ರಾಜ್ಯದ ಜನತೆ ತೆರಿಗೆ ಹಣ ಜಾಹಿರಾತಿಗೆ ಖರ್ಚು : ಎಚ್ಡಿಕೆ

KannadaprabhaNewsNetwork |  
Published : Feb 17, 2026, 01:45 AM ISTUpdated : Feb 17, 2026, 04:20 AM IST
HD Kumaraswamy

ಸಾರಾಂಶ

ರಾಜ್ಯ ಸರ್ಕಾರ ಜನರಿಗೆ ಇನ್ನೊಬ್ಬರಿಗೆ ಕೊಡುವ ಶಕ್ತಿ ಕೊಡಬೇಕಿತ್ತು. ಆದರೆ, ದಿನನಿತ್ಯ ಇನ್ನೊಬ್ಬರ ಮುಂದೆ ಕೈಯೊಡ್ಡುವ ಪರಿಸ್ಥಿತಿಗೆ ಜನರನ್ನು ದೂಡಲಾಗಿದೆ. ರಾಜ್ಯದ ತೆರಿಗೆ ಹಣ ಜಾಹಿರಾತಿಗೆ ಬಳಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

 ಚಿಕ್ಕನಾಯಕನಹಳ್ಳಿ :  ರಾಜ್ಯ ಸರ್ಕಾರ ಜನರಿಗೆ ಇನ್ನೊಬ್ಬರಿಗೆ ಕೊಡುವ ಶಕ್ತಿ ಕೊಡಬೇಕಿತ್ತು. ಆದರೆ, ದಿನನಿತ್ಯ ಇನ್ನೊಬ್ಬರ ಮುಂದೆ ಕೈಯೊಡ್ಡುವ ಪರಿಸ್ಥಿತಿಗೆ ಜನರನ್ನು ದೂಡಲಾಗಿದೆ. ರಾಜ್ಯದ ತೆರಿಗೆ ಹಣ ಜಾಹಿರಾತಿಗೆ ಬಳಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಆಯೋಜಿಸಲಾಗಿದ್ದ ಜನಸ್ಪಂದನದ ೧೦೦ನೇ ವಾರದ ಸಮಾರಂಭ ಮತ್ತು ಸರ್ಕಾರದ ವಿವಿಧ ಸವಲತ್ತು ವಿತರಣೆ, ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಶಾಸಕ ಸುರೇಶ್ ಬಾಬು ನಿಮ್ಮೊಟ್ಟಿಗೆ ನಿಮ್ಮ ಕುಟುಂಬದ ಸದಸ್ಯನಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಜನರು ಬುದ್ಧಿವಂತರಾಗಬೇಕು. ಇನ್ನೊಬ್ಬರಿಗೆ ಕೊಡುವ ಶಕ್ತಿ ತಮಗೆ ಬರದೇ ಇರುವ ಬಗ್ಗೆ ಆಲೋಚನೆ ಮಾಡಬೇಕು. ಮಹಾತ್ಮ ಗಾಂಧೀಜಿ ಅವರ ರಾಮರಾಜ್ಯದ ಕನಸು ನನಸು ಎಂದರೆ ತಾನು ಒಬ್ಬರ ಮುಂದೆ ಕೈಚಾಚುವುದು ಅಲ್ಲ. ಇನ್ನೊಬ್ಬರಿಗೆ ಕೊಡುವುದು ಎಂದು ಕೇಂದ್ರ ಸಚಿವರು ಹೇಳಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳ ಬಗ್ಗೆ ಅತೃಪ್ತಿ

ಪರೋಕ್ಷವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಕುಮಾರಸ್ವಾಮಿ, ಕರ್ನಾಟಕ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಅಭಿವೃದ್ಧಿ ಎನ್ನುವುದು ಪ್ರಚಾರದಲ್ಲಿ ಮಾತ್ರ ಕಾಣುತ್ತಿದೆ. ಕೇವಲ ಜಾಹೀರಾತುಗಳಲ್ಲಿ ಅಭಿವೃದ್ಧಿ ಕಾಣುತ್ತಿದೆ. ನೂರಾರು ಕೋಟಿ ಜನರ ತೆರಿಗೆ ಹಣವನ್ನು ಪೋಲು ಮಾಡಿ ಜಾಹೀರಾತು ನೀಡಲಾಗುತ್ತಿದೆ. ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದೇನೆ. ಆದರೆ, ಅದನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಿಲ್ಲ. ಈಗ ನೋಡಿದರೆ ಕೆಲಸಕ್ಕಿಂತ ಪ್ರಚಾರವೇ ಜಾಸ್ತಿಯಾಗಿದೆ ಎಂದು ಅವರು ಟೀಕಿಸಿದರು.

ಪ್ರಚಾರಕ್ಕಿಂತ ಕರ್ತವ್ಯವೇ ಮಿಗಿಲು

ಪ್ರಚಾರಕ್ಕಿಂತ ಕರ್ತವ್ಯವೇ ಮಿಗಿಲು ಎಂದು ನಾನು ನಂಬಿದ್ದೇನೆ. ಕೇವಲ ರಾಜಕೀಯ ಲಾಭದ ಭರವಸೆಗಳಿಂದ ಜನರಿಗೆ ಉಪಯೋಗವಿಲ್ಲ. ಅವರನ್ನು ಶಾಶ್ವತವಾಗಿ ಮೇಲೆತ್ತುವ ಕೆಲಸ ಆಗಬೇಕಿದೆ. ಕೃಷಿಕರಿಗೆ ಶಕ್ತಿ ತುಂಬಬೇಕಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ ಸೌಲಭ್ಯಗಳು ಎಲ್ಲರಿಗೂ ಕೈಗೆಟುಕುವ ರೀತಿಯಲ್ಲಿರಬೇಕು. ಆದರೆ, ರಾಜ್ಯದಲ್ಲಿ ಬೇರೆಯದೇ ಪರಿಸ್ಥಿತಿ ಇದೆ ಎಂದು ಕೇಂದ್ರ ಸಚಿವರು ಕಳವಳ ವ್ಯಕ್ತಪಡಿಸಿದರು.

ಪ್ರತಿ ಸರ್ಕಾರಿ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಓದಿ ನಾವು ಜಾತ್ಯತೀತರು ಎಂದು ಹೇಳುತ್ತೇವೆ. ಆದರೆ, ಅದಾದ ಮೇಲೆ ಜಾತಿ ಹೆಸರಿನ ಮೇಲೆ ರಾಜಕೀಯ ಮಾಡುತ್ತೇವೆ. ಇವತ್ತು ರಾಜಕೀಯ ಲಾಭಕ್ಕಾಗಿ, ಮೀಸಲಾತಿಗಾಗಿ ಜಾತಿಗಳನ್ನು ಒಡೆಯಲಾಗುತ್ತಿದೆ. ಆಮೇಲೆ ನಾವು ಜಾತ್ಯತೀತರು ಎಂದು ಹೇಳಿಕೊಳ್ಳುತ್ತಾರೆ. ಜನತೆ ಜಾತಿ ವ್ಯಾಮೋಹದಿಂದ ಹೊರಬರದೇ ಹೋದರೆ ಅಭಿವೃದ್ಧಿ ಎಂಬುದು ಮರೀಚಿಕೆ ಆಗುತ್ತದೆ. ಕೃತಕ ಬುದ್ಧಿಮತ್ತೆ ಕಾಲದಲ್ಲಿಯೂ ಜಾತಿ ರಾಜಕಾರಣ ಸರಿಯಲ್ಲ ಎಂದು ಅವರು ಹೇಳಿದರು.

ಸರ್ಕಾರಿ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯಖಾತೆ ಸಚಿವ ವಿ.ಸೋಮಣ್ಣ ಮಾತನಾಡಿ, ಶಾಸಕ ಸುರೇಶ್ ಬಾಬು ಮನೆ ಮಗನಾಗಿ ಜನರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ, ಅದೇ ರೀತಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಮಾಡಿದ್ದರು. ಜನಸ್ಪಂದನ ಕಾರ್ಯಕ್ರಮ ಸಾರ್ವಜನಿಕರು ಬಳಸಿಕೊಳ್ಳಬೇಕು. ಈ ತಾಲೂಕಿನಲ್ಲಿ ಮೈನಿಂಗ್ ಇದ್ದು, ಕೈಗಾರಿಕೆ ತೆರೆಯುವ ಪ್ರಸ್ತಾಪ ಕುಮಾರಸ್ವಾಮಿಯವರ ಮುಂದಿಟ್ಟರು.

ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ ಕೆಲಸವನ್ನು ಕರ್ಮ ಎಂದು ಮಾಡದೇ ಸೇವೆ ಎಂದು ಮಾಡಬೇಕು. ಸೇವೆ ಮಾಡುವುದರಿಂದ ಮಾತ್ರ ನೆಮ್ಮದಿ ಸಾಧ್ಯ. ಇಂದು ದೇಹದ ಆರೋಗ್ಯ ಮುಖ್ಯ. ಅದ್ದರಿಂದ ನಿಮ್ಮ ಆರೋಗ್ಯಕ್ಕಾಗಿ ಇಂತಹ ಶಿಬಿರ ಆಯೋಜಿಸಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಸಿ.ಬಿ.ಸುರೇಶ್‌ಬಾಬು ಮಾತನಾಡಿ, ಜನರಿಗಾಗಿ ರೂಪಿಸಿದ ಜನಸ್ಪಂದನಾ ಕಾರ್ಯಕ್ರಮ ಜನರ ಸಮಸ್ಯೆಗಳನ್ನು ಬಗೆಹರಿಸುತ್ತಿದೆ. ಇಂದು ತಾಲೂಕಿನಲ್ಲಿ ಯಾರು ಸಹ ಪಿಂಚಣಿಯಿಂದ ವಂಚಿತರಾಗಿಲ್ಲ. ತಾಲೂಕಿಗೆ ಮೈಸೂರಿಂದ - ಚಿತ್ರದುರ್ಗ ಕಡೆಗೆ ರೈಲು ಮಾರ್ಗ ನೀಡುವಂತೆ ಮನವಿ ಮಾಡಿದರು. ತಾಲೂಕಿಗೆ ಒಂದು ಬೃಹತ್ ಕೈಗಾರಿಕೆ ನೀಡುವಂತೆ ಸಚಿವರಲ್ಲಿ ಕೋರಿಕೆ ಸಲ್ಲಿಸಿದರು.

ಹಿರಿಯೂರುನ ಶ್ರೀ ಬಸವರಮಾನಂದ ಸ್ವಾಮೀಜಿ, ನಾಗಮಂಗಲದ ಶ್ರೀ ಸತ್‌ ಕೀರ್ತಿನಾಥ ಸ್ವಾಮೀಜಿ , ಹಾಸನ ಶಾಖಾ ಮಂದಶ್ರೀ ಶಂಭುನಾಥ ಸ್ವಾಮೀಜಿ, ಕೆಎಸ್‌ಆರ್‌ಟಿಸಿ ನಿಮಗದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ರಮೇಶ್‌ಬಾಬು, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್‌ರಾಜ್ ಎಂ., ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಮಮತಾ ಎಂ., ಇಒ ದೊಡ್ಡಸಿದ್ದಯ್ಯ, ಹುಳಿಯಾರು ಪಪಂ ಅಧ್ಯಕ್ಷೆ ಪ್ರೀತಿ ರಾಘವೇಂದ್ರ, ಬಿಇಒ ಕಾಂತರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಆರ್. ಶಶಿದರ್, ನಿರ್ದೇಶಕ ರಾಮಚಂದ್ರಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‌ಕುಮಾರ್, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್. ಗೌಡ ಸೇರಿ ಹಲವು ಅಧಿಕಾರಿಗಳು ಇದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ತಾರೀಖ್‌ ಪ್ರಮಾಣಕ್ಕೆ ಮೋದಿಗೆ ಆಹ್ವಾನ, ಸ್ಪೀಕರ್‌ ಬಿರ್ಲಾ ಭಾಗಿ
ಆರೆಸ್ಸೆಸ್ಸನ್ನು ದೆವ್ವಕ್ಕೆ ಹೋಲಿಸಿದ ಪ್ರಿಯಾಂಕ್‌