ಲೂಟಿ ಹೊಡೆಯುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರೇ ಕೊನೆ ಮೊಳೆ ಹೊಡೆಯುತ್ತಾರೆ: ಸುರೇಶ್ ಗೌಡ

KannadaprabhaNewsNetwork |  
Published : Jun 28, 2025, 12:18 AM ISTUpdated : Jun 28, 2025, 06:47 AM IST
26ಕೆಎಂಎನ್ ಡಿ11 | Kannada Prabha

ಸಾರಾಂಶ

ಜನರು ಕೊಟ್ಟಿರುವ ಅಧಿಕಾರವನ್ನು ಲೂಟಿ ಹೊಡೆಯಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರೇ ಕೊನೆಯ ಮೊಳೆ ಹೊಡೆಯುತ್ತಾರೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಗುಡುಗಿದರು.

  ನಾಗಮಂಗಲ :  ಜನರು ಕೊಟ್ಟಿರುವ ಅಧಿಕಾರವನ್ನು ಲೂಟಿ ಹೊಡೆಯಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರೇ ಕೊನೆಯ ಮೊಳೆ ಹೊಡೆಯುತ್ತಾರೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಗುಡುಗಿದರು.

ಪಟ್ಟಣದ ಟಿ.ಬಿ.ಬಡಾವಣೆಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಜನರು ಅತಿಯಾದ ವಿಶ್ವಾಸವಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ಐದು ವರ್ಷ ಕಾಲ ಅಧಿಕಾರ ಉಪಯೋಗಿಸಿಕೊಂಡು ಜನರ ಸೇವೆ ಮಾಡಬೇಕು. ಆದರೆ, ಇದಕ್ಕೆ ಸೊಪ್ಪು ಹಾಕದ ಸರ್ಕಾರ ಐ ಡೋಂಟ್‌ ಕೇರ್ ಎನ್ನುತ್ತಿದೆ ಎಂದು ಕಿಡಿಕಾರಿದರು.

ಎರಡು ವರ್ಷ ಪೂರೈಸಿರುವ ರಾಜ್ಯ ಸರ್ಕಾರ ಮುಂದಿನ ಮೂರು ವರ್ಷದಲ್ಲಿ ಮಾಡುವ ಎಲ್ಲಾ ತಪ್ಪುಗಳನ್ನೆಲ್ಲಾ ವಿರೋಧ ಪಕ್ಷವಾಗಿ ನಾವು ರಾಜ್ಯದ ಜನರ ಮುಂದಿಡುವ ಕೆಲಸ ಮಾಡುತ್ತೇವೆ ಎಂದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಗಬಹುದಾದ ಯೋಜನೆಗಳನ್ನು ತರುವಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. 9 ಸಾವಿರ ಎಲೆಕ್ಟ್ರಿಕಲ್ ಬಸ್‌ಗಳ ಪೈಕಿ 4500 ಬಸ್‌ಗಳನ್ನು ಬೆಂಗಳೂರಿಗೆ ಕೊಟ್ಟಿದ್ದಾರೆ. ಸಂಕಷ್ಟದಲ್ಲಿರುವ ಮಾವು ಬೆಳೆಗಾರರಿಗೆ ಕೇಂದ್ರದಿಂದ ಬೆಂಬಲ ಬೆಲೆ ಕೊಡಿಸಿದ್ದಾರೆ. ಈ ಹಿಂದೆ ಕೊಬ್ಬರಿಗೂ ಕೂಡ ಬೆಂಬಲ ಬೆಲೆ ಕೊಡಿಸಿದ್ದರು ಎಂದು ಹೇಳಿದರು.

ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಟೋಲ್‌ ಕೇಂದ್ರದಿಂದ ಕದಬಹಳ್ಳಿವರೆಗೆ ಅಗತ್ಯವಿರುವ ಅಂಡರ್‌ಪಾಸ್ ಮತ್ತು ಫ್ಲೈಓವರ್‌ಗಳಿಗೆ ಮಂಜೂರಾತಿ ಕೊಡಿಸಿದ್ದಾರೆ. ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಯ ಅಡತಡೆಗಳನ್ನು ಬಗೆಹರಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ವಿಶೇಷ ಚೇತನರಿಗಾಗಿ ಕಾರ್ಯಕ್ರಮವೊಂದನ್ನು ರೂಪಿಸಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಕೇಂದ್ರದಿಂದ ಯಾವುದಾದರೂ ಯೋಜನೆ ರೂಪಿಸಿ ಕಾರ್ಯಕ್ರಮ ಕೊಡಲು ಹೋದರೆ ಪ್ರಧಾನಿ ನರೇಂದ್ರಮೋದಿ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಒಳ್ಳೆಯ ಹೆಸರು ಬರುತ್ತದೆಂಬ ಆತಂಕದಿಂದ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ದೂರಿದರು.

ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಜಿಲ್ಲೆಯ ಯಾವುದೇ ಭಾಗದಲ್ಲಿ ಸೂಕ್ತ ಸ್ಥಳ ಗುರುತಿಸಿಕೊಡುವಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಸಂದೇಶ ಕೊಟ್ಟಿದ್ದರೂ ಕೂಡ ಅದಕ್ಕೆ ಸ್ಪಂದನೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಆರಂಭಿಸಲು ಗಣಿಗಾರಿಕೆಗೆ ಅವಕಾಶ ಕೊಡುತ್ತಿಲ್ಲ. ಎಚ್‌ಎಂಟಿಗೆ ಮರುಜೀವ ಕೊಡಬೇಕೆಂದರೆ ಅಲ್ಲಿನ ಭೂಮಿಯನ್ನು ವಾಪಸ್ ತೆಗೆದುಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಜಿಲ್ಲೆಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಮಾಡಬೇಕೆಂಬುದು ಈ ಹಿಂದಿನ ನಮ್ಮ ಸರ್ಕಾರದ ಯೋಜನೆಯಾಗಿತ್ತು. ಇದು ಕಾಂಗ್ರೆಸ್ ಸರ್ಕಾರದ ಹೊಸ ಯೋಜನೆಯಲ್ಲ. ಸ್ಥಳೀಯ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆಯನ್ನು ಮಾಡಬೇಕಾಗುತ್ತದೆ. ಇವರು ಮಾಡುತ್ತಿರುವ ಕಾರ್ಯಕ್ರಮದಲ್ಲಿ ಪಾರದರ್ಶಕತೆಯಿಲ್ಲ ಎಂದು ದೂರಿದರು.

99 ಕೋಟಿ ವೆಚ್ಚದಲ್ಲಿ ಕಾವೇರಿ ಆರತಿ ಮಾಡುವ ಅಗತ್ಯವಿಲ್ಲ. ಹಣ ಲೂಟಿ ಮಾಡಲು ಈ ಕಾರ್ಯಕ್ರಮ ಮಾಡುತ್ತಿರಬಹುದೆಂದು ಹಲವು ಸಂಘಟನೆಗಳು ಹೇಳಿವೆ. ಸರ್ಕಾರವೂ ಕೂಡ ಅದೇ ಕೆಲಸ ಮಾಡುತ್ತಿದೆ. ಇದರ ವಿರುದ್ಧ ಕೆಲ ಸಂಘಟನೆಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಮುಂದೇನಾಗುವುದೋ ನೋಡೋಣ, ಇದನ್ನು ಸಾರ್ವಜನಿಕವಾಗಿ ಬಗೆಹರಿಸದಿದ್ದರೆ ಅನುಮಾನಕ್ಕೆ ಪುಷ್ಟಿಕೊಟ್ಟಂತಾಗುತ್ತದೆ ಎಂದರು.

ಜೂ.30 ರಂದು ನಿಖಿಲ್ ಕುಮಾರಸ್ವಾಮಿ ಆಗಮನ:

ಜೆಡಿಎಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲು ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಜೂ.30ರ ಸೋಮವಾರ ಪಟ್ಟಣಕ್ಕೆ ಆಗಮಿಸಲಿದ್ದಾರೆ. ಅಂದು ಮಧ್ಯಾಹ್ನ 12.30ಕ್ಕೆ ಪಟ್ಟಣದ ಟಿ.ಬಿ.ಬಡಾವಣೆ ಎಂಆರ್‌ಪಿ ಶ್ರೀ ನಂಜುಂಡೇಶ್ವರ ಪ್ಯಾಲೇಸ್ ಆವರಣದಲ್ಲಿ ನಡೆಯುವ ಸಮಾರಂಭಕ್ಕೆ ತಾಲೂಕಿನ ವಿವಿಧ ಭಾಗಗಳಿಂದ 5 ಸಾವಿರಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ತಾಲೂಕಿನಿಂದ ಕನಿಷ್ಠ 25 ಸಾವಿರ ಸದಸ್ಯತ್ವ ನೋಂದಣಿ ಮಾಡಿಸುವ ಗುರಿ ಹೊಂದಲಾಗಿತ್ತು. ಆದರೆ, ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಗೊಂಡ ನಂತರ ಇಡೀ ರಾಜ್ಯದಲ್ಲಿಯೇ ನಾಗಮಂಗಲ ತಾಲೂಕಿನಿಂದ ಅತಿ ಹೆಚ್ಚು ಸದಸ್ಯತ್ವ ನೋಂದಣಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ನಿರಂತರವಾಗಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್ ಗೋಷ್ಠಿಯಲ್ಲಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

17ಕ್ಕೆ ಮೊದಲ ವಂದೇಭಾರತ್‌ ಸ್ಲೀಪರ್‌ ರೈಲಿಗೆ ಚಾಲನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ