ಪ್ಲೀಸ್‌, ಸಿಎಂ ಬದಲಾವಣೆ ವಿಚಾರ ಕೇಳ್ಬೇಡಿ: ಸತೀಶ್‌

KannadaprabhaNewsNetwork |  
Published : Sep 10, 2024, 01:43 AM IST
ಸತೀಶ್‌ ಜಾರಕಿಹೊಳಿ  | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ವಿಚಾರವಾಗಿ ನನ್ನ ಬಳಿ ಪ್ರಶ್ನೆಗಳನ್ನು ಕೇಳಬೇಡಿ ಎಂದು ಮಾಧ್ಯಮದವರ ಬಳಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಿಮಗೆ ಕೈ ಮುಗಿಯುತ್ತೇನೆ. ದಯವಿಟ್ಟು ಮುಖ್ಯಮಂತ್ರಿ ಬದಲಾವಣೆ ವಿಚಾರ ಬಿಟ್ಟು ಬೇರೆ ವಿಷಯ ಕೇಳಿ ಪ್ಲೀಸ್‌ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸುದ್ದಿಗಾರರಲ್ಲಿ ಮನವಿ ಮಾಡಿದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸೋಮವಾರ ಮಾಧ್ಯಮದವರು ಮುಖ್ಯಮಂತ್ರಿ ಬದಲಾವಣೆ ವಿಚಾರ ಕುರಿತು ಪ್ರಸ್ತಾಪಿಸುತ್ತಿದ್ದಂತೆ ಪ್ಲೀಸ್‌ ಮುಖ್ಯಮಂತ್ರಿ ವಿಚಾರ ಬಿಟ್ಟು ಬೇರೆ ಅಭಿವೃದ್ಧಿ ವಿಚಾರವಾಗಿ ಕೇಳಿ. ನಾವಾದರೂ ಎಷ್ಟು ಬಾರಿ ಹೇಳುವುದು? ನಿಮಗೆ ಕೈ ಮುಗಿಯುತ್ತೇನೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಬಿಟ್ಟು ಬೇರೆ ಪ್ರಶ್ನೆ ಕೇಳಿ ಎಂದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದೀಪಾವಳಿ ಹಬ್ಬದೊಳಗೆ ಪತನವಾಗುತ್ತದೆ ಎಂದು ಬಿಜೆಪಿಯ ಸಿ.ಟಿ.ರವಿ ಹೇಳಿದಾಕ್ಷಣ, ಸರ್ಕಾರ ಬಿದ್ದು ಬಿಡುತ್ತದೆಯೇ ಎಂದು ಪ್ರಶ್ನಿಸಿದ ಅವರು, ಅವರು ಹೇಳಿರುವುದನ್ನು ತೆಗೆದುಕೊಂಡು ನಾನೇನು ಮಾಡಲಿ. ನಿತ್ಯ ನೂರು ಜನರು ನೂರು ತರಹದ ಹೇಳಿಕೆ ಕೊಡುತ್ತಾರೆ. ರವಿ ಹೇಳಿದನೋ ಇಲ್ಲವೆ ಮತ್ತ್ಯಾ ರೋ ಹೇಳಿದರೊ ಅದನ್ನು ತೆಗೆದುಕೊಂಡು ನಾನೇನ್‌ ಮಾಡಲಿ ಎಂದರು.

ಬರೀ ಮುಖ್ಯಮಂತ್ರಿ, ಮುಖ್ಯಮಂತ್ರಿ ಎನ್ನುತ್ತಿದ್ದರೆ ಇವರಿಗೇನು ಕೆಲಸ ಇಲ್ಲವೇ ಎಂದು ಜನ ನಮಗೆ ಉಗುಳುತ್ತಾರೆ. ಮುಖ್ಯಮಂತ್ರಿ ಅಭಿಯಾನ ಅಂತ ನಾವ್ಯಾರೂ ಶುರು ಮಾಡಿಲ್ಲ. ಮುಖ್ಯಮಂತ್ರಿ ಮಾಡುವುದು ಪಕ್ಷ, ಶಾಸಕರು ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ಕುರಿತು ಪ್ರತಿಕ್ರಿಯಿಸಿ, ಅದು ಬೇರೆ ವಿಚಾರಕ್ಕೆ ರಾಹುಲ್ ಗಾಂಧಿ ಭೇಟಿಗೆ ಹೋಗಿದ್ದೆ. ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ ಎಂದು ಪುನರುಚ್ಚರಿಸಿದರು.

ಅಲ್ಲಿ ಹೇಳಿದ್ದನ್ನು ಇಲ್ಲಿ ಕೇಳುತ್ತೀರಿ. ಇಲ್ಲಿ ಹೇಳಿದ್ದನ್ನು ಅಲ್ಲಿ ಕೇಳುತ್ತೀರಿ. ಅದು ನಮಗೆ ಸಂಬಂಧ ಪಟ್ಟಿದ್ದಲ್ಲ. ಒಬ್ಬರು ಹೇಳಿದರೆ ಸರ್ಕಾರ ಬೀಳುತ್ತದೆಯೇ ಎಂದು ಮರುಪ್ರಶ್ನಿಸಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ