ಕನ್ನಡಪ್ರಭವಾರ್ತೆ ನಾಗಮಂಗಲ
ಪ್ರತಿ ಐದು ವರ್ಷಕ್ಕೊಮ್ಮೆ ಜನರನ್ನು ಯಾವ ರೀತಿ ಓಲೈಸಿಕೊಂಡು ಚುನಾವಣೆಯಲ್ಲಿ ಗೆಲ್ಲಬಹುದೆಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ತಂತ್ರಗಾರಿಕೆ ಮಾಡುತ್ತಿದ್ದಾರೆಯೇ ಹೊರತು, ರಾಷ್ಟ್ರದಲ್ಲಿ ಜನರ ಬದುಕನ್ನು ಸುಸ್ಥಿರತೆಗೆ ತರುವ ಕೆಲವನ್ನು ಮಾಡುತ್ತಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ದೂರಿದರು.ತಾಲೂಕಿನ ಆದಿಚುಂಚನಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಒಂದು ಮನೆ, ಕಟ್ಟಡ ಅಥವಾ ದೇವಸ್ಥಾನವಾದರೂ ಸಹ ಅಪೂರ್ಣವಾಗಿರುವುದನ್ನು ಉದ್ಘಾಟಿಸಲು ಯಾರೂ ಸಹ ಒಪ್ಪುವುದಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಿರುವುದಕ್ಕೆ ಇಡೀ ರಾಷ್ಟ್ರದ ಜನತೆ ಅಭಿನಂದಿಸುತ್ತಿದೆ. ನಮಗೂ ಸಂತೋಷವಿದೆ. ಆದರೆ, ಆ ಶ್ರೀರಾಮಮಂದಿರದ ಉದ್ಘಾಟನೆಯನ್ನು ಲೋಕಸಭೆ ಚುನಾವಣೆಗೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಮಂದಿರ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿದರು.
ಶಂಕರಾಚಾರ್ಯರ ನಾಲ್ಕು ಪೀಠಗಳಲ್ಲಿ ಎರಡು ಪೀಠಗಳು ಶ್ರೀರಾಮ ಮಂದಿರ ಉದ್ಘಾಟನೆಗೆ ಅಸಮಾಧಾನ ವ್ಯಕ್ತಪಡಿಸಿವೆ. ಒಂದೊಂದು ಚುನಾವಣೆ ಸಂದರ್ಭದಲ್ಲಿ ಏನಾದರೊಂದು ವಿವಾದ ಸೃಷ್ಟಿಸಿ ಆ ವಿವಾದವನ್ನು ಎರಡು ತಿಂಗಳಲ್ಲಿ ದೇಶದ ಮುಗ್ಧ ರೈತರು ಮತ್ತು ಸಾರ್ವಜನಿಕರನ್ನು ಸೆಳೆದು ಅಧಿಕಾರಕ್ಕೆ ಬರುವ ಚಾಣಾಕ್ಷತನದ ತಂತ್ರಗಾರಿಕೆ ಉಪಯೋಗಿಸುತ್ತಾರೆ ಎಂದು ಪ್ರಧಾನಿ ಮೋದಿ ಅವರನ್ನು ಟೀಕಿಸಿದರು.ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಸಚಿವರು ಸ್ಪರ್ಧೆಗೆ ಹಿಂದೇಟು ಹಾಕುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ಪರ್ಧೆಗೆ ಯಾರೂ ಸಹ ಹಿಂದೇಟು ಹಾಕುವ ಹಾಗಿಲ್ಲ. ಸೂಕ್ತವಾದ ಅಭ್ಯರ್ಥಿ ಬಗ್ಗೆ ಸಮೀಕ್ಷೆ ನಡೆಯುತ್ತಿದ್ದು, ಆಯಾ ಜಿಲ್ಲಾ ಉಸ್ತುವಾರಿ, ಶಾಸಕರಿಗೆ ಮೊದಲ ಆದ್ಯತೆ ನೀಡಲಾಗಿದೆ. ಇದೇ ತಿಂಗಳ 15ರಿಂದ10ರೊಳಗೆ ಸಮೀಕ್ಷೆ ಪೂರ್ಣಗೊಳ್ಳಲಿದೆ. ಮಾಸಾಂತ್ಯದೊಳಗೆ ಹೈಕಮಾಂಡ್‌ಗೆ ಅಂತಿಮ ಪಟ್ಟಿ ತಲುಪಲಿದೆ ಎಂದರು.
ಕಾಂಗ್ರೆಸ್‌ನಲ್ಲಿ ಐದು ಮಂದಿ ಡಿಸಿಎಂ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಪಕ್ಷದ ಹೈಕಮಾಂಡ್ ಖಡಕ್ ಎಚ್ಚರಿಕೆ ಕೊಟ್ಟಿದೆ. ಚುನಾವಣೆ ಸಂದರ್ಭದಲ್ಲಿ ಯಾರೂ ಸಹ ಡಿಸಿಎಂ ವಿಚಾರ ಚರ್ಚಿಸದಂತೆ ಎಐಸಿಸಿ ಅಧ್ಯಕ್ಷರು ಖಡಕ್ ಸೂಚನೆ ನೀಡಿದ್ದಾರೆ. ಹಾಗಾಗಿ ಈ ವಿಚಾರವೂ ಕೂಡ ಅನಾವಶ್ಯಕ ಎಂದರು.ಕೆಆರ್‌ಎಸ್ ಜಲಾಶಯಕ್ಕೆ ಕೇಂದ್ರದ ಜಲಮಂಡಳಿ ಅಧಿಕಾರಿಗಳ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಆರ್‌ಎಸ್‌ನಲ್ಲಿ ಕಾಮಗಾರಿ ನಡೆಯುತ್ತಿದೆ. ಎರಡನೇ ಅವಧಿಯ ಟೆಂಡರ್ ಪ್ರಕ್ರಿಯೆ ಸಂಬಂಧ ಕೇಂದ್ರದ ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ. ಜೆಡಿಎಸ್, ಬಿಜೆಪಿ ಅಥವಾ ಕಾಂಗ್ರೆಸ್‌ನವರಿಂದಾಗಲಿ ಅವರು ಬಂದಿಲ್ಲ ಎಂದ ಅವರು, ರಾಜ್ಯದ ಅಧಿಕಾರಿಗಳ ಮೂಲಕ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ, ಸ್ಥಳೀಯ ಶಾಸಕರು ಅಥವಾ ಸಂಸದರೊಂದಿಗೆ ಚರ್ಚೆ ನಡೆಸಿದ್ದರೆ ಎಲ್ಲವೂ ಸರಿಹೋಗುತ್ತಿತ್ತು. ಯಾವುದೇ ವಿಚಾರ ಮುಟ್ಟಿಸದೆ ನೇರವಾಗಿ ಬಂದಿರುವಾಗ ಅವರಿಗೆ ಬೇರೊಂದು ಕಾರ್ಯಕ್ರಮ ನಿಗದಿಯಾಗಿರಬಹುದು ಎಂದರು.