ಜನರನ್ನು ಕಲ್ಯಾಣಮಂಟಪದಲ್ಲಿ ಕೂರಿಸಿ ರಾಮನಗರದಲ್ಲಿ ಎಸ್‌ಐಆರ್‌ : ಎಚ್‌ಡಿಕೆ

Published : Jul 03, 2026, 06:33 AM IST
Bengaluru SIR

ಸಾರಾಂಶ

ರಾಮನಗರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ(ಎಸ್‌ಐಆರ್‌) ಮುಖ್ಯಮಂತ್ರಿಗಳ ನೇರ ಪ್ರಭಾವ ಬಳಸಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಸೇರಿ ಸಾವಿರಾರು ಕಳ್ಳ ಮತದಾರರಿಗೆ ದಾಖಲೆ ಸೃಷ್ಟಿಸುವ ಯತ್ನ ಆರೋಪ

  ಬೆಂಗಳೂರು :  ರಾಮನಗರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ(ಎಸ್‌ಐಆರ್‌) ಮುಖ್ಯಮಂತ್ರಿಗಳ ನೇರ ಪ್ರಭಾವ ಬಳಸಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಸೇರಿ ಸಾವಿರಾರು ಕಳ್ಳ ಮತದಾರರಿಗೆ ದಾಖಲೆ ಸೃಷ್ಟಿಸುವ ಯತ್ನ ನಡೆಯುತ್ತಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ಜೆಡಿಎಸ್‌ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಮ್ಮ ಆರೋಪಕ್ಕೆ ಸಂಬಂಧಿಸಿ ವಿಡಿಯೋ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನಿಯಮದಂತೆ ಬಿಎಲ್‌ಒಗಳು ಮನೆ-ಮನೆಗೆ ಹೋಗಬೇಕು. ಆದರೆ, ರಾಮನಗರದಲ್ಲಿ ಸಿಎಂ ಪ್ರಭಾವ ಬಳಸಿ ಸಾವಿರಾರು ಜನರನ್ನು ಟಿಪ್ಪುನಗರದ ಕಲ್ಯಾಣ ಮಂಟಪದಲ್ಲಿ ಕೂರಿಸಿ ಎಸ್‌ಐಆರ್‌ ಜಾತ್ರೆ ನಡೆಸುತ್ತಿದ್ದಾರೆ. ಈ ಮುಖಾಂತರ ದೇಶದ ಭದ್ರತೆಗೆ ಸವಾಲಾಗಿರುವ ಬಾಂಗ್ಲಾ ನುಸುಳುಕೋರರನ್ನು ಪೋಷಿಸಿ ಅವರಿಗೆ ಮತದಾನದ ಹಕ್ಕು ಕೊಡಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ದೂರಿದರು.

ಜಿಲ್ಲಾಧಿಕಾರಿ ಅಮಾನತಿಗೆ ಅಗ್ರಹ:

ರಾಮನಗರ ಸೇರಿ ರಾಜ್ಯದ ಹಲವಾರು ಭಾಗಗಳಲ್ಲಿ ಕಾಂಗ್ರೆಸ್ ಸರ್ಕಾರ ಎಸ್‌ಐಆರ್‌ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಹಾಳುಮಾಡಲು ಹೊರಟಿದೆ. ಅದಕ್ಕೆ ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮವೇ ಸಾಕ್ಷಿ. ಒಂದು ಕೈಯಲ್ಲಿ ಸಂವಿಧಾನ ಹಿಡಿದು ಶೋ ಮಾಡುವ ಪಕ್ಷದ ಹೀನ ಕೆಲಸ ಇದಾಗಿದೆ. ಕೂಡಲೇ ರಾಮನಗರ ಜಿಲ್ಲಾಧಿಕಾರಿಯನ್ನು ಅಮಾನತು ಮಾಡಬೇಕು ಹಾಗೂ ಇದಕ್ಕೆ ಸಂಬಂಧಿಸಿ ಕರ್ತವ್ಯಲೋಪ ಎಸಗಿರುವ ಎಲ್ಲಾ ಅಧಿಕಾರಿಗಳನ್ನು ಮನೆಗೆ ಕಳಿಸಬೇಕು ಎಂದು ಒತ್ತಾಯಿಸಿದರು.

ಬ್ಲ್ಯಾಕ್‌ ಮೇಲ್‌ ಸರಿಯಲ್ಲ:

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಮುಖ್ಯಮಂತ್ರಿಗಳ ಮನೆಯಿಂದಲೇ ಶುರುವಾಯಿತು. ಮುಖ್ಯಮಂತ್ರಿ ಆದವರು ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಯಬೇಕೆಂದು ಜನತೆಗೆ ಕರೆ ನೀಡಬೇಕೇ ಹೊರತು ನಿಮಗೆ ಮತವಿಲ್ಲದಿದ್ದರೆ ಯಾವ ಸೌಲಭ್ಯವು ಸಿಗುವುದಿಲ್ಲ ಎಂದು ಬ್ಲ್ಯಾಕ್‌ ಮೇಲ್‌ ಮಾಡಬಾರದು ಎಂದು ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಕಿಡಿಕಾರಿದರು.

ಅಮಿತ್ ಶಾಗೆ ತಿಳಿಸುವೆ:

ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿರುವ ಈ ಅಕ್ರಮವನ್ನು ಸುಮ್ಮನೆ ಬಿಡುವುದಿಲ್ಲ. ವಿಡಿಯೋ ಸಮೇತ ಎಲ್ಲಾ ಸಾಕ್ಷ್ಯಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ನೀಡುತ್ತೇನೆ. ತಕ್ಷಣ ಮಧ್ಯಪ್ರವೇಶಿಸಿ ಎಸ್‌ಐಆರ್‌ ಪ್ರಕ್ರಿಯೆ ಸ್ಥಗಿತಗೊಳಿಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸುವುದಾಗಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಗ್ಯಾರಂಟಿ ಕಟ್ ಆಗಲಿದೆ ಎಂಬ ಭಯ ಹುಟ್ಟಿಸಿ, ಎಸ್‌ಐಆರ್‌ ಪ್ರಕ್ರಿಯೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ನಾಯಕರ ಕಟು ಮಾತುಗಳೇ ಇದಕ್ಕೆ ಸಾಕ್ಷಿ

-ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಕೈಗಾರಿಕಾ ಸಚಿವ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮನೆಮನೆ ಬಿಟ್ಟು ಕಲ್ಯಾಣ ಮಂಟಪದಲ್ಲಿ ಎಸ್‌ಐಆರ್ ಪ್ರಕ್ರಿಯೆ
ಕೆಪಿಎಸ್‌ಸಿ ಅಧ್ಯಕ್ಷರ ವಿರುದ್ಧ ಕ್ರಮ ಕೋರಿ ಗೌರ್ನರ್‌ಗೆ ದೂರು