ವಂದೇಮಾತರಂಗೆ ಕತ್ತರಿ ಹಾಕಿದ್ದೇ ಕಾಂಗ್ರೆಸ್‌: ಮೋದಿ

Published : Dec 09, 2025, 05:55 AM IST
PM Modi

ಸಾರಾಂಶ

‘ಬಂಕಿಮಚಂದ್ರ ಚಟ್ಟೋಪಾಧ್ಯಾಯರು ಬರೆದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧ ಬಂಡೆಯಂತೆ ನಿಂತು, ಏಕತೆಯನ್ನು ಪ್ರೇರೇಪಿಸಿತು.  ಮೊಹಮ್ಮದ್ ಅಲಿ ಜಿನ್ನಾ ಮತ್ತು ಮುಸ್ಲಿಮರನ್ನು ಓಲೈಸುವ ಉದ್ದೇಶದಿಂದ ಕಾಂಗ್ರೆಸ್‌, ನೆಹರು, ಈ ಗೀತೆಯನ್ನು ತುಂಡು ತುಂಡಾಗಿ ಕತ್ತರಿಸಿದರು.

  ನವದೆಹಲಿ :  ‘ಬಂಕಿಮಚಂದ್ರ ಚಟ್ಟೋಪಾಧ್ಯಾಯರು ಬರೆದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧ ಬಂಡೆಯಂತೆ ನಿಂತು, ಏಕತೆಯನ್ನು ಪ್ರೇರೇಪಿಸಿತು. ಆದರೆ ಮೊಹಮ್ಮದ್ ಅಲಿ ಜಿನ್ನಾ ಮತ್ತು ಮುಸ್ಲಿಮರನ್ನು ಓಲೈಸುವ ಉದ್ದೇಶದಿಂದ ಕಾಂಗ್ರೆಸ್‌ ಹಾಗೂ ನೆಹರು, ಈ ಗೀತೆಯನ್ನು ತುಂಡು ತುಂಡಾಗಿ ಕತ್ತರಿಸಿದರು. ಅದಕ್ಕೆ ಸಾಮಾಜಿಕ ಸಾಮರಸ್ಯದ ವೇಷ ತೊಡಿಸಿದರು’ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದರು.

‘ವಂದೇ ಮಾತರಂ’ ರಚನೆಯಾಗಿ 150 ವರ್ಷಗಳು ಪೂರ್ಣಗೊಂಡ ಹಿನ್ನೆಲೆ, ಲೋಕಸಭೆಯಲ್ಲಿ ಈ ಕುರಿತು ನಡೆದ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ಪಕ್ಷ ತುಷ್ಟೀಕರಣದ ರಾಜಕಾರಣ ನಡೆಸುತ್ತಿತ್ತು. ಹಾಗಾಗಿ ಮುಸ್ಲಿಮರ ಒತ್ತಡಕ್ಕೆ ಮಣಿದು, ರಾಷ್ಟ್ರೀಯ ಗೀತೆಯನ್ನು ತುಂಡಾಗಿಸಲು ಒಪ್ಪಿತು. ಇದೇ ಮುಂದೆ ದೇಶವಿಭಜನೆಗೂ ನಾಂದಿ ಹಾಡಿತು’ ಎಂದು ಕಿಡಿ ಕಾರಿದರು.

ನೆಹರೂರಿಂದ ಮುಸ್ಲಿಂ ಓಲೈಕೆ:

ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರು ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿದ ಮೋದಿ, ‘ವಂದೇ ಮಾತರಂ ವಿರುದ್ಧ ಜಿನ್ನಾ ಲಖನೌನಲ್ಲಿ ಪ್ರತಿಭಟನೆ ನಡೆಸಿದರು. ಅದರ ಬೆನ್ನಲ್ಲೇ ನೇತಾಜಿಗೆ ಪತ್ರ ಬರೆದ ನೆಹರೂ, ಈ ಗೀತೆಯಲ್ಲಿ ಮುಸ್ಲಿಮರನ್ನು ವಿರೋಧಿಸುವ ಸಾಲುಗಳಿವೆ. ಇದು ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಬಹುದು. ಹಾಗಾಗಿ ಅದನ್ನು ಬದಲಾಯಿಸಬೇಕು ಎಂದು ಉಲ್ಲೇಖಿಸಿದ್ದರು. ಮುಂದೆ ಜಿನ್ನಾ ಮತ್ತು ಮುಸ್ಲಿಂ ಲೀಗ್‌ ಮುಂದೆ ಕಾಂಗ್ರೆಸ್‌ ಮಂಡಿಯೂರಿತು. ವಂದೇ ಮಾತರಂ ಅನ್ನು ಕತ್ತರಿಸಲು ಮುಂದಾಯಿತು. ಇದೇ ಕಾರಣದಿಂದಲೇ ದೇಶವಿಭಜನೆಗೂ ಕಾಂಗ್ರೆಸ್‌ ಒಪ್ಪಿಕೊಂಡಿತು’ ಎಂದು ಕುಟುಕಿದರು.

ಗಾಂಧೀಜಿಯೇ ಗೀತೆ ಮೆಚ್ಚಿದ್ದರು:

‘ವಂದೇ ಮಾತರಂ ಬಹಳ ಪ್ರಖ್ಯಾತವಾಗಿದ್ದು, ರಾಷ್ಟ್ರಗೀತೆಯಾಗಿ ಹೊರಹೊಮ್ಮಿದೆ ಎಂದು 1905ರಲ್ಲಿ ಮಹಾತ್ಮ ಗಾಂಧೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಅಂಥ ಗೀತೆಗೆ ಏಕೆ ಅನ್ಯಾಯವಾಯಿತೋ ತಿಳಿಯದು. ವಂದೇ ಮಾತರಂ ಕುರಿತು ಗಾಂಧೀಜಿಯವರ ಆಶಯವನ್ನೇ ಧಿಕ್ಕರಿಸುವಷ್ಟು ಸಾಮರ್ಥ್ಯ ಹೊಂದಿದ್ದ ಆ ಶಕ್ತಿಗಳು ಯಾವುವು?’ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಚಾಟಿ ಬೀಸಿದರು.

ಬಂಕಿಮರ ತವರಲ್ಲೇ ಗೀತೆಗೆ ಅವಮಾನ:

ಮುಸ್ಲಿಂ ಲೀಗ್‌ನ ಆಧಾರರಹಿತ ಹೇಳಿಕೆಗಳನ್ನು ದೃಢವಾಗಿ ವಿರೋಧಿಸುವ ಮತ್ತು ಅವುಗಳನ್ನು ಖಂಡಿಸುವ ಬದಲು, ಆಗಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜವಾಹರಲಾಲ್ ನೆಹರು ಅವರು ವಂದೇ ಮಾತರಂ ಅನ್ನೇ ಪ್ರಶ್ನಿಸಲು ಪ್ರಾರಂಭಿಸಿದರು. 1937ರಲ್ಲಿ ಕೋಲ್ಕತಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಅಧಿವೇಶನದಲ್ಲಿ ವಂದೇ ಮಾತರಂನ ಮೌಲ್ಯ ಪರಿಶೀಲನೆಗೆ ಒಳಗಾಯಿತು. ಬಂಕಿಮಚಂದ್ರರ ತವರು ನೆಲದಲ್ಲೇ ಈ ಘಟನೆ ನಡೆದದ್ದು ದೇಶವನ್ನು ಆಘಾತಕ್ಕೀಡು ಮಾಡಿತು ಮತ್ತು ದೇಶಭಕ್ತರು ಕಾಂಗ್ರೆಸ್ ನಿರ್ಧಾರದ ವಿರುದ್ಧ ಮೆರವಣಿಗೆಗಳನ್ನು ನಡೆಸಲು ಪ್ರೇರೇಪಿಸಿತು. ದುರದೃಷ್ಟವಶಾತ್, 1937ರ ಅ.26ರಂದು, ಕಾಂಗ್ರೆಸ್ ವಂದೇ ಮಾತರಂ ಅನ್ನು ವಿಭಜಿಸಿತು’ ಎಂದು ಮೋದಿ ಅಸಮಾಧಾನ ವ್ಯಕ್ತಪಡಿಸಿದರು.

ಇಂದಿರಾ ವಿರುದ್ಧ ವಾಗ್ದಾಳಿ:

ಇದೇ ವೇಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ಮೆಲುಕು ಹಾಕಿದರು. ‘ವಂದೇ ಮಾತರಂಗೆ 100 ವರ್ಷಗಳಾದಾಗ ತುರ್ತುಪರಿಸ್ಥಿತಿಯಿಂದ ದೇಶವನ್ನು ಬಂಧಿಸಲಾಗಿತ್ತು. ಆ ಸಮಯದಲ್ಲಿ ಸಂವಿಧಾನದ ಕತ್ತನ್ನು ಕತ್ತರಿಸಲಾಯಿತು. ದೇಶಭಕ್ತರನ್ನು ಕಂಬಿಗಳ ಹಿಂದೆ ದೂಡಲಾಯಿತು. ನಮ್ಮ ಇತಿಹಾಸದಲ್ಲಿಯೇ ತುರ್ತುಪರಿಸ್ಥಿತಿ ಅತ್ಯಂತ ಕರಾಳ ಅಧ್ಯಾಯ. ಈಗ ವಂದೇ ಮಾತರಂನ ಶ್ರೇಷ್ಠತೆಯನ್ನು ಮರುಸ್ಥಾಪಿಸುವ ಅವಕಾಶ ನಮಗೆ ದೊರೆತಿದೆ. ಈ ಅವಕಾಶವನ್ನು ಕಳೆದುಕೊಳ್ಳಬಾರದು’ ಎಂದು ಕರೆ ನೀಡಿದರು.

ಬ್ರಿಟಿಷರ ವಿರುದ್ಧ ಬಂಡೆಯಾಗಿ ನಿಂತ ಗೀತೆ:

‘1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ವಂದೇ ಮಾತರಂ ಗೀತೆಯ ರಚನೆಯಾಯಿತು. ಬ್ರಿಟಿಷ್ ಸರ್ಕಾರ ಗಾಬರಿಗೊಂಡು ವಿವಿಧ ರೀತಿಯ ದಬ್ಬಾಳಿಕೆಯನ್ನು ಆರಂಭಿಸಿತು. ‘ಗಾಡ್ ಸೇವ್ ದಿ ಕ್ವೀನ್’ ಎಂಬ ಬ್ರಿಟಿಷ್ ರಾಷ್ಟ್ರಗೀತೆಯನ್ನು ಪ್ರತಿ ಮನೆಯಲ್ಲೂ ಅಳವಡಿಸುವ ಅಭಿಯಾನ ನಡೆಯುತ್ತಿತ್ತು. ಆಗ ಬಂಕಿಮಚಂದ್ರ ಚಟ್ಟೋಪಾಧ್ಯಾಯರು ವಂದೇ ಮಾತರಂ ರಚಿಸುವ ಮೂಲಕ ದೊಡ್ಡ ಶಕ್ತಿ ಮತ್ತು ದೃಢನಿಶ್ಚಯದಿಂದ ಈ ಸವಾಲಿಗೆ ಉತ್ತರ ಕೊಟ್ಟರು. ಬ್ರಿಟಿಷರು 1905ರಲ್ಲಿ ಬಂಗಾಳವನ್ನು ವಿಭಜಿಸಿದರು. ಆದರೆ ವಂದೇ ಮಾತರಂ ಬಂಡೆಯಂತೆ ನಿಂತು, ಏಕತೆಗೆ ಪ್ರೇರಣೆ ನೀಡಿತು. ಈ ಗೀತೆಗೆ ಹೆದರಿದ ಬ್ರಿಟಿಷರು ಅದರ ಮುದ್ರಣ ಮತ್ತು ಪ್ರಸಾರವನ್ನು ತಡೆಯಲು ಕಾನೂನು ತರಬೇಕಾಯಿತು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವಂದೇ ಮಾತರಂ ಮಂತ್ರವು ಇಡೀ ದೇಶಕ್ಕೆ ಶಕ್ತಿ ಮತ್ತು ಸ್ಫೂರ್ತಿಯನ್ನು ನೀಡಿತು’ ಎಂದು ಮೋದಿ ತಿಳಿಸಿದರು.

ಮೋದಿ ಹೇಳಿದ್ದೇನು?

- ಬ್ರಿಟಿಷರ ವಿರುದ್ಧ ಬಂಡೆಯಂತೆ ನಿಂತಿದ್ದೇ ವಂದೇ ಮಾತರಂ ಗೀತೆ

- ಆದರೆ ಗಾಂಧೀಜಿ ಮಾತು ಧಿಕ್ಕರಿಸಿ ವಂದೇಮಾತರಂ ತುಂಡು

- ಜಿನ್ನಾ ವಿರುದ್ಧ ಮಂಡಿಯೂರಿದ ನೆಹರು: ಕಾಂಗ್ರೆಸ್‌ಗೆ ಚಾಟಿ

- ತುರ್ತುಪರಿಸ್ಥಿತಿ ಈ ದೇಶ ಕಂಡ ಕರಾಳ ಅಧ್ಯಾಯ: ಆಕ್ರೋಶ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌