ಜಾಹೀರಾತು ಪ್ರದರ್ಶನಕ್ಕೆ ಅನುಮತಿ ಕಡ್ಡಾಯ

KannadaprabhaNewsNetwork | Published : Mar 18, 2024 1:48 AM

ಸಾರಾಂಶ

ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ, ಖಾಸಗಿ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡಲು ಅನುಮತಿ ಪಡೆಯಬೇಕು. ನಾಮಪತ್ರ ಸಲ್ಲಿಕೆವರೆಗೆ ಈ ವೆಚ್ಚವು ಪಕ್ಷದ ಲೆಕ್ಕಕ್ಕೆ ಸೇರಿಸಲಾಗುತ್ತದೆ. ನಾಮಪತ್ರ ಸಲ್ಲಿಕೆಯಾದ ಮೇಲೆ ಅಭ್ಯರ್ಥಿಯ ಲೆಕ್ಕಕ್ಕೆ ಸೇರ್ಪಡೆ ಮಾಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಾರ್ವಜನಿಕವಾಗಿ ಕಾಣುವ ಅಥವಾ ಪ್ರದರ್ಶನಗೊಳ್ಳುವ ಹಾಗೆ ಯಾವುದೇ ರಾಜಕೀಯ ಪ್ರತಿನಿಧಿಗಳ, ಅಭ್ಯರ್ಥಿಗಳ ಛಾಯಾಚಿತ್ರಗಳನ್ನು, ಜಾಹೀರಾತು ವಿವರವುಳ್ಳ ಪ್ರಕಟಣೆಗಳನ್ನು ಖಾಸಗಿ ಕಟ್ಟಡಗಳ ಮೇಲೂ ಅನುಮತಿ ಇಲ್ಲದೆ ಹಾಕುವಂತಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

2024ರ ಲೋಕಸಭೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಾಜಕೀಯ ಪ್ರತಿನಿಧಿಗಳೊಂದಿಗೆ ಭಾನುವಾರ ಸಭೆ ನಡೆಸಿ ಮುಂದಿನ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮಾತನಾಡಿದರು.

₹95 ಲಕ್ಷ ವೆಚ್ಚಕ್ಕೆ ಅವಕಾಶ

ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ, ಖಾಸಗಿ ಸ್ಥಳಗಳಲ್ಲಿ ಚುನಾವಣಾ ಪ್ರಚಾರ, ರಾಜಕೀಯ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಅನುಮತಿ ಪಡೆದು ಮಾಡಬೇಕಾಗಿರುತ್ತದೆ. ನಾಮಪತ್ರ ಸಲ್ಲಿಕೆವರೆಗೆ ಈ ಚುನಾವಣಾ ವೆಚ್ಚವು ಪಕ್ಷದ ಲೆಕ್ಕಕ್ಕೆ ಸೇರಿಸಲಾಗುತ್ತದೆ. ನಾಮಪತ್ರ ಸಲ್ಲಿಕೆಯಾದ ಮೇಲೆ ಅಭ್ಯರ್ಥಿಯ ಲೆಕ್ಕಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ 95 ಲಕ್ಷಗಳವರೆಗೆ ಚುನಾವಣಾ ವೆಚ್ಚ ಮಾಡಲು ಅವಕಾಶವಿರುತ್ತದೆ. ಅದನ್ನು ಮೀರಿ ವೆಚ್ಚ ಮಾಡಿದ ಅಭ್ಯರ್ಥಿಗಳು ಅರ್ನಹಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಚುನಾವಣಾ ಅಧಿಸೂಚನೆ, ನಾಮಪತ್ರ ಸಲ್ಲಿಕೆ, ಹಿಂಪಡೆಯುವಿಕೆ, ಮತದಾನ ದಿನಾಂಕ, ಎಣಿಕೆ ದಿನಾಂಕ ಸೇರಿದಂತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾರರ ವಿವರ, ಮತಗಟ್ಟೆಗಳ ವಿವರ, ಚುನಾವಣಾ ಕರ್ತವ್ಯದ ಸಿಬ್ಬಂದಿ ವಿವರದ ಸಂಪೂರ್ಣ ವಿವರವನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದರು.

ಅಭ್ಯರ್ಥಿ ಆಮಿಷ ಒಡ್ಡಿದರೆ ಕ್ರಮ

ಚುನಾವಣಾ ಸಂದರ್ಭದಲ್ಲಿ ಯಾವುದೇ ಅಭ್ಯರ್ಥಿಗಳು ಮತದಾರರಿಗೆ ಆಮಿಷ ವೊಡ್ಡುವ ವಸ್ತುಗಳನ್ನು ವಿತರಿಸುವುದು ಕಂಡುಬಂದಲ್ಲಿ ಅಥವಾ ಚುನಾವಣೆಗೆ ಸಂಬಂಧಿಸಿದ ಇತರ ದೂರುಗಳಿದ್ದಲ್ಲಿ ಸಾರ್ವಜನಿಕರು ಸಿ ವಿಜಿಲ್ ಆ್ಯಪ್ ಮುಖಾಂತರ ದೂರು ಸಲ್ಲಿಸಿದರೆ 100 ನಿಮಿಷಗಳ ಒಳಗಡೆ ಕ್ರಮವಹಿಸಲಾಗುವುದು. ಅಲ್ಲದೆ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಹಾಗೂ ಮತದಾರರ ನೋಂದಣಿಗೆ ಸಂಬಂಧಿಸಿದಂತ ವೋಟರ್ ಹೆಲ್ಪ್ ಲೈನ್ ಮೂಲಕ ಸಂಪರ್ಕಿಸಬಹುದು. ಜೊತೆಗೆ ಟೋಲ್ ಫ್ರೀ ನಂ. 1950 ಕರೆ ಮಾಡಿ ತಿಳಿಸಬಹುದು ಎಂದರು.

ಚುನಾವಣೆಗೆ ಸಂಬಂಧ ಪಟ್ಟಂತೆ ಸಭೆ ಸಮಾರಂಭ, ಮೆರವಣಿಗೆ ಇನ್ನಿತರ ಅನುಮತಿಗೆ ಏಕಗವಾಕ್ಷಿ ಪದ್ಧತಿ ಮೂಲಕ ಕ್ರಮವಹಿಸಲಾಗಿದ್ದು, ಸುವಿಧಾ ಆ್ಯಪ್ ಮುಖಾಂತರ ಅನುಮತಿಗೆ ಅರ್ಜಿ ಸಲ್ಲಿಸಬಹುದು. ವಿಶೇಷ ಚೇತನರು ಮನೆ ಮತದಾನಕ್ಕಾಗಿ ಸಕ್ಷಮ ಆ್ಯಪ್ ಮೂಲಕ ನೋಂದಣಿಯಾಗಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯಲೆಕ್ಕಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ವೆಚ್ಚ ಅಧಿಕಾರಿ ಹರೀಶ್, ಚುನಾವಣಾ ತಹಸೀಲ್ದಾರ್ ಮುನಿಶಾಮಿರೆಡ್ಡಿ, ಬಹುಜನ ಸಮಾಜ ಪಕ್ಷದ ಪ್ರತಿನಿಧಿ ಸಿ.ಕಾಂತರಾಜು,ಭಾರತೀಯ ಜನತಾ ಪಕ್ಷದ ಪ್ರತಿನಿಧಿ ಲಕ್ಷ್ಮೀ ನಾರಾಯಣ ಗುಪ್ತ, ಭಾರತ ಕಮ್ಯೂನೀಸ್ಟ್ ಪಕ್ಷದ ಪ್ರತಿನಿಧಿ ಬಿ.ಎನ್. ಮುನಿಕೃಷ್ಣಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಪ್ರತಿನಿಧಿ ಮಧುಸೂಧನ್, ಜಾತ್ಯಾತೀತ ಜನತಾದಳ ಪಕ್ಷದ ಪ್ರತಿನಿಧಿ ನಾರಾಯಣಸ್ವಾಮಿ, ಆಮ್ ಆದ್ಮಿ ಪಕ್ಷದ ಪ್ರತಿನಿಧಿ ನಂದಿ ಭಾಷಾ ಮತ್ತಿತರರು ಇದ್ದರು.

Share this article