ಅವರು ಕಿಡಿಕಾರಿದ್ದಾರೆ. ಅಲ್ಲದೆ,ಕಳೆದ ಐದು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮಾಹಿತಿ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆ: ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 1.18 ಕೋಟಿ ಕುಟುಂಬಗಳ ಯಜಮಾನಿಯರ ಬ್ಯಾಂಕ್ ಖಾತೆಗಳಿಗೆ 2,000 ರು.ಗಳನ್ನು ನೇರವಾಗಿ ಜಮಾ ಮಾಡಲಾಗುತ್ತಿದೆ. ಇದಕ್ಕಾಗಿ ಸರ್ಕಾರ 2,250 ಕೋಟಿ ರು. ವೆಚ್ಚ ಮಾಡುತ್ತಿದೆ. ಗೃಹಜ್ಯೋತಿ: ತಿಂಗಳಿಗೆ ರಾಜ್ಯದ 1.52 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯ ಲಾಭವಾಗುತ್ತಿದೆ. ಸರ್ಕಾರ ಯೋಜನೆಗಾಗಿ 780 ಕೋಟಿ ರು. ವೆಚ್ಚ ಮಾಡುತ್ತಿದೆ. ಅನ್ನಭಾಗ್ಯ ಯೋಜನೆ: ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿರುವ 3.82 ಕೋಟಿ ಫಲಾನುಭವಿಗಳಿಗೆ ಅನ್ಯಭಾಗ್ಯ ಯೋಜನೆಯಡಿ ತಲಾ 5 ಕೆ.ಜಿ ಅಕ್ಕಿ ಖರೀದಿಗಾಗಿ 34 ರು. ನಂತೆ 170 ರು.ಯನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಅದಕ್ಕಾಗಿ ತಿಂಗಳಿಗೆ 650 ಕೋಟಿ ರು. ವೆಚ್ಚವಾಗುತ್ತಿದೆ. ಶಕ್ತಿ ಯೋಜನೆ: ಶಕ್ತಿ ಯೋಜನೆಯಡಿ ಈವರೆಗೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ 86 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಅದಕ್ಕಾಗಿ ಸರ್ಕಾರ 2,036.44 ಕೋಟಿ ರು.ಯನ್ನು ವೆಚ್ಚ ಮಾಡಿದೆ ಎಂದು ಎಂಎಲ್‌ಸಿ ದಿನೇಶ್ ಗೂಳಿಗೌಡ ಅವರು ಮಾಹಿತಿ ನೀಡಿದ್ದಾರೆ.