ಕನ್ನಡಪ್ರಭ ವಾರ್ತೆ, ತುಮಕೂರು ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಅರ್ಹ ಶಿಕ್ಷಕ ಮತದಾರರ ನೋಂದಣಿಗಾಗಿ ಜಿಲ್ಲಾದ್ಯಂತ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ನೋಂದಣಿಗೆ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ. ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಡಾ. ವೈ.ಎ. ನಾರಾಯಣಸ್ವಾಮಿ ಅವರ ಪದಾವಧಿಯು 2024ರ ಜೂನ್ 21ಕ್ಕೆ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ 1.11. 2023ನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ಮತದಾರರ ಪಟ್ಟಿಯನ್ನು ತಯಾರಿಸಲು ಮತದಾರರ ನೋಂದಣಿ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲೆಯ ನಿಗಧಿತ ಶೈಕ್ಷಣಿಕ ಸಂಸ್ಥೆಗಳಲ್ಲಿರುವ ಅರ್ಹ ಶಿಕ್ಷಕ ಮತದಾರರಿಗೆ ನಮೂನೆ-19ನ್ನು ವಿತರಿಸಿ ಭರ್ತಿ ಮಾಡಿದ ಅರ್ಜಿಯನ್ನು ನಿಗಧಿತ ಅವಧಿಯೊಳಗೆ ಅವರಿಂದ ಪಡೆಯಬೇಕು ಎಂದು ನಿರ್ದೇಶನ ನೀಡಿದರು. ಜಿಲ್ಲೆಯ ಎಲ್ಲಾ ತಾಲೂಕುಗಳ ಹೋಬಳಿವಾರು ಶಿಕ್ಷಣ ಸಂಸ್ಥೆಗಳನ್ನು ಪಟ್ಟಿ ಮಾಡಿ ಮತದಾರರ ನೋಂದಣಿ ದಿನಾಂಕ ಹಾಗೂ ಸ್ಥಳವನ್ನು ನಿಗಧಿಪಡಿಸಿ ಈಗಾಗಲೇ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಶಿಕ್ಷಣ ಸಂಸ್ಥೆಗಳಿಂದ ನೋಂದಣಿ ಅರ್ಜಿ ಸ್ವೀಕರಿಸಲು ಅವಕಾಶವಿರುವುದಿಲ್ಲವೆಂದು ತಿಳಿಸಿದರು. ಆಗ್ನೇಯ ಶಿಕ್ಷಕರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸಾಮಾನ್ಯ ನಿವಾಸಿಯಾಗಿದ್ದು, 2023ರ ನವೆಂಬರ್ 1ಕ್ಕಿಂತ ಮೊದಲಿನ 6 ವರ್ಷಗಳ ಅವಧಿಯಲ್ಲಿ ಕನಿಷ್ಟ 3ವರ್ಷಗಳಷ್ಟು ಪ್ರೌಢಶಾಲೆಗಿಂತ ಕಡಿಮೆಯಲ್ಲದ ದರ್ಜೆಯಲ್ಲಿ ನಿರ್ಧಿಷ್ಟಪಡಿಸಿದಂತೆ ರಾಜ್ಯದೊಳಗಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನಾ ವೃತ್ತಿಯಲ್ಲಿ ನಿರತರಾಗಿರುವವರು ಈ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಅರ್ಹರಿರುತ್ತಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 1171 ಶೈಕ್ಷಣಿಕ ಸಂಸ್ಥೆಗಳಿದ್ದು, ಅರ್ಹ ಶಿಕ್ಷಕ ಮತದಾರರಿಗೆ ನಮೂನೆ-19ನ್ನು ವಿತರಿಸಲಾಗಿದೆ. ಭರ್ತಿ ಮಾಡಿದ 1656 ಅರ್ಜಿಗಳನ್ನು ಪಡೆಯಲಾಗಿದೆ ಎಂದು ಚುನಾವಣಾ ತಹಸೀಲ್ದಾರ್ ಗೌರಮ್ಮ ಸಭೆಗೆ ಮಾಹಿತಿ ನೀಡಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಅರ್ಹ ಶಿಕ್ಷಕ ಮತದಾರರು ನವೆಂಬರ್ 6 ರವರೆಗೆ ಮಾತ್ರ ಅರ್ಜಿ ನಮೂನೆ 19ನ್ನು ಭರ್ತಿ ಮಾಡಿ ಸಲ್ಲಿಸಿ ಮತದಾರರ ಪಟ್ಟಿಗೆ ನೋಂದಾಯಿಸಲು ಅವಕಾಶವಿದೆ ಎಂದು ತಿಳಿಸಿದರು. ಕಳೆದ ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿಗೆ ಹೋಲಿಸಿದಾಗ ಶೇ.48.12ರಷ್ಟು ಮಾತ್ರ ಅರ್ಜಿ ಸ್ವೀಕರಿಸಿದ್ದು, ಇನ್ನೂ ಹೆಚ್ಚಿನ ಶಿಕ್ಷಕರ ನೋಂದಣಿಗೆ ಅಗತ್ಯ ಕ್ರಮವಹಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಲು ರಜಾ ದಿನಗಳಾದ 29 ಹಾಗೂ ನವೆಂಬರ್ 5ರ ಭಾನುವಾರದಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕೆಂದು ನಿರ್ದೇಶನ ನೀಡಿದರು. ಮತದಾರರ ಪಟ್ಟಿಗೆ ಅನರ್ಹ ಶಿಕ್ಷಕರನ್ನು ನೋಂದಾಯಿಸಲು ಶಿಫಾರಸ್ಸು ಮಾಡುವುದು ಹಾಗೂ ನೋಂದಣಿ ಕಾರ್ಯದಲ್ಲಿ ನಿರ್ಲಕ್ಷತೆ ವಹಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪಾಲಿಕೆ ಉಪ ಆಯುಕ್ತೆ ಸುಮತಿ ಮಾತನಾಡಿ, ನಗರ ವ್ಯಾಪ್ತಿಯಲ್ಲಿ 26ರಂದು ತುಮಕೂರು ವಿಶ್ವವಿದ್ಯಾನಿಲಯ, 27 ರಂದು ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ, 30ರಂದು ಎಸ್‌ಐಟಿ ಕಾಲೇಜು ಹಾಗೂ 31ರಂದು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶಿಕ್ಷಕ ಮತದಾರರ ನೋಂದಣಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಜಿ.ಪಂ. ಸಿಇಒ ಜಿ. ಪ್ರಭು, ಮಹಾನಗರಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ವಿವಿ ಕುಲಸಚಿವೆ ನಹೀದಾ ಜಂಜಂ, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಗಂಗಾಧರ್, ಶಾಲಾ ಶಿಕ್ಷಣ ಇಲಾಖೆ (ಆಡಳಿತ) ಉಪನಿರ್ದೇಶಕ ರಂಗಧಾಮಯ್ಯ, ತಹಸೀಲ್ದಾರ್ ಸಿದ್ದೇಶ್ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.