ಸುದ್ದಿಗೋಷ್ಠಿಯಲ್ಲಿ ಎಸ್.ಎ.ರಾಮದಾಸ್ । ಜೆಡಿಎಸ್ ಎನ್‌ಡಿಎ ಪಾಲುದಾರ ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯ ವಿಧಾನಸಭಾ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ ಕೇಂದ್ರದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅಧ್ಯಕ್ಷ ಮತ್ತು ವಿರೋಧ ಪಕ್ಷದ ಅಯ್ಕೆ ಕೇಂದ್ರದ ಮೇಲೆ ಇದೆ. ಶೀಘ್ರವೇ ಪಂಚರಾಜ್ಯ ಚುನಾವಣೆ ಇರುವುದರಿಂದ ಈಗ ಆಯ್ಕೆ ಮಾಡುತ್ತಾರೆ. ಆದರೆ ನಾವೆಲ್ಲಾ ಕಾರ್ಯಕರ್ತರು ಅಧ್ಯಕ್ಷ, ನಾಯಕರನ್ನು ನೋಡದೆ ಕೆಲಸ ಮಾಡುತ್ತಿದ್ದೇವೆ ಎಂದರು. ಕೆಲ ನಾಯಕರು ಬಿಜೆಪಿ ಬಿಡುತ್ತಿರುವ ವಿಚಾರ ಕುರಿತು ಮಾತನಾಡಿದ ಅವರು, ಯಾರಿಗೆ ಪಕ್ಷದ ಮೇಲೆ ಪ್ರೀತಿ ಗೌರವ ಇದೆಯೋ ಅಂಥವರು ಇರುತ್ತಾರೆ. ಈ ಹಿಂದೆ ನಮಗೂ ಕೂಡ ಹಲವು ಪರೀಕ್ಷೆಗಳು ಬಂದಿದ್ದವು. ನಾವು ಅವುಗಳನ್ನು ಎದುರಿಸಿದ್ದೇವೆ. ಪಕ್ಷ ತಾಯಿ ಇದ್ದಂತೆ. ಪಕ್ಷ ಕಷ್ಟದಲ್ಲಿ ಇದೆ ಎಂದು ಬಿಟ್ಟು ಹೋಗುವುದಿಲ್ಲ ಎಂದು ಉತ್ತರಿಸಿದರು. ನಾವೆಲ್ಲಾ ಪಕ್ಷ ಕಟ್ಟಿ ಬೆಳೆಸಿದವರು. ಪಕ್ಷ ಬಿಟ್ಟು ಹೋದ ಮೇಲೆ ಅಯ್ಯೋ ಯಾಕಾದ್ರು ಪಕ್ಷ ಬಿಟ್ಟು ಹೋದ್ವಿ ಎಂದುಕೊಳ್ಳಬಾರದು. ಪಕ್ಷ ನಮಗೆ ಎಲ್ಲಾ ಕೊಟ್ಟಿದೆ. ಪಕ್ಷದಲ್ಲಿ ಈಗಲೂ ನಾವು ಇರಬೇಕು ಎನ್ನುವುದು ನಮಗೆ ತೃಪ್ತಿ ತಂದಿದೆ ಎಂದು ಹೇಳಿದರು. ಬಿಜೆಪಿ ಜೆಡಿಎಸ್ ಹೊಂದಾಣಿಕೆ ವಿಚಾರ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದ ನಾಯಕರು ಈಗಾಗಲೇ ಈ ವಿಚಾರದ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್ ಎನ್‌ಡಿಎ ಪಾಲುದಾರರಾಗಿ ಬಂದಿದ್ದಾರೆ ಎಂದು ಕೇಂದ್ರ ನಾಯಕರು ಹೇಳಿದ್ದಾರೆ ಎಂದರು. ಮುಸ್ಲಿಂ, ಕೈಸ್ತರಿಗೆ ಹಲವು ದೇಶಗಳಿವೆ. ಆದರೆ ಹಿಂದುಗಳಿಗೆ ಇರುವುದು ಒಂದೇ ದೇಶ ಭಾರತ. ಭಾರತ ಎನ್ನುವುದಕ್ಕೆ ಅರ್ಥ ಇದೆ. ಭರತ ಆಳಿದ ನೆಲ ಎಂದು. ಅಂಬೇಡ್ಕರ್ ಸಂವಿಧಾನದಲ್ಲೇ ಹೇಳಿದ್ದಾರೆ ಭಾರತ ಎಂದು. ಇಂಡಿಯಾ ಎನ್ನುವುದು ಬ್ರಿಟಿಷರು ಬಿಟ್ಟು ಹೋದ ಹೆಸರು. ಭಾರತ ಎನ್ನುವುದು ಗರ್ವದ ವಿಚಾರ. ದೇಶ ಪ್ರೇಮವನ್ನು ಹುಟ್ಟಿಸುವ ಕೆಲಸ ಪಠ್ಯ ಪುಸ್ತಕಗಳಲ್ಲಿ ಇರಬೇಕು. ಅಲೆಕ್ಸಾಂಡರ್ ದಿ ಗ್ರೇಟ್ ಎಂದು ನಾವು ಮಕ್ಕಳಿಗೆ ಹೇಳಿ ಕೊಡುತ್ತೇವೆ. ಆದರೆ ಅವನನ್ನು ಸೋಲಿಸಿದವರು ಸಾಮಾನ್ಯ ಖುಷಿ. ಅಂತಹ ಇತಿಹಾಸವನ್ನು ತಿಳಿಸುವ ಕೆಲಸವನ್ನು ಪಠ್ಯ ಪುಸ್ತಕಗಳು ಮಾಡಬೇಕು ಎಂದರು.