ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಾಸನ ನನ್ನ ಜನ್ಮಭೂಮಿ, ರಾಮನಗರದಲ್ಲಿ ಮಣ್ಣಾಗುತ್ತೇನೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಣ್ಣಾಗುವುದರಲ್ಲಿ ಎರಡೂ ಪದ್ಧತಿ ಇದೆ. ಸಾವಿಗೆ ಮೊದಲೇ ಜಾಗ ತಿಳಿಸಿರುತ್ತಾರೆ, ಎರಡನೆಯದು ಸತ್ತ ಬಳಿಕ ಎಲ್ಲಿ ಮಣ್ಣಾಗಬೇಕೆಂದು ಮನೆಯವರು ನಿರ್ಧಾರ ಮಾಡುತ್ತಾರೆ. ಈ ಎರಡೂ ವಿಷಯಗಳು ನನಗೆ ಸಂಬಂಧ ಇಲ್ಲ ಎಂದು ಉತ್ತರಿಸಿದರು.
ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಅಂದ ಮೇಲೆ ಕುಮಾರಸ್ವಾಮಿ ಎಲ್ಲಿ ಬೇಕಾದರೂ ನಿಲ್ಲಲಿ. ರಾಮನಗರಕ್ಕೆ ಬಂದರು, ಲೋಕಸಭೆ ಚುನಾವಣೆ ವೇಳೆ ಮಂಡ್ಯದಲ್ಲಿ ನಿಂತು ಗೆದ್ದರು, ಈಗ ಅವರ ಮಗ ಚನ್ನಪಟ್ಟಣದಿಂದ ಸ್ಪರ್ಧಿಸಿದ್ದಾರೆ. ರಾಮನಗರ ನನ್ನ ಕರ್ಮಭೂಮಿ ಅಂತಾರೆ. ನಾನು ಆ ವಿಷಯ ಬಗ್ಗೆ ಚರ್ಚೆ ಮಾಡುವುದಿಲ್ಲ. ಚುನಾವಣಾ ಸಮಯದಲ್ಲಿ ಅಲ್ಲಿ ಮಣ್ಣಾಗುತ್ತೇನೆ, ಇಲ್ಲಿ ಮಣ್ಣಾಗುತ್ತೇನೆ ಎನ್ನುವುದೇಕೆ. ಜನರು ಇದಕ್ಕೆಲ್ಲಾ ಮರುಳಾಗುವುದಿಲ್ಲ ಎಂದರು.ಮೂರು ಕ್ಷೇತ್ರದಲ್ಲಿ ಗೆಲ್ಲುವುದು ನಮ್ಮ ಮುಖ್ಯ ಗುರಿ. ಚುನಾವಣೆ ನನ್ನ ನೇತೃತ್ವದಲ್ಲಿ ನಡೆಯುವುದಿಲ್ಲ. ಡಿ.ಕೆ.ಶಿವಕುಮಾರ್ ಅದರ ನೇತೃತ್ವ ವಹಿಸುತ್ತಾರೆ. ಚುನಾವಣೆ ಜವಾಬ್ದಾರಿ ನಿರ್ವಹಿಸುತ್ತಿರುವ ಸಚಿವರಲ್ಲಿ ನಾನೂ ಒಬ್ಬ. ಅವರು ಕೊಟ್ಟ ಜಾಗದಲ್ಲಿ ಕೆಲಸ ಮಾಡುತ್ತೇನೆ. ನ.3 ರಿಂದ 11ರ ವರೆಗೆ ಪ್ರಚಾರ ಮಾಡುವೆ ಎಂದು ನುಡಿದರು.
ರಾಮನಗರ ನಗರ ಸಭೆಯನ್ನು ಮಹಾನಗರ ಪಾಲಿಕೆ ಮಾಡುವ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಕೇಳಿದಾಗ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದ್ದಾರೆ. ಮಹಾನಗರ ಪಾಲಿಕೆ ಮಾಡುವುದು ರಾಜ್ಯ ಸರ್ಕಾರ. ಕೇಂದ್ರ ಸರ್ಕಾರ ಅಲ್ಲ, ರಾಜ್ಯದಲ್ಲಿ ಅವರು (ಕುಮಾರಸ್ವಾಮಿ) ಮುಖ್ಯಮಂತ್ರಿ ಆದಾಗ ಮಾಡಲಿಲ್ಲ. ಎರಡು ಬಾರಿ ಸಿಎಂ ಆಗಿದ್ದರೂ ಮಾಡಲಿಲ್ಲ. ಈಗ ಮಾಡುತ್ತೇನೆ ಎನ್ನುವುದು ಎಷ್ಟರ ಮಟ್ಟಿಗೆ ಸತ್ಯ?, ಮಹಾನಗರ ಪಾಲಿಕೆ ಮಾಡುವುದಕ್ಕೂ ಮುನ್ನ ರಾಜ್ಯದ ಕ್ಯಾಬಿನೆಟ್ ಮುಂದೆ ಚರ್ಚೆಯಾಗಬೇಕು ಎಂದರು.
ನಾಗಮಂಗಲದಲ್ಲಿ ವಕ್ಫ್ ಕಮಿಟಿ ಪತ್ರ ವಿಚಾರ ಕುರಿತು ಪ್ರತಿಕ್ರಿಯಿಸಿ, ನಮ್ಮಲ್ಲಿ ಕೆಲವು ಸಮಸ್ಯೆ ಇದೆ. ಪುರಾತತ್ವ ಇಲಾಖೆಯಿಂದ ನಾಗಮಂಗಲದಲ್ಲಿ ಅರ್ಧ ಪಟ್ಟಣವನ್ನೇ ಖಾಲಿ ಮಾಡಬೇಕು ಅಂತ ನೋಟಿಸ್ ಬಂದಿದೆ. ಬೆಳ್ಳೂರಿನಲ್ಲೂ ಸಹ ಈ ವಿಷಯ ಬಂದಿದೆ. ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಲಯದಲ್ಲಿ ಹಕ್ಕು ಪಡೆಯುತ್ತೇವೆ. ಜಿಲ್ಲೆಯ ಏಳು ಕ್ಷೇತ್ರದಲ್ಲಿ ಯಾವುದೇ ವಕ್ಫ್ ನೋಟಿಸ್ ಜಾರಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.